ನಟಿ ಶ್ರುತಿ ಮನೆಯಲ್ಲಿ ಹೊಸ ಸಂಭ್ರಮ: ಗೌರಿ ಫ್ಯಾನ್ಸ್ ಫುಲ್ ಖುಷ್
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ರುತಿ ಅವರ ನಿವಾಸದಲ್ಲಿ ಹೊಸ ಸಂತೋಷ ಮನೆ ಮಾಡಿದೆ. ಅಲ್ಲಲ್ಲಾ ಹೊಸ ನಿವಾಸದಲ್ಲಿ ಸಂತೋಷ ತುಂಬಿದ್ದು, ಇದಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು ಸಾಕ್ಷಿಯಾಗಿದ್ದಾರೆ. ಹೌದು, ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರು ನಟಿ ಶ್ರುತಿ ಅವರ ಬಹುದಿನದ ಕನಸು ನನಸಾಗಿದೆ.
ನಟನೆ ಹಾಗೂ ರಾಜಕೀಯ ಕ್ಷೇತ್ರ ಎರಡರಲ್ಲಿಯೂ ಸಕ್ರಿಯರಾಗಿರುವ ನಟಿ ಶ್ರುತಿ ಅವರ ಹೊಸ ಮನೆ ಕನಸು ನನಸಾಗಿದೆ. ನಟಿ ಶ್ರುತಿ ಅವರು ಹೊಸ ಮನೆ ನಿರ್ಮಾಣ ಮಾಡಿದ್ದು, ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಶ್ರುತಿ ಅವರ ಈ ಖುಷಿಯಲ್ಲಿ ಚಿತ್ರರಂಗದ ಅನೇಕರು ಭಾಗಿಯಾಗಿದ್ದಾರೆ. ಗೃಹಪ್ರವೇಶ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಜನಪ್ರಿಯ ನಟ- ನಟಿಯರು ಆಗಮಿಸಿ ಶುಭ ಕೋರಿದ್ದಾರೆ.

ನಟಿ ಶ್ರುತಿ ಅವರ ಹೊಸ ಮನೆಯಲ್ಲಿ ದೇವರನ್ನು ಕೂರಿಸಿ ವಿಶೇಷ ಹೋಮ-ಹವನಗಳನ್ನು ಮಾಡಲಾಗಿದ್ದು, ಸತ್ಯನಾರಾಯಣ ಸ್ವಾಮಿ ಪೂಜೆ ಕೂಡ ನೆರವೇರಿಸಲಾಗಿದೆ. ತಮ್ಮದೇ ಆದ ಗೂಡನ್ನು ಕಟ್ಟುವುದು ಪ್ರತಿಯೊಬ್ಬರ ಕನಸಾಗಿದ್ದು, ಬಹು ವರ್ಷಗಳ ಬಳಿಕ ಶ್ರುತಿ ತಮ್ಮ ಈ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ. ಇನ್ನು ಹೊಸ ಮನೆ ಗ್ರಹ ಪ್ರವೇಶದ ಫೋಟೋಗಳನ್ನು ಶ್ರುತಿ ಪುತ್ರಿ ಗೌರಿ ಶ್ರುತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ಪುತ್ರಿ ಗೌರಿ ಕೂಡ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದು, ಫೋಟೋ ನೋಡಿದ ಅವರ ಫ್ಯಾನ್ಸ್ ಶುಭ ಹಾರೈಸಿದ್ದಾರೆ.
ನಟಿ ಶ್ರುತಿ ಹೊಸ ಮನೆಯಲ್ಲಿ ತಾರಾ ಬಳಗ
ನಟಿ ಶ್ರುತಿ ಅವರ ಹೊಸ ಮನೆ ಗ್ರಹ ಪ್ರವೇಶಕ್ಕೆ ತಾರಾ ಬಳಗವೇ ಹರಿದು ಬಂದಿದೆ. ನಟಿ ಶ್ರುತಿ ಅವರ ಆತ್ಮೀಯ ಸ್ನೇಹಿತೆಯರಾದ ಸುಧಾರಾಣಿ, ಮಾಳವಿಕಾ ಹಾಗೂ ತಾರಾ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇನ್ನು ನಟ ಪ್ರೇಮ್, ಅವರ ಪತ್ನಿ ಜ್ಯೋತಿ ಪ್ರೇಮ್ ಹಾಗೂ ಮಗಳು ಅಮೃತಾ ಪ್ರೇಮ್, ನಟಿ ಪ್ರಿಯಾಂಕ ಉಪೇಂದ್ರ, ನಟಿ ಅಮೂಲ್ಯ, ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ, ವಾಣಿ ಹರಿಕೃಷ್ಣ, ಗಾಯಕಿ ಅರ್ಚನಾ ಉಡುಪ, ನಿರ್ದೇಶಕ ತರುಣ್ ಸುಧೀರ್, ಅವರ ಪತ್ನಿ ನಟಿ ಸೋನಲ್ ಮೊಂಥೆರೋ ಆಗಮಿಸಿದ್ದರು.
ಅಲ್ಲದೇ ಮಧು ದೈತೋಟ, ವಾಸುಕಿ ವೈಭವ್, ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ಆರಾಧಾನಾ, ನಟಿ ಮೇಘನಾ ರಾಜ್, ರಾಯನ್ ಸರ್ಜಾ ಹಾಗೂ , ಪ್ರಮೀಳಾ ಜೋಷಾಯಿ, ನಿರೂಪಕ ನಿರಂಜನ್ ದೇಶ ಪಾಂಡೆ ಹಾಗೂ ಪತ್ನಿ ಯಶಸ್ವಿನಿ ದೇಶಪಾಂಡೆ ಸೇರಿದಂತೆ ಅನೇಕರು ನಟಿ ಶ್ರುತಿ ಅವರ ಹೊಸ ಮನೆ ಗ್ರಹ ಪ್ರವೇಶಕ್ಕೆ ಆಗಮಿಸಿ ಶುಭಹಾರೈಸಿದ್ದಾರೆ.












Click it and Unblock the Notifications