Anupama Parameswaran: 20 ವರ್ಷದ ಯುವತಿ ವಿರುದ್ಧ ದೂರು ದಾಖಲಿಸಿದ "ನಟಸಾರ್ವಭೌಮ" ನಟಿ
ಕನ್ನಡದಲ್ಲಿ "ನಟಸಾರ್ವಭೌಮ" ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ಮತ್ತು ಕುಟುಂಬವನ್ನು ಗುರಿಯಾಗಿಸಿಕೊಂಡು ಸುಳ್ಳು ಮತ್ತು ಅನುಚಿತ ವಿಷಯಗಳು ಹರಡಿರುವ ಹಿನ್ನೆಲೆ ನಟಿ ಅನುಪಮಾ ಪರಮೇಶ್ವರನ್ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ. ಮಾರ್ಫಿಂಗ್ ಮಾಡಿದ ಫೋಟೋಗಳು ಮತ್ತು ಆಧಾರರಹಿತ ಆರೋಪಗಳು ಮಾಡಿರುವ ಹಿನ್ನೆಲೆ ಕೇರಳದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮಿಳುನಾಡಿನ 20 ವರ್ಷದ ಹುಡುಗಿ ಈ ಕೃತ್ಯ ಮಾಡಿರುವುದಾಗಿ ನಟಿ ಆರೋಪಿಸಿದ್ದಾರೆ.
"ಕೆಲವು ದಿನಗಳ ಹಿಂದೆ, ಇನ್‌ಸ್ಟಾಗ್ರಾಂ ಪ್ರೊಫೈಲ್ ನನ್ನ, ನನ್ನ ಕುಟುಂಬದ ಬಗ್ಗೆ ಅತ್ಯಂತ ಅನುಚಿತ ಮತ್ತು ಸುಳ್ಳು ವಿಷಯವನ್ನು ಪ್ರಸಾರ ಮಾಡುತ್ತಿದೆ. ನನ್ನ ಸ್ನೇಹಿತರು ಮತ್ತು ಸಹ-ನಟರನ್ನು ಟ್ಯಾಗ್ ಮಾಡುತ್ತಿದೆ ಎಂದು ನನ್ನ ಗಮನಕ್ಕೆ ಬಂದಿತು. ಪೋಸ್ಟ್‌ಗಳಲ್ಲಿ ಮಾರ್ಫ್ ಮಾಡಿದ ಫೋಟೋಗಳು ಮತ್ತು ಆಧಾರರಹಿತ ಆರೋಪಗಳು ಕೂಡ ಸೇರಿವೆ. ಆನ್‌ಲೈನ್‌ನಲ್ಲಿ ಇಂತಹ ಉದ್ದೇಶಿತ ಕಿರುಕುಳವನ್ನು ನೋಡುವುದು ತುಂಬಾ ದುಃಖಕರವಾಗಿದೆ ಎಂದು ಅನುಪಮಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅವಳ ಹೆಸರು ರಿವೀಲ್ ಮಾಡಲ್ಲ
ನಟಿಯ ಬಗ್ಗೆ ದ್ವೇಷ ಹರಡುವ ಏಕೈಕ ಉದ್ದೇಶದಿಂದ ಅನೇಕ ನಕಲಿ ಖಾತೆಗಳನ್ನು ರಚಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅನುಪಮಾ ತಕ್ಷಣವೇ ಕೇರಳದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಆಶ್ಚರ್ಯಕ್ಕೆ, ಅದು ತಮಿಳುನಾಡಿನ 20 ವರ್ಷದ ಹುಡುಗಿ ಎಂದು ತಿಳಿದುಬಂದಿದೆ. ಅವಳ ಚಿಕ್ಕ ವಯಸ್ಸನ್ನು ಪರಿಗಣಿಸಿ, ನಾನು ಅವಳ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದೇನೆ. ಏಕೆಂದರೆ ಅವಳ ಭವಿಷ್ಯ ಅಥವಾ ಮನಸ್ಸಿನ ಶಾಂತಿಯನ್ನು ನಾನು ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ನಟಿ ಹೇಳಿದ್ದಾರೆ.
ಸ್ಮಾರ್ಟ್‌ಫೋನ್ ಹೊಂದುವುದು ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಪ್ರವೇಶವನ್ನು ಹೊಂದಿರುವುದು ಯಾರಿಗೂ ಕಿರುಕುಳ ನೀಡುವ, ಮಾನಹಾನಿ ಮಾಡುವ ಅಥವಾ ಇತರರ ವಿರುದ್ಧ ದ್ವೇಷವನ್ನು ಹರಡುವ ಹಕ್ಕನ್ನು ನೀಡುವುದಿಲ್ಲ. ಆನ್‌ಲೈನ್‌ನಲ್ಲಿ ನಡೆಯುವ ಪ್ರತಿಯೊಂದು ಆಕ್ಷನ್ ಕೂಡ ಒಂದು ಕುರುಹು ಬಿಡುತ್ತದೆ. ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ. ಮಾಡಿದ ತಪ್ಪಿಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಅನುಪಮಾ ಪರಮೇಶ್ವರನ್ ತಮ್ಮ ಹೇಳಿಕೆಯಲ್ಲಿ, "ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡುವ ಸ್ವಾತಂತ್ರ್ಯವಿದೆ ಎಂದು ಭಾವಿಸಿದರೂ, ಅದು ಯಾರಿಗಾದರೂ ಅವಮಾನ ಅಥವಾ ಅಪವಾದ ಮಾಡಲು ಅವಕಾಶ ನೀಡುವುದಿಲ್ಲ. ಸದ್ಯ ಈಗ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಪ್ರೈವಸಿ ಮತ್ತು ಗೌರವಕ್ಕೆ ಹಕ್ಕಿದೆ ಎಂದು ನಾನು ನಂಬಿದ್ದೇನೆ. ಈ ಘಟನೆಯು ಪಬ್ಲಿಕ್ ಫಿಗರ್‌ಗಳಿಗೂ ಮೂಲಭೂತ ಹಕ್ಕುಗಳು ಇರುತ್ತವೆ ಎಂಬುದನ್ನು ನಮಗೆ ನೆನಪಿಸುತ್ತದೆ. ಸೈಬರ್ ಅಪರಾಧ ಎದುರಿಸಲು ಕಾನೂನು ಸಹಕಾರ ಮತ್ತು ಜಾಗೃತಿ ಅಗತ್ಯ ಎಂದು ಹೇಳಿದ್ದಾರೆ.












Click it and Unblock the Notifications