Navya Nair: ಮಲ್ಲಿಗೆ ಹೂವಿನಿಂದಾಗಿ "ಗಜ" ನಟಿ ನವ್ಯಾ ನಾಯರ್‌ಗೆ ಸಂಕಷ್ಟ, ₹1.14 ಲಕ್ಷ ದಂಡ
ಹೆಣ್ಣುಮಕ್ಕಳು ಮಲ್ಲಿಗೆ ಮುಡಿದರೆ ಹೆಚ್ಚು ಅಂದವಾಗಿ ಕಾಣುತ್ತಾರೆ. ಇದೇ ಕಾರಣಕ್ಕೆ ಮಲ್ಲಿಗೆಯನ್ನು ತಮ್ಮ ಅಲಂಕಾರದಲ್ಲಿ ಪ್ರಮುಖವಾಗಿ ಬಳಸುತ್ತಾರೆ. ಇನ್ನು ಸೀರೆಯುಟ್ಟು ಮಲ್ಲಿಗೆ ಮುಡಿಯುವುದು ಹಿಂದೆ ಸಾಂಪ್ರದಾಯದ ಪ್ರತಿಬಿಂಬ ಎನ್ನಲಾಗುತ್ತಿತ್ತು, ಈಗೆಲ್ಲ ಅದನ್ನೇ ಫ್ಯಾಶನ್ ಎನ್ನುತ್ತಾರೆ. ಆದರೆ ಕನ್ನಡದ ಖ್ಯಾತ ನಟಿಗೆ ಮಲ್ಲಿಗೆ ಹೂವಿನಿಂದಲೇ ಸಂಕಷ್ಟ ಎದುರಾಗಿದೆ. ನಟ ದರ್ಶನ್ ಅವರೊಂದಿಗೆ ಗಜ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟಿ ನವ್ಯಾ ನಾಯರ್ ಅವರಿಗೆ ಮಲ್ಲಿಗೆ ಹೂ ಮೇಲಿನ ಆಸೆಯಿಂದಾಗಿ ಬರೋಬ್ಬರಿ 1.14 ಲಕ್ಷ ರೂಪಾಯಿ ದಂಡ ವಿಧಿಸಿರುವ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.
ದಕ್ಷಿಣ ಭಾರತದಲ್ಲಿ ಮಹಿಳೆಯರು ತಮ್ಮ ಕೂದಲಿಗೆ ಹೂ ಮುಡಿಯುವುದು ಸಾಮಾನ್ಯ. ಇನ್ನು ಮಲಯಾಳಂ ನಟಿಯಾಗಿರುವ ನವ್ಯಾ ನಾಯರ್‌ಗೂ ಮಲ್ಲಿಗೆ ಅಂದ್ರೆ ಪಂಚಪ್ರಾಣವಂತೆ. ಆದರೆ ಇದೇ ಮಲ್ಲಿಗೆ ಹೂವಿನಿಂದಾಗಿ ಲಕ್ಷ ಲಕ್ಷ ದಂಡ ಕಟ್ಟಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. ಭಾರತದಲ್ಲಿ ಮಲ್ಲಿಗೆ ಹೂವಿಗೆ ವಿಶೇಷವಾದ ಸ್ಥಾನವಿದೆ. ಆದರೆ ಓಣಂ ಆಚರಣೆಯಲ್ಲಿ ಭಾಗವಹಿಸಲು ಹೋಗಿ ನಟಿ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಲಯಾಳಿ ಸಂಘ ಆಫ್ ವಿಕ್ಟೋರಿಯಾ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಭಾಗವಹಿಸಲು ನವ್ಯಾ ನಾಯರ್ ಇತ್ತೀಚೆಗೆ ಆಸ್ಟ್ರೇಲಿಯಾಗೆ ತೆರಳಿದ್ದರು. ನವ್ಯಾ ಅವರು 15 ಸೆಂ.ಮೀ ಉದ್ದದ ಮಲ್ಲಿಗೆ ಹೂವಿನ ಮೊಳ ಕೊಂಡೊಯ್ದಿದ್ದಕ್ಕಾಗಿ ಅವರನ್ನು ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಅಲ್ಲದೆ ಅವರಿಗೆ 1 ಲಕ್ಷ ರೂ.ಗಳಿಗೂ ಹೆಚ್ಚು ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಮಲ್ಲಿಗೆ ಹೂವನ್ನು ನಿಷೇಧಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಮಲ್ಲಿಗೆಯನ್ನು ಹೊತ್ತೊಯ್ದಿದ್ದಕ್ಕಾಗಿ ನವ್ಯಾಗೆ ಅವರಿಗೆ 1.14 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ತಿಳಿಯದೆ ಮಾಡಿದ ತಪ್ಪು
"ನಾನು ಇಲ್ಲಿಗೆ ಬರುವ ಮೊದಲು, ನನ್ನ ತಂದೆ ನನಗಾಗಿ ಮಲ್ಲಿಗೆಯನ್ನು ಖರೀದಿಸಿದ್ದರು. ಅವರು ಅದನ್ನು ಎರಡು ಭಾಗಗಳಾಗಿ ಕತ್ತರಿಸಿ ನನಗೆ ಕೊಟ್ಟರು. ನಾನು ತಲುಪುವ ಹೊತ್ತಿಗೆ ಅದು ಒಣಗುತ್ತದೆ ಎಂಬ ಕಾರಣಕ್ಕೆ ಕೊಚ್ಚಿಯಿಂದ ಸಿಂಗಾಪುರಕ್ಕೆ ತೆರಳುವಾಗ ಒಂದನ್ನು ಮುಡಿದಿದ್ದೆ. ಸಿಂಗಾಪುರದಿಂದ ಮುಂದಿನ ಪ್ರಯಾಣದಲ್ಲಿ ನಾನು ಮತ್ತೊಂದನ್ನು ಧರಿಸಲು ಎರಡನೆಯದನ್ನು ನನ್ನ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಲು ನನ್ನ ತಂದೆ ಹೇಳಿದ್ದರು. ನಾನು ಅದನ್ನು ನನ್ನ ಕ್ಯಾರಿ ಬ್ಯಾಗ್‌ನಲ್ಲಿ ಇಟ್ಟಿದ್ದೆ" ಎಂದು ನವ್ಯಾ ಹೇಳಿದ್ದಾರೆ.
"ಆದರೆ ಆಸ್ಟ್ರೇಲಿಯಾದಲ್ಲಿ ಅದು ಕಾನೂನುಬಾಹಿರ ಅನ್ನೋದು ಗೊತ್ತಿರಲಿಲ್ಲ. ನಾನು ಮಾಡಿದ್ದು ಕಾನೂನಿಗೆ ವಿರುದ್ಧ. ಅದು ನಾನು ತಿಳಿಯದೆ ಮಾಡಿದ ತಪ್ಪು. ಆದರೆ ಅದಕ್ಕೆ ಕ್ಷಮೆ ಇರಲಿಲ್ಲ. 15 ಸೆಂ.ಮೀನಷ್ಟು ಮಲ್ಲಿಗೆ ಮೊಳ ತಂದಿದ್ದಕ್ಕಾಗಿ ಅಲ್ಲಿನ ಅಧಿಕಾರಿಗಳು ನನಗೆ 1.14 ಲಕ್ಷ ರೂಪಾಯಿ ದಂಡವನ್ನು ಪಾವತಿಸಲು ಸೂಚಿಸಿದರು. ಅದು ತಪ್ಪೇ ಆದರೂ ಉದ್ದೇಶಪೂರ್ವಕವಾಗಿಲ್ಲ. ಆ ದಂಡವನ್ನು 28 ದಿನಗಳಲ್ಲಿ ಪಾವತಿಸಬೇಕು ಎಂದು ಅವರು ನನಗೆ ಹೇಳಿದರು" ಎಂದು ವಿವರಿಸಿದ್ದಾರೆ. ನಟಿ ನವ್ಯಾ ಅವರು ಎರಡು ದಿನಗಳ ಹಿಂದೆ ಮೆಲ್ಬೋರ್ನ್‌ಗೆ ಹೊರಡುವ ಮೊದಲು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಇದರಲ್ಲಿಯೂ ಅವರು ಮಲ್ಲಿಗೆ ಹೂ ಮುಡಿದಿದ್ದರು.












Click it and Unblock the Notifications