Actress Rakshitha: ರಿಯಾಲಿಟಿ ಶೋಗಳಿಗೆ ನಟಿ ರಕ್ಷಿತಾ ಪ್ರೇಮ್ ಗುಡ್‌ಬೈ, ದಿಢೀರ್ ಈ ನಿರ್ಧಾರವೇಕೆ?
ನಟಿ ರಕ್ಷಿತಾ ಪ್ರೇಮ್ ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಸಿನಿಮಾಗಳಿಂದ ದೂರ ಉಳಿದಿರುವ ಅವರು ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ನಾನು ಅದನ್ನು ಮುಂದುವರಿಸುವುದಿಲ್ಲ ಎಂದು ರಿಯಾಲಿಟಿ ಶೋಗಳಿಗೆ ರಕ್ಷಿತಾ ಗುಡ್‌ಬೈ ಹೇಳಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದ ರಕ್ಷಿತಾ ಅವರ ಈ ದಿಢೀರ್ ನಿರ್ಧಾರದಿಂದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣವೇನು ಎಂದು ರಕ್ಷಿತಾ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ "ಕಾಮಿಡಿ ಕಿಲಾಡಿಗಳು" ಹಾಗೂ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಇದರಲ್ಲಿ ರಕ್ಷಿತಾ ತೀರ್ಪುಗಾರರಾಗಿ ಹಲವು ವರ್ಷಗಳಿಂದ ಕಾಣಿಸಿಕೊಂಡಿದ್ದರು. ಈ ಶೋಗಳ ಹಲವು ಸೀಸನ್‌ಗಳಲ್ಲಿಯೂ ಸತತವಾಗಿ ರಕ್ಷಿತಾ ಅವರೇ ಜಡ್ಜ್ ಆಗಿದ್ದರು. ಆದರೆ ಇನ್ನು ಮುಂದೆ ನಾನು ಈ ಕಾರ್ಯಕ್ರಮಗಳ ಹಾಗೂ ಆ ವಾಹಿನಿಯ ಭಾಗವಲ್ಲ ಎಂದು ಶಾಕ್ ಕೊಟ್ಟಿದ್ದಾರೆ ರಕ್ಷಿತಾ.

ಪೋಸ್ಟ್‌ನಲ್ಲಿ ಹೇಳಿದ್ದೇನು?
"ನಾನು ಕಳೆದ 9 ವರ್ಷದಿಂದ ಕೆಲಸ ಮಾಡುತ್ತಿದ್ದ ಒಂದು ಚಾನಲ್‌ನ ಶೋಗೆ ಟ್ಯಾಗ್ ಮಾಡ್ತಿರೋ ಎಲ್ಲರಿಗೂ ನಾನು ಕ್ಲಾರಿಟಿ ಕೊಡೋಕೆ ಇಷ್ಟಪಡುತ್ತೇನೆ. ನನ್ನ ಜೀವನದಲ್ಲಿ ಬದಲಾವಣೆ ಬಯಸಿದ್ದು ಹಾಗೂ ಹೊಸದನ್ನು ಏನಾದರೂ ಪ್ರಯತ್ನಿಸಬೇಕು ಎಂದಿದ್ದೇನೆ. ಹೀಗಾಗಿ ನಾನು ಇನ್ನು ಮುಂದೆ ಆ ಚಾನಲ್‌ನ ಭಾಗವಾಗಿರುವುದಿಲ್ಲ" ಎಂದು ರಕ್ಷಿತಾ ಸ್ಪಷ್ಟನೆ ಕೊಟ್ಟಿದ್ದಾರೆ.
"ಇಷ್ಟು ವರ್ಷ ಆ ಶೋಗಳಲ್ಲಿ ಸಂತೋಷದಿಂದ ನನ್ನನ್ನು ನೋಡಿ ಬೆಂಬಲಿಸಿದ್ದೀರಿ. ಈ 9 ವರ್ಷದ ಜರ್ನಿಯಲ್ಲಿ ಅನೇಕ ಸುಂದರ ದಿನಗಳನ್ನು ನೀಡಿದ ನಿಮಗೂ ಮತ್ತು ಆ ದೇವರಿಗೂ ಹೃದಯಪೂರ್ವಕ ಧನ್ಯವಾದಗಳು. ನಾನು ಯಾವುದೇ ಕೆಲಸ ಅಥವಾ ಸಿನಿಮಾದಲ್ಲಿ ಮತ್ತೆ ನಿಮ್ಮ ಮುಂದೆ ಬಂದರೂ ಇದೇ ರೀತಿಯ ಪ್ರೀತಿ ಹಾಗೂ ಪ್ರೋತ್ಸಾಹ ನನ್ನ ಮೇಲಿರುತ್ತದೆ ಎಂದು ಭಾವಿಸುತ್ತೇನೆ. ಲವ್ ಯೂ ಗಾಯ್ಸ್" ಎಂದು ರಕ್ಷಿತಾ ಬರೆದುಕೊಂಡಿದ್ದಾರೆ. ಈ ಮೂಲಕ ರಕ್ಷಿತಾ ಅವರು ಸಿನಿಮಾಗಳಿಗೆ ಮರಳುವ ಸುಳಿವು ನೀಡಿದ್ದು, ಇದೇ ಕಾರಣಕ್ಕೆ ಅವರು ರಿಯಾಲಿಟಿ ಶೋಗಳಿಗೆ ಗುಡ್‌ಬೈ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ "ಕಾಮಿಡಿ ಕಿಲಾಡಿಗಳು" ರಿಯಾಲಿಟಿ ಶೋ ಮೂಲಕ ರಕ್ಷಿತಾ ಪ್ರೇಮ್ 2017ರಲ್ಲಿ ತೀರ್ಪುಗಾರರಾಗಿ ಎಂಟ್ರಿ ನೀಡಿದ್ದರು. ಬಳಿಕ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಸೇರಿದಂತೆ ಇವುಗಳ ಸರಣಿ ಶೋಗಳಲ್ಲಿಯೂ ಜಡ್ಜ್ ಆಗಿ ಮುಂದುವರಿದಿದ್ದರು. ಹಲವು ಸೀಸನ್‌ಗಳ ಬಳಿಕ ರಕ್ಷಿತಾ ಪ್ರೇಮ್ ಅಂತಿಮವಾಗಿ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರಿಕೆಗೆ ವಿದಾಯ ಹೇಳಿದ್ದಾರೆ.












Click it and Unblock the Notifications