ಅಪ್ಪ ಕುಡಿದು ಮಧ್ಯರಾತ್ರಿ ಕಾಟ ಕೊಡ್ತಿದ್ರು, 12ನೇ ವಯಸ್ಸಿಗೆ ಆರ್ಕೆಸ್ಟ್ರಾ ಕೆಲಸಕ್ಕೆ ಹೋದೆ: ನಟಿ ರಜಿನಿ
"ಅಮೃತ ವರ್ಷಿಣಿ" ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ್ದ ನಟಿ ರಜಿನಿ ಅವರು ಸದ್ಯ "ನೀ ಇರಲು ಜೊತೆಯಲಿ" ಧಾರಾವಾಹಿಯಲ್ಲಿ ನಟನೆ ಮುಂದುವರಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ನಟಿ ರಜಿನಿ ತಾವು ನಡೆದು ಬಂದ ಕಷ್ಟದ ಹಾದಿಯ ಬಗ್ಗೆ ಹೇಳಿಕೊಂಡಿದ್ದಾರೆ. ತಂದೆ ಸಿಕ್ಕಾಪಟ್ಟೆ ಮದ್ಯ ಕುಡಿದು ಬಂದು ರಾತ್ರಿಯಿಡೀ ಕಾಟ ಕೊಡುತ್ತಿದ್ದರು ಎಂದು ನಟಿ ಆ ದಿನಗಳನ್ನು ನೆನೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡಿದ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ.
́́'ನಾವು ಮೂರು ಜನ ಮಕ್ಕಳು. ಮೂವರಲ್ಲಿ ನನ್ನ ಮೇಲೆಯೇ ಹೆಚ್ಚು ಪ್ರೀತಿ ಇತ್ತು. ಎಲ್ಲ ಇದ್ದಾಗ ಏನೋ ಒಂದು ಕೊರತೆ ಎನ್ನುವಂತೆ ಅಪ್ಪ ಸಿಕ್ಕಾಪಟ್ಟೆ ಕುಡೀತಿದ್ರು. ಆ ಒಂದು ವಿಚಾರದಲ್ಲಿ ಕಿರಿಕಿರಿ ಅನ್ನಿಸ್ತಿತ್ತು ಬಿಟ್ರೆ ಬಾಕಿ ಎಲ್ಲ ವಿಚಾರದಲ್ಲೂ ಒಳ್ಳೆಯವರು ಎಂದಿದ್ದಾರೆ. ಅಪ್ಪ ರಾತ್ರಿ ಆ ರೀತಿ ವರ್ತಿಸುತ್ತಿದ್ರು, ಬೆಳಗಾದರೆ ಅದೆಲ್ಲ ನೆನಪೇ ಇರುತ್ತಿರಲಿಲ್ಲ. ಅಂತಹ ದಿನಗಳನ್ನ ಕೂಡ ನೋಡಿದ್ದೀನಿ. ಒಮ್ಮೆ ಅವರಿಗೆ ಹೃದಯಾಘಾತ ಆಯ್ತು. ಆಗ ಅವರು ನಮ್ ಜೊತೆ ಇರಲಿಲ್ಲ. ಆಗ ಅವರನ್ನು ಕರೆದುಕೊಂಡು ಬಂದು ನೋಡಿಕೊಂಡ್ವಿ' ಎಂದು ರಜಿನಿ ಅವರು ರಾಜೇಶ್ ಗೌಡ ಯುಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ಅಪ್ಪ ಏನೂ ಮಾಡಿಟ್ಟಿಲ್ಲ'
ನಮ್ಮ ತಾಯಿ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ರು. ನಮ್ ತಂದೆ ಮಧ್ಯರಾತ್ರಿ ಕುಡಿದು ಬಂದು ನಮ್ಮ ಮೂವರನ್ನೂ ನಿಲ್ಲಿಸ್ತಿದ್ರು. ನಮ್ಮ ತಾಯಿ ಮಕ್ಕಳು ಮಲಗಿದ್ದಾರೆ, ಬೆಳಿಗ್ಗೆ ಸ್ಕೂಲಿಗೆ ಹೋಗ್ಬೇಕು, ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿದ್ರು. ಆದರೆ ಅಪ್ಪ ಮಾತು ಕೇಳುತ್ತಿರಲಿಲ್ಲ, ಅಷ್ಟು ಕಾಟ ಕೊಡ್ತಿದ್ರು. ಅಪ್ಪ ಮತ್ತೆ ಅದೇ ರೀತಿ ಜಗಳ ಮಾಡ್ತಿದ್ರು, ಎಲ್ಲವೂ ರಿಪೀಟ್ ಆಯ್ತು. ಎರಡನೇ ಬಾರಿ ಮೇಜರ್ ಹಾರ್ಟ್‌ಅಟ್ಯಾಕ್ ಆಯ್ತು. ಕೊನೆಗೆ ಅಪ್ಪ ತೀರಿಕೊಂಡರು. ನಮಗಾಗಿ ನಮ್ಮ ತಂದೆ ಏನೂ ಆಸ್ತಿ ಮಾಡಿಟ್ಟಿಲ್ಲ. ಆಗ ಜೀವನ ನಡೆಸಲು ಏನು ಬೇಕೋ ಅಷ್ಟು ನಡೆಯುತ್ತಿತ್ತು' ಎಂದು ಅಸಲಿ ವಿಚಾರವನ್ನು ಹೇಳಿದ್ದಾರೆ.
'ಆರ್ಕೆಸ್ಟ್ರಾದಲ್ಲಿ 50 ರೂಪಾಯಿ ಕೊಡ್ತಿದ್ರು'
'ನಂತರ ನಾನು ಚಿಕ್ಕ ವಯಸ್ಸಿನಲ್ಲೇ ಆರ್ಕೆಸ್ಟ್ರಾದಲ್ಲಿ ಕೆಲಸಕ್ಕೆ ಹೋದೆ. ಖುಷಿಯಾಗಿ ಕೆಲಸ ಮಾಡ್ತಿದ್ದೆ. ಒಂದು ಶೋಗೆ ಐವತ್ತು ರೂಪಾಯಿ ಕೊಡ್ತಿದ್ರು. ಒಂದು ದಿನಕ್ಕೆ ಹತ್ತು ಹಾಡಿಗೆ ಡ್ಯಾನ್ಸ್ ಮಾಡ್ತಿದ್ದೆ. ಫೇಮಸ್ ಜ್ಯೋತಿ ಮೆಲೋಡೀಸ್ ಜೊತೆ ಎರಡು ವರ್ಷ ಕೆಲಸ ಮಾಡಿದೆ. ಪೇಮೆಂಟ್ ಜಾಸ್ತಿ ಮಾಡಲಿ ಅಂತ ಬೇರೆ ಟೀಂಗೆ ಹೋಗಿದ್ದೆ. ಅಲ್ಲಿ 75 ರೂಪಾಯಿ ಕೊಡ್ತಿದ್ರು. ಮತ್ತೆ ಹಳೆ ಟೀಂನವರು 100 ರೂಪಾಯಿಗೆ ವಾಪಸ್ ಕರೆದರು ಎಂದು ತಮ್ಮ ಆರ್ಕೆಸ್ಟ್ರಾ ದಿನಗಳನ್ನು ಮೆಲುಕು ಹಾಕಿದ್ದಾರೆ. ಇನ್ನೂ ಏನಾದ್ರೂ ಮಾಡಬೇಕು ಅಂತ ತುಮಕೂರಿನಿಂದ ಬೆಂಗಳೂರಿಗೆ ಬಂದೆ. ಆಗೆಲ್ಲ ಆರ್ಕೆಸ್ಟ್ರಾ ಮುಗಿಯೋದು ಮಧ್ಯರಾತ್ರಿ ಆಗ್ತಿತ್ತು. ಆದರೆ ಅಲ್ಲಿ ನನಗೆ ದಿನಕ್ಕೆ 500 ರೂಪಾಯಿ ಕೊಡ್ತಿದ್ರು. ಎಲ್ರೂ ಚೆನ್ನಾಗಿ ನೋಡಿಕೊಳ್ಳುತ್ತಿದ್ರು. ಕೊನೆಗೆ ಅಲ್ಲೇ ಉಳಿದುಕೊಳ್ಳುತ್ತಿದ್ದೆ' ಎಂದು ರಜಿನಿ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ.












Click it and Unblock the Notifications