SIIMA Awards 2024: ಕನ್ನಡ ಚಿತ್ರರಂಗದ ಯಾರಿಗೆಲ್ಲ ಸಿಕ್ಕಿದೆ ಪ್ರಶಸ್ತಿ?
2024ನೇ ಸಾಲಿನ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರಧಾನ ಕಾರ್ಯಕ್ರಮ ನಿನ್ನೆ ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ನಿನ್ನೆ ಮೊದಲ ದಿನವೇ ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಈ ಬಾರಿ ಸೈಮಾದಲ್ಲಿ ಕನ್ನಡ ಚಿತ್ರರಂಗಕ್ಕೆ ಹೆಚ್ಚು ಪ್ರಶಸ್ತಿಗಳು ಮುಡಿಗೇರಿವೆ. ತೆಲುಗು ಸಿನಿಮಾಗಳ ವಿಭಾಗಗಳಲ್ಲೂ ನಮ್ಮ ಕನ್ನಡ ಕಲಾವಿದರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ನಟ ರಕ್ಷಿತ್ ಶೆಟ್ಟ ಅಭಿನಯದ ʼಸಪ್ತಸಾಗರದಾಚೆ ಎಲ್ಲೋ-ಸೈಡ್ ಎʼ ಹಾಗೂ ನಟ ದರ್ಶನ್ ಅಭಿನಯದ ʼಕಾಟೇರʼ ಸಿನಿಮಾಗಳು ಈ ಸೈಮಾದಲ್ಲಿ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ಈ ಎರಡೂ ಸಿನಿಮಾಗಳಲ್ಲಿ ಹಲವರಿಗೆ ಪ್ರಶಸ್ತಿ ಸಿಕ್ಕಿದೆ.

ʼಸಪ್ತಸಾಗರದಾಚೆ ಎಲ್ಲೋ ಸೈಡ್ ಎʼ ಸಿನಿಮಾದಲ್ಲಿನ ಅಭಿಯನಯಕ್ಕಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ʼಅತ್ಯುತ್ತಮ ನಟ ಪ್ರಶಸ್ತಿʼ, ರುಕ್ಮಿಣಿ ವಸಂತ್ ಅವರಿಗೆ ʼಅತ್ಯುತ್ತಮ ನಟಿ ಪ್ರಶಸ್ತಿʼ ಸಿಕ್ಕಿದೆ. ʼಅತ್ಯುತ್ತಮ ನಟಿʼ (ಕ್ರಿಟಿಕ್) ವಿಭಾಗದಲ್ಲಿ ಚೈತ್ರಾ ಆಚಾರ್, ʼಅತ್ಯುತ್ತಮ ನಿರ್ದೇಶಕ ಪ್ರಶಸ್ತಿʼಗೆ ಹೇಮಂತ್ ರಾವ್, ʼಅತ್ಯುತ್ತಮ ಖಳನಾಯಕ ಪ್ರಶಸ್ತಿʼಗೆ ರಮೇಶ್ ಇಂದಿರಾ, ʼಅತ್ಯುತ್ತಮ ಗಾಯಕ ಪ್ರಶಸ್ತಿʼಯನ್ನು ಕಪಿಲ್ ಸ್ವೀಕರಿಸಿದ್ದಾರೆ. ಒಂದೇ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ನಟ ದರ್ಶನ್ ಅಭಿನಯದ ʼಕಾಟೇರʼ ಸಿನಿಮಾ ಕೂಡ ನಾಲ್ಕು ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗೆ ಭಾಜನವಾಗಿದೆ. ಈ ಸಿನಿಮಾಗೆ ʼಅತ್ಯುತ್ತಮ ಕನ್ನಡ ಸಿನಿಮಾʼ ಪ್ರಶಸ್ತಿಯೂ ಸಿಕ್ಕಿದೆ. ಚೊಚ್ಚಲ ನಟನೆಗೆ ಆರಾಧನಾ ಅವರಿಗೆ ʼಅತ್ಯುತ್ತಮ ಹೊಸ ನಟಿ ಪ್ರಶಸ್ತಿʼ, ವಿ.ಹರಿಕೃಷ್ಣ ಅವರಿಗೆ ʼಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿʼ ಹಾಗೂ ಮಂಗ್ಲಿ ಅವರಿಗೆ ʼಅತ್ಯುತ್ತಮ ಗಾಯಕಿʼ ಪ್ರಶಸ್ತಿ ಸಂದಿದೆ.
ಕನ್ನಡ ಚಿತ್ರರಂಗದಲ್ಲಿ ಅಮೋಘ ಸೇವೆಗಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡಾಲಿ ಧನಂಜಯ್ ಅವರಿಗೆ ʼಗುರುದೇವ ಹೊಯ್ಸಳʼ ಪಾತ್ರಕ್ಕಾಗಿ ಅತ್ಯುತ್ತಮ ನಟ (ಕ್ರಿಟಿಕ್) ಪ್ರಶಸ್ತಿ ಹಾಗೂ ʼಟಗರು ಪಲ್ಯʼ ಸಿನಿಮಾಗೆ ʼಅತ್ಯುತ್ತಮ ಗೀತರಚನೆಕಾರʼ ಪ್ರಶಸ್ತಿ ಸಿಕ್ಕಿದೆ. ʼಹೊಂದಿಸಿ ಬರೆಯಿರಿʼ ಸಿನಿಮಾದಲ್ಲಿ ನವೀನ್ ಶಂಕರ್ ಅವರಿಗೆ ʼಅತ್ಯುತ್ತಮ ಪೋಷಕ ನಟʼ ಪ್ರಶಸ್ತಿ, ʼಟೋಬಿʼ ಸಿನಿಮಾದ ನಟನೆಗೆ ಸಂಯುಕ್ತಾ ಹೊರನಾಡು ಅವರಿಗೆ ʼಅತ್ಯುತ್ತಮ ಪೋಷಕ ನಟಿʼ ಪ್ರಶಸ್ತಿ ಸಿಕ್ಕಿದೆ.

ʼಆಚಾರ್ ಅಂಡ್ ಕೊʼ ಸಿನಿಮಾದಿಂದ ಅನಿರುದ್ಧ್ ಆಚಾರ್ಯ ಅವರಿಗೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ, ʼಡೇರ್‌ಡೆವಿಲ್ ಮುಸ್ತಾಫಾʼ ಸಿನಿಮಾದ ನಟನೆಗೆ ಶಿಶಿರ್ ಬೈಕಾಡಿ ಅವರಿಗೆ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ, ʼಕೈವʼ ಸಿನಿಮಾಗಾಗಿ ಶ್ವೇತ ಪ್ರಿಯಾ ನಾಯಕ್ ಅವರಿಗೆ ಅತ್ಯುತ್ತಮ ಸಿನಿಮಾಟೋಗ್ರಾಫರ್ ಪ್ರಶಸ್ತಿ, ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾದಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ನಿತಿನ್ ಕೃಷ್ಣಮೂರ್ತಿ ಅವರ ಮುಡಿಗೇರಿದೆ.
ಪಿಬಿ ಸ್ಟುಡಿಯೋಸ್ ಮತ್ತು ಅನ್ವಿತ್ ಸಿನಿಮಾ ವರ್ಷದ ಉದಯೋನ್ಮುಖ ನಿರ್ಮಾಪಕ ಪ್ರಶಸ್ತಿಯನ್ನು ಪಡೆದಿದೆ. ಅಭುವನಸ ಕ್ರಿಯೇಷನ್ಸ್‌ಗೆ ಅತ್ಯುತ್ತಮ ಚೊಚ್ಚಲ ನಿರ್ಮಾಪಕ ಪ್ರಶಸ್ತಿ ಸಿಕ್ಕಿದೆ.

ಟಾಲಿವುಡ್‌ನಲ್ಲೂ ಕನ್ನಡಿಗರ ಹವಾ: ಈ ಬಾರಿಯ ಸೈಮಾದಲ್ಲಿ ತೆಲುಗು ವಿಭಾಗಗಳಲ್ಲಿಯೂ ಕನ್ನಡದ ಕಲಾವಿದರು ಅಬ್ಬರಿಸಿದ್ದಾರೆ. ನಟ ದುನಿಯಾ ವಿಜಯ್ ಅವರು ತೆಲುಗು ʼವೀರಸಿಂಹ ರೆಡ್ಡಿʼ ಸಿನಿಮಾದಲ್ಲಿನ ನೆಗೆಟಿವ್ ರೋಲ್‌ಗೆ ʼಅತ್ಯುತ್ತಮ ವಿಲನ್ ಪ್ರಶಸ್ತಿʼ ಬಾಚಿಕೊಂಡಿದ್ದಾರೆ. ತೆಲುಗಿನ ʼದಸರಾʼ ಸಿನಿಮಾದಲ್ಲಿ ನಟಿಸಿದ್ದ ಕನ್ನಡಿಗ ದೀಕ್ಷಿತ್ ಅವರಿಗೆ ʼಅತ್ಯುತ್ತಮ ಪೋಷಕ ನಟʼ ಪ್ರಶಸ್ತಿ ಹಾಗೂ ʼಸಲಾರ್ʼ ಸಿನಿಮಾದಲ್ಲಿ ಕನ್ನಡಿಗ ಭುವನ್ ಗೌಡ ಅವರು ʼಅತ್ಯುತ್ತಮ ಸಿನಿಮಾಟೋಗ್ರಾಫರ್ ಪ್ರಶಸ್ತಿʼ ಪಡೆದಿದ್ದಾರೆ.












Click it and Unblock the Notifications