WWE ವೇದಿಕೆಗೆ ಎಂಟ್ರಿ ಕೊಟ್ಟ ಫೇಮಸ್ ಯುಟ್ಯೂಬರ್‌ಗೆ ಹಿಗ್ಗಾಮುಗ್ಗ ಥಳಿತ
ಫೇಮಸ್ ಯುಟ್ಯೂಬರ್ ಸ್ವೀಡ್ (IShowSpeed) ಖ್ಯಾತಿಯ ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಜೂನಿಯರ್‌ಗೆ ಏನೋ ಮಾಡಲು ಹೋಗಿ ಇನ್ನೇನು ಮಾಡಿಕೊಂಡಿದ್ದಾರೆ. ಈ ಬಾರಿಯ WWE (ವರ್ಲ್ಡ್ ರೆಸ್ಟ್ಲಿಂಗ್ ಎಂಟರ್‌ಟೇನ್‌ಮೆಂಟ್) ವೇದಿಕೆಗೆ ಎಂಟ್ರಿ ನೀಡುವ ಮೂಲಕ ಸ್ವೀಡ್ ಎಲ್ಲರಿಗೂ ಸರ್‌ಪ್ರೈಸ್ ನೀಡಿದ್ದರು. ಆದರೆ ಕೊನೆಗೆ ಕುಸ್ತಿಪಟು ಕೈಯಲ್ಲಿ ಹಿಗ್ಗಾಮುಗ್ಗ ಏಟು ತಿಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಮೇರಿಕಾದಲ್ಲಿ ನಡೆಯುತ್ತಿರುವ ರಾಯಲ್ ರಂಬಲ್ (Royal Rumble) ಕುಸ್ತಿ ಸ್ಪರ್ಧೆಗೆ ಸ್ವೀಡ್ ಕೂಡ ಸರ್‌ಪ್ರೈಸ್ ಎಂಟ್ರಿ ಕೊಟ್ಟಿದ್ದರು. ಸ್ಪೀಡ್ ಕಂಡು ಅಲ್ಲಿದ್ದವರೆಲ್ಲ ಸಖತ್ ಖುಷಿ ಪಟ್ಟರು. ಸ್ಪೀಡ್ ಯಾವಾಗ ಕುಸ್ತಿ ಕಲಿತುಕೊಂಡರು ಎಂದು ಆಶ್ಚರ್ಯ ಕೂಡ ಪಟ್ಟಿದ್ದರು. ಆದರೆ, ವೇದಿಕೆಯಲ್ಲಿದ್ದ ಘಟಾನುಘಟಿ ಕುಸ್ತಿಪಟು ಕೈಯಲ್ಲಿ ಸರಿಯಾಗಿ ಒದೆ ತಿಂದು ಕೆಲವೇ ಕ್ಷಣಗಳಲ್ಲಿ ಎಲಿಮಿನೇಟ್ ಕೂಡ ಆಗಿದ್ದಾರೆ.

ಸ್ವೀಡ್ ಅವರನ್ನು ಕುಸ್ತಿಪಟು ಹಿಗ್ಗಾಮುಗ್ಗ ಜಾಡಿಸಿ ಬಿಸಾಡಿದ್ದಾರೆ. ಅಲ್ಲದೆ ಸ್ಪೀಡ್ ಅವರನ್ನು ಅಲ್ಲಿದ್ದ ಟೇಬಲ್ ಮೇಲೆಯೂ ಬಿಸಾಡಿದ ಕಾರಣ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಸ್ಪೀಡ್ ಅವರು ಗಾಯಗೊಂಡಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಖ್ಯಾತಿ ಗಳಿಸಿರುವ ಸ್ಪೀಡ್, ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯೂ ಹೌದು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ಪೀಡ್ ಅವರನ್ನು ಮೀಮ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಮೂಲಕವೇ ಸ್ಪೀಡ್ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದಾರೆ. ಇನ್ಸ್‌ಟಾಗ್ರಾಂ ರೀಲ್ಸ್‌ನಲ್ಲಿಯೂ ಸ್ಪೀಡ್ ಅವರ ವಿಡಿಯೋಗಳು ಫೇಮಸ್ ಆಗಿವೆ.
ಇಷ್ಟಕ್ಕೆ ಸುಮ್ಮನಾಗದ ಸ್ಪೀಡ್ ಘಟಾನುಘಟಿಗಳು ಸೇರುವ ರಾಯಲ್ ರಂಬಲ್ ವೇದಿಕೆಗೆ ಹೋಗುವ ಸಾಹಸ ತೋರಿದ್ದಲ್ಲದೆ ಸರಿಯಾಗಿ ಪೆಟ್ಟು ತಿಂದಿದ್ದಾರೆ. ಇಂಡಿಯಾನಾಪೊಲಿಸ್‌ನ ಲ್ಯೂಕಾಸ್ ಆಯಿಲ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ 2025ರ ರಾಯಲ್ ರಂಬಲ್‌ಅನ್ನು ಸ್ಪೀಡ್ ಪ್ರವೇಶಿಸಿ, ಅಲ್ಲಿ ಕುಸ್ತಿಪಟುಗಳ ಕೈಗೆ ಸಿಕ್ಕಿ ಹಣ್ಣುಗಾಯಿ ನೀರುಗಾಯಿ ಆಗಿದ್ದಾರೆ. ಟೇಬಲ್ ಮೇಲೆ ಕುಕ್ಕಿ ಬಿಸಾಡಿದ್ದರಿಂದ ಸ್ಪೀಡ್ ಕಾಲಿಗೆ ಭಾರಿ ಗಾಯಗಳಾಗಿ ರಕ್ತ ಕೂಡ ಸುರಿದಿದೆ. ಶೋ ಮುಗಿದ ನಂತರ, ಸ್ಪೀಡ್ ತನ್ನ ಕುತ್ತಿಗೆಗೆ ಬ್ರೇಸ್ ಮತ್ತು ಊರುಗೋಲನ್ನು ಹೊಂದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಸ್ಪೀಡ್ ಅಮೇರಿಕನ್ ಯೂಟ್ಯೂಬರ್ ಹಾಗೂ ಆನ್‌ಲೈನ್ ಸ್ಟ್ರೀಮರ್ ಆಗಿದ್ದಾರೆ. ತಮ್ಮ ಹುಚ್ಚುತನದ ಮೂಲಕವೇ ಎಲ್ಲರನ್ನು ನಕ್ಕುನಗಿಸುವ ಸ್ಪೀಡ್‌ಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಅವರ ಫ್ಯಾನ್ಸ್ ಬೇಸರ ಹಂಚಿಕೊಂಡಿದ್ದಾರೆ. ಸ್ಪೀಡ್ ಅವರಿಗೆ ರಾಯಲ್ ರಂಬಲ್ ಕಾರ್ಯಕ್ರಮವನ್ನು ಕವರ್ ಮಾಡಲು ಆಹ್ವಾನಿಸಲಾಗಿತ್ತು. ಬಳಿಕ ಕುಸ್ತಿ ವೇದಿಕೆಗೆ ಬರುವ ಅವಕಾಶ ಸಿಕ್ಕರೂ ಎಲ್ಲರನ್ನು ರಂಜಿಸಲು ಹೋಗಿ ಫಜೀತಿ ಮಾಡಿಕೊಂಡಿದ್ದಾರೆ.












Click it and Unblock the Notifications