Ondu Sarala Prema Kathe: 'ಒಂದು ಸರಳ ಪ್ರೇಮಕಥೆ' ಮೆಚ್ಚಿದ ಸಿನಿಪ್ರಿಯರು: ಸೋಮವಾರದ ಪರೀಕ್ಷೆಯಲ್ಲಿ ಪಾಸ್!
'ಒಂದು ಸರಳ ಪ್ರೇಮಕಥೆ' ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಪಾಸಾಗಿದೆ!. ಹೌದು, ಯಾವುದೇ ಸಿನಿಮಾ ಗೆಲುವು ಸೋಲು ನಿರ್ಧಾರವಾಗೋದು ಮೊದಲ ಸೋಮವಾರವೇ!, ಸೋಮವಾರ ಕೂಡ ಚಿತ್ರಮಂದಿರ ತುಂಬಿದರೆ, ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದರೆ ಆ ಸಿನಿಮಾ ಗೆದ್ದಂತೆ.
ಡಾ. ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್ ಅವರಿಗೆ ಮೊದಲ ಯಶಸ್ಸು ಸಿಕ್ಕಿದೆ. ಅದು ಕೂಡ ಸರಳ ಪ್ರೇಮಕಥೆಯ ಮೂಲಕ. ಸಿನಿಮಾ ನೋಡಿದ ಪ್ರೇಕ್ಷಕರು ವಿನಯ್ ರಾಜ್‌ಕುಮಾರ್ ಅವರ ಅಭಿನಯ ಮೆಚ್ಚಿಕೊಂಡಿದ್ದಾರೆ. ಮುಖ್ಯವಾಗಿ ಸಿನಿಮಾ ಮಹಿಳಾ ಪ್ರೇಕ್ಷಕರ ಮನ ಗೆದ್ದಿದೆ.

ಸಿಂಪಲ್ ಸುನಿ ತಾನೊಬ್ಬ ಉತ್ತಮ ನಿರ್ದೇಶಕ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅವರ ಬತ್ತಳಿಕೆಯಿಂದ ಬಂದ 'ಒಂದು ಸರಳ ಪ್ರೇಮಕಥೆ' ಜನಕ್ಕೆ ಇಷ್ಟವಾಗಿದೆ. ತಮ್ಮ ನವಿರಾದ ಕಚಗುಳಿ ಇಡುವ ಸಂಭಾಷಣೆ, ಉತ್ತಮ ಸಂಗೀತ, ಹಾಸ್ಯ, ಒನ್‌ಲೈನ್ ಪಂಚಿಂಗ್ ಡೈಲಾಗ್‌ಗಳಿಂದಲೇ ಸುನಿ ಯಶಸ್ಸು ಪಡೆದವರು. ಇಲ್ಲಿ ಕೂಡ ಸಂಗೀತ, ಪ್ರೇಮದ ಕತೆಯನ್ನು ನವಿರಾದ ಹಾಸ್ಯದ ಮೂಲಕ ಹೇಳಿ ಗೆಲುವು ಪಡೆದಿದ್ದಾರೆ.
ಸಿನಿಮಾ ನೋಡಿದವರು ಹೇಳಿದ್ದೇನು?
ಸೋಮವಾರ ಕೂಡ ಸಿನಿಮಾ ನೋಡಿದ ಪ್ರೇಕ್ಷಕ ಪ್ರಭುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವನ್ನು ಹೊಗಳುತ್ತಿದ್ದಾರೆ. ಸಿನಿಮಾ ಉತ್ತಮವಾಗಿದೆ, ಮನ ಮುಟ್ಟುವಂತಿದೆ ನೀವೂ ಕೂಡ ಕುಟುಂಬದ ಜೊತೆ ಸಿನಿಮಾ ನೋಡಿ ಎಂದು ತಾವೇ ಪ್ರಚಾರ ಕೂಡ ಮಾಡುತ್ತಿದ್ದಾರೆ.
ಯಾವುದೇ ಸಿನಿಮಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು 'ವರ್ಡ್ ಆಫ್ ಮೌತ್'. ಜನರೇ ಸಿನಿಮಾ ಬಗ್ಗೆ ಮಾತನಾಡಿ, ಪ್ರಚಾರ ಮಾಡಿದಾಗ ಆ ಸಿನಿಮಾ ಗೆದ್ದಂತೆ. ಸುನಿ ಮತ್ತು ವಿನಯ್ ರಾಜ್‌ಕುಮಾರ್ ಅವರ ಡೈರೆಕ್ಷನ್ ಆಕ್ಟಿಂಗ್ ಕಾಂಬಿನೇಷನ್ ವರ್ಕೌಟ್ ಆಗಿದ್ದು ಸಿನಿಮಾ ನೋಡುಗರ ಮನ ಗೆದ್ದಿದೆ.
ವಿನಯ್ ರಾಜ್‌ಕುಮಾರ್ ಅವರ ಅಭಿನಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಟ ಕೃಷ್ಣನ್ ಅವರ ಅಭಿನಯವನ್ನು ಕೂಡ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್ ಸಂಗೀತ.
ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನವಿದ್ದು, ಸಿನಿಮಾ ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಚಿತ್ರದ ಬಿಡುಗಡೆಗೆ ಮುನ್ನವೇ ಹಾಡುಗಳು ಹಿಟ್ ಆಗಿದ್ದವು, ಸಿನಿಮಾ ನೋಡಿದವರೂ ಕೂಡ ಮತ್ತೆ ಮತ್ತೆ ಹಾಡುಗಳನ್ನು ಕೇಳುತ್ತಾ ಖುಷಿ ಪಡುತ್ತಿದ್ದಾರೆ. ಈ ಗೆಲುವು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.












Click it and Unblock the Notifications