ಮಂಡ್ಯದ ಗಂಡು ಚಿತ್ರದ ನಿರ್ದೇಶಕ ಎ.ಟಿ. ರಘು ನಿಧನ: ಚಿತ್ರರಂಗಕ್ಕೆ ಪುತ್ರಿಯ ಮನವಿ
ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಎ.ಟಿ. ರಘು ಅವರು ಗುರುವಾರ (ಮಾರ್ಚ್ 20)ರಂದು ವಿಧಿವಶರಾದರು.'ಮಂಡ್ಯದ ಗಂಡು' ಸೇರಿದಂತೆ 55ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರು ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಕೊನೆಯ ದಿನಗಳಲ್ಲಿ ಎ.ಟಿ. ರಘು ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದರು. ಈ ಬಗ್ಗೆ ಅವರ ಮಗಳು ಮಾತನಾಡಿದ್ದು, ಇಂತಹ ಕಲಾವಿದರನ್ನು ಕೊನೆಯಗಾಲದಲ್ಲಿ ಕೈ ಬಿಡಬೇಡಿ ಎಂದು ಚಿತ್ರರಂಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಯಶಸ್ ಟಾಕೀಸ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ನಮ್ಮ ತಂದೆಗೆ ಸದಾ ಸಿನಿಮಾದ ಮೇಲೆಯೇ ಒಲವಿತ್ತು. ಅದರ ನೆನಪುಗಳಲ್ಲೇ ಅವರು ದಿನ ಕಳೆಯುತ್ತಿದ್ದರು. ಅಪ್ಪನ ಕಷ್ಟದ ದಿನಗಳಲ್ಲಿ ಕನ್ನಡ ಚಿತ್ರರಂಗದವರು ಅವರ ಅವರ ನಿಟ್ಟಿನಲ್ಲಿ ಏನೇನು ಮಾಡಬೇಕು ಅದನ್ನು ಮಾಡಿದ್ದಾರೆ. ಆದರೆ ಕನ್ನಡ ಚಿತ್ರರಂಗದವರು ಚಿತ್ರರಂಗಕ್ಕೆ ಕೊಡುಗೆ ನೀಡಿದ ಇಂತವರಿಗೆ ಸಹಾಯದ ರೂಪದಲ್ಲಿ ಏನಾದರೂ ಮಾಡಬೇಕು ಎನ್ನುವುದು ನನ್ನ ಕೋರಿಕೆ. ಯಾಕೆಂದರೆ ಹವ್ಯಾಸಕ್ಕಾಗಿ ಬಂದು ಒಂದೆರಡು ಸಿನಿಮಾ ಮಾಡುವುದು ಬೇರೆ, ಆದರೆ ನಮ್ಮ ಅಪ್ಪನ ರೀತಿ ಐವತ್ತು ವರ್ಷ ಸಿನಿಮಾಕ್ಕಾಗಿ ಶ್ರಮಿಸಿದವರಿಗೆ ಚಿತ್ರರಂಗ ಏನಾದರೂ ಒಂದು ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಮಾತು ಮುಂದುವರಿಸಿದ ಅವರು, ಸರ್ಕಾರದವರು ಪಿಂಚಣಿ ನೀಡುವಂತೆ ಏನಾದರೂ ನೀಡಬೇಕು ಯಾಕೆಂದರೆ ಅವರಿಗೆ ಸಿನಿಮಾ ಬಿಟ್ಟು ಬೇರೆ ಏನೂ ಗೊತ್ತಿರುವುದಿಲ್ಲ. ಅಂತವರಿಗೆ ಇಂತಹ ಪರಿಸ್ಥಿತಿ ಬಂದಾಗ ಹೇಗೆ ಎದುರಿಸುವುದು? ಹೇಗೆ ಅವರು ಸಂಸಾರ ನಡೆಸಿಕೊಂಡು ಹೋಗುತ್ತಾರೆ. ಹೀಗಾಗಿ ನಿಮ್ಮ ಹಿರಿಯ ಕಲಾವಿದರು ಯಾರಿದ್ದಾರೆ ಅವರನ್ನು ಸ್ವಲ್ಪ ನೋಡಿಕೊಳ್ಳಿ' ಎಂದು ಎ.ಟಿ. ರಘು ಪುತ್ರಿ ಮನವಿ ಮಾಡಿಕೊಂಡಿದ್ದಾರೆ.
ಎ.ಟಿ ರಘು ಪರಿಚಯ
ಎ.ಟಿ ರಘು ಅವರು ಹುಟ್ಟಿದ್ದು ಕೊಡಗಿನಲ್ಲಿ. ಕೊಡವ ಸಮುದಾಯಕ್ಕೆ ಸೇರಿದ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಿರ್ಮಾಪಕರನಾಗಿ, ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡರು. ಅವರು ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.

1980ರಲ್ಲಿ ರಿಲೀಸ್ ಆದ 'ನ್ಯಾಯ ನೀತಿ ಧರ್ಮ' ಅವರ ನಿರ್ದೇಶನದ ಮೊದಲ ಸಿನಿಮಾ. ಅಂಬರೀಷ್, ಆರತಿ, ದ್ವಾರಕೀಶ್ ಅವರು ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಮೂಲಕ ಅಂಬರೀಷ್ ಜೊತೆ ರಘು ಅವರಿಗೆ ಒಳ್ಳೆಯ ಒಡನಾಟ ಬೆಳೆಯಿತು. ಅಂಬರೀಷ್ ನಟನೆಯ 'ಆಶಾ', 'ಅವಳ ನೆರಳು', 'ಮಂಡ್ಯದ ಗಂಡು', 'ಮಿಡಿದ ಹೃದಯಗಳು' ಸೇರಿ 27 ಸಿನಿಮಾಗಳನ್ನು ರಘು ನಿರ್ದೇಶನ ಮಾಡಿದ್ದರು ಎನ್ನುವುದು ವಿಶೇಷ.
ಎ.ಟಿ. ರಘು ಅವರು ಹಿಂದಿ, ಮಲಯಾಳಂ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. 'ಆಶಾ' ಚಿತ್ರವನ್ನು ಅವರು ಹಿಂದಿಗೆ 'ಮೆರಿ ಅದಾಲತ್' ಹೆಸರಿನಲ್ಲಿ ರಿಮೇಕ್ ಮಾಡಿದರು. ಇದರಲ್ಲಿ ರಜನಿಕಾಂತ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 1984ರಲ್ಲಿ ರಿಲೀಸ್ ಆಯಿತು. ಕೊಡವ ಚಲನಚಿತ್ರವನ್ನು ಕೂಡ ನಿರ್ದೇಶನ ಮಾಡಿರುವ ಎ.ಟಿ ರಘು ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೂಡ 2014 ರಿಂದ 17ರವರೆಗೆ ಸೇವೆ ಸಲ್ಲಿಸಿದ್ದಾರೆ.












Click it and Unblock the Notifications