Shankar Nag: ಶಂಕರ್ ನಾಗ್ ಸಾವಿನ ಬಗ್ಗೆ ಅಣ್ಣನಿಗೆ 2 ವರ್ಷ ಮೊದಲೇ ಸೂಚನೆ ಸಿಕ್ಕಿತ್ತಾ?
ಕನ್ನಡ ಚಿತ್ರರಂಗದ ಮರೆಲಾಗದ ಮಾಣಿಕ್ಯ, ಆಟೋ ರಾಜ ಶಂಕರ್‌ನಾಗ್ ಅವರು ಇಹಲೋಕ ಅಕಾಲಿಕ ಮರಣ ಹೊಂದಿದ್ದು ಇಂದಿಗೂ ಮಾಸಿಲ್ಲ. ಶಂಕರ್ ನಾಗ್ ಅವರು 1990ರ ಸೆಪ್ಟೆಂಬರ್ 30ರಂದು ಭೀಕರ ಅಪಘಾತದಲ್ಲಿ ಜೀವಬಿಟ್ಟಿದ್ದರು. ಆದರೆ ಇಂದಿಗೂ ಶಂಕ್ರಣ್ಣ ಎಲ್ಲರ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿದ್ದಾರೆ. ಶಂಕರ್ ನಾಗ್ ಅವರ ಈ ಹಠಾತ್ ಸಾವು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅವರ ಸಹೋದರ, ನಟ ಅನಂತ್‌ನಾಗ್ ಅವರಿಗೆ ಈ ಸಾವಿನ ಮುನ್ಸೂಚನೆ ಮೊದಲೇ ಇತ್ತು ಎನ್ನಲಾಗಿದೆ. ಈ ಬಗ್ಗೆ ಅನಂತ್ ನಾಗ್ ಕೆಲ ಅಚ್ಚರಿ ವಿಚಾರಗಳನ್ನು ಹೇಳಿಕೊಂಡಿದ್ದರು.
ಸಂದರ್ಶನವೊಂದರಲ್ಲಿ ಅನಂತ್ ನಾಗ್ ಈ ವಿಚಾರವನ್ನು ನೆನೆದಿದ್ದರು. 'ತಮ್ಮ ಶಂಕರ್ ನಾಗ್ ಬಗ್ಗೆ ಎಲ್ಲರಿಗೂ ಗೊತ್ತು. ಅವನು ಮುಂಬೈನಲ್ಲಿ ನನ್ನ ಜೊತೆಯಲ್ಲೇ ಬೆಳೆದ. ಅವನಿಗೆ ನಾನು ಕೇವಲ ಅಣ್ಣನಲ್ಲ, ಸಾಕು ತಂದೆಯಾಗಿದ್ದೆ. ಅವನು ಕೇವಲ 12 ವರ್ಷಗಳಲ್ಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿದ್ದ. ಶಂಕರ್‌ಗೆ ನಿರ್ದೇಶನ ಅಂದ್ರೆ ಒಂತರಾ ಹುಚ್ಚು ಎನ್ನಬಹುದು' ಎಂದು ಸ್ಮರಿಸಿದ್ದರು.
'ಶಂಕರ್ ಆರಂಭದಲ್ಲಿ ಮಾಡಿದ "ಮಾಲ್ಗುಡಿ ಡೇಸ್" ಒಳ್ಳೆಯ ಮೆಚ್ಚುಗೆ ಪಡೆಯಿತು. ಆದರೆ ಇದ್ದಕ್ಕಿದ್ದಂತೆ ಅವನು ಕಣ್ಮರೆಯಾದ. ಅವನಿಗೆ ದೇವರು ಆಯಸ್ಸು ಕೊಟ್ಟಿದ್ದೇ ಅಷ್ಟು. ಇದೆಲ್ಲವೂ ಪೂರ್ವನಿರ್ಧರಿತ, ನಾವು ನಿಮಿತ್ತ ಮಾತ್ರ ಎಂದಿದ್ದರು ಅನಂತ್ ನಾಗ್. ಇನ್ನು ಶಂಕರ್‌ಗೆ ತಾನು ಸಾಯ್ತೀನಿ ಅನ್ನೋದು ಎರಡು ವರ್ಷ ಮೊದಲೇ ತಿಳಿದಿತ್ತು ಅನಿಸುತ್ತೆ' ಎಂದಿದ್ದರು.

ʼಆ ಮಾತೇ ನಿಜ ಆಗೋಯ್ತುʼ
'1988ರಲ್ಲೇ ಶಂಕರ್ ಒಂಥರಾ ಚಡಪಡಿಸುತ್ತಲೇ ಇದ್ದ. ಆತುರಾತುರವಾಗಿ ಅದನ್ನ ಮಾಡಬೇಕು, ಇದನ್ನ ಮಾಡಬೇಕು ಅಂತಿದ್ದ. ಆಗ ನಾನು ಒಂದಾದ ಮೇಲೆ ಒಂದು ಸಿನಿಮಾ ಮಾಡ್ತಿದ್ದೀಯ, ಈಗ ನಾವಿಬ್ಬರೂ ಇರೋದ್ರಿಂದ ಸಾಲ ಕೊಡ್ತಾರೆ. ಒಬ್ಬರು ಹೋದ್ರೆ ಮತ್ತೊಬ್ಬನ ಕಥೆ ಮುಗೀತು ಅನ್ನೋ ಮಾತು ಬಂತು. ಅಂದು ಯಾವ ಕ್ಷಣದಲ್ಲಿ ಆ ಮಾತು ಬಂತೋ ಗೊತ್ತಿಲ್ಲ. 35 ವರ್ಷಕ್ಕೇ ದೇವರು ಶಂಕರ್‌ನ ಕರೆದುಕೊಂಡ' ಎಂದು ಭಾವುಕರಾಗಿದ್ದರು.
'ಶಂಕರ್ ಹೋದಾಗ ಬೆಟ್ಟದಷ್ಟು ಸಮಸ್ಯೆಗಳು ಬಂದವು. ಕಷ್ಟಕಾಲದಲ್ಲಿ ಒಬ್ಬಂಟಿಯಾಗಿದ್ದೆ. ತುಂಬಾ ಒದ್ದಾಡಿದೆ. ಆ ಸಮಸ್ಯೆಗಳಿಂದ ಈಚೆ ಬರಲು ನನಗೆ 10 ವರ್ಷ ಬೇಕಾಯ್ತು. ಆ ದೇವರು ನನಗೆ ಶಿಕ್ಷೆ ಕೊಡೋದಕ್ಕೇ ಶಂಕರ್‌ನ ಕರೆದುಕೊಂಡು ಹೋದ ಅನಿಸುತ್ತೆ. ಅವನನ್ನ ಕರೆದುಕೊಂಡ ಹೋದ ವಿಚಾರದಲ್ಲಿ ಆ ದೇವರನ್ನ ನಾನು ಎಂದಿಗೂ ಕ್ಷಮಿಸಲ್ಲ. ಇವತ್ತಿಗೂ ಜನ ಅವನ ಬಗ್ಗೆ ಕೇಳ್ತಾರೆ. ಅವನ ಬಗ್ಗೆ ಪುಸ್ತಕ ಕೂಡ ಬರೆದಿದ್ದೇನೆ. ಅದು ಜನರಿಗೆ ಅವನ ಮೇಲಿರೋ ಪ್ರೇಮ' ಎಂದಿದ್ದರು.
ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಉತ್ಸಾಹಿಯಾಗಿ ಕಾಣಿಸಿಕೊಂಡಿದ್ದ ಶಂಕರ್ ನಾಗ್ ಅವರು ಚಿಕ್ಕ ವಯಸ್ಸಿಗೇ ಅಕಾಲಿಕವಾಗಿ ಮರಣ ಹೊಂದಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಇಂದಿಗೂ ತುಂಬಲಾರದ ನಷ್ಟ. ಆಗಲೇ ಮಾಡಿದ್ದ ಕೆಲ ಸಿನಿಮಾಗಳು ಇಂದಿಗೂ ಹಿಟ್ ಆಗಿ ಉಳಿದುಕೊಂಡಿದೆ. ಅವರ ಆಟೋ ಶಂಕರ್ ಪಾತ್ರವು ಇಂದಿನ ಆಟೋ ಚಾಲಕರಿಗೆ ಪ್ರೇರಣೆಯಾಗಿ ಉಳಿದಿದೆ.












Click it and Unblock the Notifications