'ಎಲ್ಲರ ಜೀವನದಲ್ಲಿಯೂ ದುಃಖ ಇರುತ್ತೆ': ಮಾನಸಿಕ ಆರೋಗ್ಯದ ಬಗ್ಗೆ ನಟಿ ಅಮೃತಾ ಹೇಳಿದ್ದೇನು?
ಇತ್ತೀಚೆಗೆ ಕೆಲಸದ ಒತ್ತಡ, ಸಂಬಂಧಗಳಲ್ಲಿ ಸಮಸ್ಯೆ, ಸಾಲ, ಸೋಲು, ಹತಾಶೆಗಳಿಂದ ಖಿನ್ನತೆಗೆ ಜಾರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬಹುತೇಕರು ವಿಫಲರಾಗುತ್ತಿದ್ದು, ಕೊನೆಯಲ್ಲಿ ಸಾವಿಗೆ ಶರಣಾಗಬೇಕು ಎನ್ನುವ ದಾರಿಯನ್ನು ಹಿಡಿಯುತ್ತಿದ್ದಾರೆ. ಇದು ಬಹಳ ಆತಂಕಕಾರಿಯಾದ ಬೆಳೆವಣಿಗೆಯಾಗಿದ್ದು, ಒಬ್ಬ ಮನುಷ್ಯನಿಗೆ ಮಾನಸಿಕ ಆರೋಗ್ಯ ಎನ್ನುವುದು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ನಟಿ ಅಮೃತಾ ಅಯ್ಯಂಗಾರ್ ಮಾತನಾಡಿದ್ದಾರೆ.
ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಎಲ್ಲರಿಗೂ ಮಾನಸಿಕ ಆರೋಗ್ಯ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ನಾನು ಎಲ್ಲರಿಗೂ ಹೇಳುವುದು ಒಂದೇ, ಏನಾದರೂ ಅನಿಸಿದರೆ, ಏನಾದರೂ ಹೇಳ ಬೇಕು ಅಂದರೆ ದಯವಿಟ್ಟು ಯಾರ ಬಳಿಯಾದರೂ ಹಂಚಿಕೊಳ್ಳಿ. ಯಾವತ್ತೂ ನಿಮ್ಮ ಜೀವ ತೆಗೆದುಕೊಳ್ಳಬೇಡಿ. ಜೀವನ ತುಂಬಾ ಮುಖ್ಯ' ಎಂದು ನಟಿ ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.

'ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ನನಗೆ ಅನಿಸುವುದು ಇಷ್ಟೇ. ನಿನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಧೈರ್ಯ ಇದೆ ಅಂದ ಮೇಲೆ, ಬದುಕಲು ಅದರಲ್ಲಿ ಪಾಯಿಂಟ್ ಒಂದು ಧೈರ್ಯ ಅಷ್ಟೇ ಬೇಕಾಗಿರುವುದು. ಜೀವ ತೆಗೆದುಕೊಳ್ಳಲು ತುಂಬಾ ಧೈರ್ಯ ಬೇಕು. ಬದುಕಲು ಅಷ್ಟು ಧೈರ್ಯ ಬೇಡ. ಆರಾಮಾಗಿ ಬದುಕಬಹುದು'.
'ನೀನು ಆ ರೀತಿಯ ಧೈರ್ಯ ಮಾಡಿದ್ದೀಯಾ ಅಂದ ಮೇಲೆ ಏನೇ ಇದ್ದರೂ ಮಾತನಾಡಿ. ನಾನು ಗುರುಪ್ರಸಾದ್ ಸರ್ ಅವರ ಘಟನೆ ನೋಡಿದ ಮೇಲೆ ನನಗೆ ತುಂಬಾ ಡಿಸ್ಟರ್ಬ್ ಆಯ್ತು. ಅವರಂತಹ ಒಬ್ಬ ನಿರ್ದೇಶಕನಿಗೆ ಮಾತನಾಡಲು ಯಾರೂ ಸಿಗಲಿಲ್ವಾ?. ಅವರು ಕೂಡ ಯಾರ ಜೊತೆಗೂ ಮಾತನಾಡಿಲ್ವಾ? ಅನಿಸಿ ಬಿಡ್ತು ನನಗೆ ತುಂಬಾ ಸಲ' ಎಂದರು.
'ಮಾನಸಿಕ ಆರೋಗ್ಯ ಎನ್ನುವುದು ತುಂಬಾ ಮುಖ್ಯ. ನಿಮಗೆ ಲೋ ಆದಾಗ, ಡಿಪ್ರೆಷನ್ ಆದಾಗ ತುಂಬಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ..ಮಾನಸಿಕ ಆರೋಗ್ಯದ ಬಗ್ಗೆ ಅಷ್ಟೇ ಕಾಳಜಿ ವಹಿಸಿ. ಮೆಂಟಲಿ ಸ್ಟೇಬಲ್ ಆಗಿರುವುದು ತುಂಬಾನೇ ಮುಖ್ಯ' ಎಂದರು.

'ಎಲ್ಲರ ಜೀವನದಲ್ಲಿಯೂ ಹೋರಾಟಗಳಿರುತ್ತದೆ. ಎಲ್ಲರ ಜೀವನದಲ್ಲಿಯೂ ಸಮಸ್ಯೆ ಇರುತ್ತದೆ. ಎಲ್ಲರ ಜೀವನದಲ್ಲಿಯೂ ದುಃಖ ಇರುತ್ತದೆ. ತುಂಬಾ ದುಡ್ಡಿರುವವರು ನೆಮ್ಮದಿಯಾಗಿ ಖಂಡಿತಾ ಇರುವುದಿಲ್ಲ. ಮುಂದೇನಾಗುತ್ತೋ ಯಾರಿಗೂ ಗೊತ್ತಿಲ್ಲ. ಇವತ್ತು ನೀವು ಬದುಕಿದ್ದೀರಾ ಅಂದ ಮೇಲೆ ನಿಮಗೆ ಇರುವ ಒತ್ತಡದ ಬಗ್ಗೆ ಮಾತನಾಡಿ. ಮಾನಸಿಕ ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ. ಅದರ ಬಗ್ಗೆ ಏನೇನು ಕಾಳಜಿ ಮಾಡಬೇಕು ಅದನೆಲ್ಲಾ ತೆಗೆದುಕೊಳ್ಳಿ' ಎಂದು ಒತ್ತಡ ಹಾಗೂ ಖಿನ್ನತೆಗೊಳಗಾಗಿರುವವರಿಗೆ ನಟಿ ಅಮೃತಾ ಅಯ್ಯಂಗಾರ್ ಕೆಲವು ಸಲಹೆ ನೀಡಿದ್ದಾರೆ.












Click it and Unblock the Notifications