Pranitha Subhash: ವಿಐಪಿ ರಾಜಕಾರಣಿಗಳ ಸಂಚಾರಕ್ಕೆ ರಸ್ತೆ ಬಂದ್, ಇದಕ್ಕೇ ದೇಶ ಮುಂದೆ ಹೋಗ್ತಿಲ್ಲ: ನಟಿ ಪ್ರಣಿತಾ
ಮೊದಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವ ಬೆಂಗಳೂರಿನ ಮಂದಿಗೆ ವಿಐಪಿ ರಾಜಕಾರಣಿಗಳ ಕಾಟ ಹೊಸದೇನಲ್ಲ. ಇನ್ನು ಯಾರಾದರೂ ವಿಐಪಿ ಬಂದರೆ ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಗಂಟೆಗಟ್ಟಲೆ ಬಂದ್ ಮಾಡುತ್ತಾರೆ. ಇದರಿಂದ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ತಮ್ಮ ಕೆಲಸಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಪೊಲೀಸರು ಈ ರೀತಿ ರಸ್ತೆ ಸಂಚಾರ ನಿರ್ಬಂಧಿಸಿದಾಗ ಸಾರ್ವಜನಿಕರು ಹಿಡಿಶಾಪ ಹಾಕುತ್ತಾರೆ. ಇದೇ ಬಿಸಿ ಈಗ ಸೆಲೆಬ್ರಿಟಿಯಾಗಿರುವ ನಟಿ ಪ್ರಣಿತಾ ಸುಭಾಷ್ ಅವರಿಗೂ ತಟ್ಟಿದೆ. ಬೆಂಗಳೂರಿನಲ್ಲಿ ಇಂದು ವಿಐಪಿ ಸಂಚಾರದ ಹಿನ್ನೆಲೆಯಲ್ಲಿ ರಸ್ತೆಗಳನ್ನು ಬಂದ್ ಮಾಡುವ ವಿಚಾರಕ್ಕೆ ಸಂಬಂಧಿಸಿ ನಟಿ ಪ್ರಣಿತಾ ಅಸಮಾಧಾನ ಹೊರಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ವಿಐಪಿ ಸಂಚಾರದ ಹಿನ್ನೆಲೆ ಪೊಲೀಸರು ಕೆಲ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಂಚಾರ ನಿರ್ಬಂಧಿಸಿದ್ದರು. ನಗರದಲ್ಲಿ ವಿಐಪಿ ಸಂಚಾರದ ಹಿನ್ನೆಲೆ ರಸ್ತೆಗಳನ್ನು ಬಂದ್ ಮಾಡುವ ವಿಚಾರಕ್ಕೆ ಸಂಬಂಧಿಸಿ ನಟಿ ಪ್ರಣಿತಾ ಸುಭಾಷ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದ ಕೇಂದ್ರ ಹಾಗೂ ಕೋರಮಂಗಲ ಕಡೆಗೆ ಹೋಗುವ ಪ್ರಮುಖ ರಸ್ತೆಗಳನ್ನು ವಿಐಪಿ ಸಂಚಾರಕ್ಕಾಗಿ ಬಂದ್ ಮಾಡಿರುವುದು ಸಾಮಾನ್ಯ ನಾಗರಿಕರಿಗೆ ಭಾರೀ ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಐಪಿ ಸಂಸ್ಕೃತಿಯಿಂದ ಸಮಸ್ಯೆಯೇ ಹೆಚ್ಚು
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಣಿತಾ, "ಇದು ನಿಜಕ್ಕೂ ಬೇಸರದ ಸಂಗತಿ. ನಗರದ ಕೇಂದ್ರ ಮತ್ತು ಕೋರಮಂಗಲ ಕಡೆಗೆ ಹೋಗುವ ರಸ್ತೆಗಳು ಯಾವುದೋ ರಾಜಕಾರಣಿಯ ವಿಐಪಿ ಸಂಚಾರಕ್ಕಾಗಿ ಬಂದ್ ಆಗಿವೆ. ಇದರಿಂದ ಸಾಮಾನ್ಯ ಜನರಿಗೆ ಸಮಸ್ಯೆಗಳು ಎದುರಾಗುತ್ತಿವೆ. ಇದೇ ಕಾರಣಕ್ಕೆ ಭಾರತ ಮುಂದಕ್ಕೆ ಹೋಗುತ್ತಿಲ್ಲ. ರಾಜಕಾರಣಿಗಳು ಮತ್ತು ಅವರ ವಿಐಪಿ ಜೀವನಶೈಲಿಯು ದೇಶದ ಬೆಳವಣಿಗೆಗೆ ಸಹಾಯ ಮಾಡುವುದಕ್ಕಿಂತ ಸಮಸ್ಯೆಗಳನ್ನೇ ಹೆಚ್ಚು ಸೃಷ್ಟಿಸುತ್ತಿದೆ" ಎಂದು ಕಿಡಿಕಾರಿದ್ದಾರೆ.
ನಟಿ ಪ್ರಣಿತಾ ಅವರ ಈ ಹೇಳಿಕೆಯು ಬೆಂಗಳೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ವಿಐಪಿ ಸಂಚಾರ ನಿರ್ಬಂಧಗಳ ಬಗ್ಗೆ ಸಾರ್ವಜನಿಕರಲ್ಲಿರುವ ಅಸಮಾಧಾನಕ್ಕೆ ಧ್ವನಿಯಾಗಿದೆ. ಕೆಲಸಕ್ಕೆ ಹೋಗುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳನ್ನು ಕರೆದೊಯ್ಯುವ ಆಂಬ್ಯುಲೆನ್ಸ್‌ಗಳು ಸಹ ವಿಐಪಿ ಸಂಚಾರದ ವೇಳೆ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವ ಪರಿಸ್ಥಿತಿ ಎದುರಿಸುತ್ತಿರುವುದು ನಗರದ ಪ್ರತಿನಿತ್ಯದ ಸಮಸ್ಯೆಯಾಗಿದೆ.
This is frustrating ! Roads enroute city centre and Koramangala blocked causing a lot of issues for all the civilians just for some
— Pranitha Subhash (@pranitasubhash) January 13, 2026
VIP movement of some politician! This is exactly why India will never get anywhere . Politicians and their VIP lives are only there cause more…
ಸಾಮಾಜಿಕ ಜಾಲತಾಣಗಳಲ್ಲಿ ಪ್ರಣಿತಾ ಅವರ ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು "ಸಾಮಾನ್ಯ ಜನರ ಸಮಯಕ್ಕೆ ಬೆಲೆ ಇಲ್ಲವೇ?", "ವಿಐಪಿ ಸಂಸ್ಕೃತಿಗೆ ಅಂತ್ಯ ಯಾವಾಗ?" ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು ನಟಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ರಾಜಕೀಯ ವ್ಯವಸ್ಥೆಯ ಮೇಲಿನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ಹಲವು ಕಲಾವಿದರು, ಉದ್ಯಮಿಗಳು ಮತ್ತು ಸಾರ್ವಜನಿಕರು ವಿಐಪಿ ಸಂಚಾರದಿಂದಾಗುವ ತೊಂದರೆಗಳ ಬಗ್ಗೆ ಪ್ರಶ್ನೆ ಎತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಪ್ರಣಿತಾ ಸುಭಾಷ್ ಅವರ ಈ ಪ್ರತಿಕ್ರಿಯೆ ಮತ್ತೊಮ್ಮೆ ವಿಐಪಿ ಸಂಸ್ಕೃತಿ ವಿರುದ್ಧದ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದು, ಮುಂದಿನ ದಿನಗಳಲ್ಲಿ ಆಡಳಿತ ಯಂತ್ರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications