Aniissh Tejeshwar: ಚಿತ್ರರಂಗಕ್ಕೆ ನಾನು ಬೇಕಾಗಿಲ್ವಾ? ಸಿನಿಮಾ ಫ್ಲಾಪ್ ಆಗಿದ್ದಕ್ಕೆ ಕಣ್ಣೀರಿಟ್ಟ ಕನ್ನಡ ನಟ
ಕನ್ನಡದಲ್ಲಿ ರಿಲೀಸ್ ಆಗುತ್ತಿರುವುದೇ ಬೆರಳೆಣಿಕೆ ಸಿನಿಮಾಗಳು. ಇತ್ತೀಚೆಗೆ ನೋಡಿದರೆ ಸು ಫ್ರಂ ಸೋ ಹಾಗೂ ಕಾಂತಾರ ಚಾಪ್ಟರ್-1 ಬಿಟ್ಟರೆ ಕನ್ನಡದ ಸಿನಿಮಾಗಳು ಮಕಾಡೆ ಮಲಗಿದ್ದೇ ಹೆಚ್ಚು. ಇದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ಸ್ಯಾಂಡಲ್‌ವುಡ್ ನಟ ಅನೀಶ್ ತೇಜೇಶ್ವರ್ ಕಣ್ಣೀರಿಡುತ್ತಾ ವಿಡಿಯೋ ಮಾಡಿದ್ದಾರೆ. ಅನೀಶ್ ನಟನೆಯ "ಲವ್ OTP" ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದ್ದು, ಇದಕ್ಕೆ ಬ್ಲಾಕ್‌ಬಸ್ಟರ್ ರಿವ್ಯೂ ಕೂಡ ಸಿಕ್ಕಿತ್ತು. ಆದರೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ನಿರೀಕ್ಷೆಯಂತೆ ಬರುತ್ತಿಲ್ಲ ಎಂದು ಅನೀಶ್ ಕಣ್ಣೀರಿಟ್ಟಿದ್ದಾರೆ.
'ಸಿನಿಮಾ ರಿಲೀಸ್ ಆಯ್ತು, ನನ್ನ ಲೈಫಲ್ಲೇ ಬೇರೆ ಯಾವ ಸಿನಿಮಾಗೂ ಈ ರೀತಿಯ ಬ್ಲಾಕ್‌ಬಸ್ಟರ್ ರಿವ್ಯೂ ಬರಲಿಲ್ಲ. ಆದರೆ ಜನರನ್ನು ಸೆಳೆಯೋಕೆ ಆಗ್ತಿಲ್ವಾ ಅನಿಸ್ತಿದೆ. ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ. 14 ವರ್ಷದ ಕೆರಿಯರ್‌ನಲ್ಲಿ ಇಂತಹ ವಿಮರ್ಶೆ ಬಂದಿರಲಿಲ್ಲ. ಇದನ್ನು ನೋಡಿ ನಾನು ಇಲ್ಲಿಗೇ ನಿಲ್ಲಿಸಬೇಕಾ ಅನಿಸುತ್ತಿದೆ. ನಾನು ಚಿತ್ರರಂಗಕ್ಕೆ ಸರಿಹೊಂದುವುದಿಲ್ಲ ಅನ್ನೋ ಪ್ರಶ್ನೆ ನನ್ನಲ್ಲಿ ಎದುರಾಗಿದೆ' ಎಂದು ಸಂಕಟ ಹೊರಹಾಕಿದ್ದಾರೆ.

'ನನಗೆ ಅಂತ ಯಾರೂ ಇಲ್ಲ'
'ರಿವ್ಯೂ ಬಂದ್ರೂ ಸಿನಿಮಾ ಸೆಳೆಯೋಕೆ ಆಗುತ್ತಿಲ್ವಾ? ಮಾಧ್ಯಮದವರೂ ಈ ಪ್ರತಿಕ್ರಿಯೆ ನೋಡಿ ಶಾಕ್ ಆಗಿ ಕೇಳ್ತಿದ್ದಾರೆ. ಅವರಿಗೆಲ್ಲ ಏನು ಉತ್ತರ ಕೊಡಬೇಕೋ ಗೊತ್ತಾಗುತ್ತಿಲ್ಲ. ನನ್ನ ಹಿಂದಿನ ಸಿನಿಮಾ ನೋಡಿದವರೆಲ್ಲ ನಾಳೆ ನೋಡೋಣ ಅಂದುಕೊಂಡ್ರೆ ಆಗಲ್ಲ, ನನಗೆ ಅಂತ ಯಾರೂ ಇಲ್ಲ. ನಾನು ಒಬ್ಬಂಟಿ, ಬ್ಯಾಕ್‌ಗ್ರೌಂಡ್ ಅಲ್ಲಿ ಎಲ್ಲವೂ ಆಗುತ್ತೆ, ನಟನೆ ಮಾಡು ಅಂದ್ರೆ ಆಗಲ್ಲ. ಏನಾದ್ರೂ ಆಗಬೇಕಿದ್ರೆ ಈ ವಾರಾಂತ್ಯದಲ್ಲೇ ಆಗಬೇಕು. ಇಲ್ಲದಿದ್ದರೆ ಇದೇ ನನ್ನ ಕೊನೆ ಸಿನಿಮಾ' ಎಂದು ಭಾವುಕರಾಗಿದ್ದಾರೆ.
'ನನ್ನ ಈ ಹಿಂದಿನ ಅಕಿರ, ವಾಸು ನಾನ್ ಪಕ್ಕಾ ಲೋಕಲ್, ಆರಾಮ್ ಅರವಿಂದ ಸ್ವಾಮಿ ಸಿನಿಮಾಗಳನ್ನು ನೋಡಿ ನನ್ನ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಹೇಳುತ್ತಿದ್ದೇನೆ. ಮುಂದಿನ ವಾರ ನೋಡ್ತೀನಿ, ಒಟಿಟಿಗೆ ಬಂದ ಮೇಲೆ ನೋಡುತ್ತೀನಿ ಅಂತೆಲ್ಲ ಅಂದುಕೊಳ್ಳಬೇಡಿ. ಯಾಕಂದ್ರೆ ನನಗೆ ಅಂತ ಯಾರೂ ಇಲ್ಲ. ನಾನು ಒಬ್ಬಂಟಿಯಾಗಿ ನಟನೆ ಜೊತೆಗೆ ಎಲ್ಲವನ್ನೂ ನಾನೇ ಮಾಡಬೇಕಿದೆ. ಹಣ ನೀಡಿ ಥಿಯೇಟರ್‌ಗಳಲ್ಲಿ ಸಿನಿಮಾ ಉಳಿಸಿಕೊಳ್ಳಲು ಆಗಲ್ಲ. ನನ್ನನ್ನು ಉಳಿಸಬೇಕು ಅನ್ನೋದಿದ್ರೆ ಈ ಎರಡು ದಿನಗಳು ಮಾತ್ರವೇ ಅವಕಾಶ ಇರುವುದು. ಈ ಅವಕಾಶ ತಪ್ಪಿದರೆ ಇದೇ ನನ್ನ ಕೊನೆಯ ಪ್ರಯತ್ನ ಆಗಬಹುದು' ಎಂದು ನೋವಿನಿಂದ ಮಾತನಾಡಿದ್ದಾರೆ.
ಲವ್ ಒಟಿಪಿ ಸಿನಿಮಾ ನವೆಂಬರ್ 14ರಂದು ಶುಕ್ರವಾರ ರಿಲೀಸ್ ಆಗಿತ್ತು. ಒಂದೇ ದಿನದಲ್ಲಿ ಈ ಸಿನಿಮಾಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ ಎಂದ ನಟ ಅನೀಶ್ ಬೇಸರ ಹೊರಹಾಕಿದ್ದಾರೆ.












Click it and Unblock the Notifications