ಕೃಷ್ಣ ಜನ್ಮಾಷ್ಟಮಿಯಂದೇ ಮುದ್ದುಮಗನ ನಾಮಕರಣ, ವಿಶೇಷ ಹೆಸರಿಟ್ಟ ವಸಿಷ್ಠ-ಹರಿಪ್ರಿಯಾ
ಸ್ಯಾಂಡಲ್‌ವುಡ್‌ನ ತಾರಾಜೋಡಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರ ಮುದ್ದಾದ ಪುತ್ರನ ನಾಮಕರಣ ಕೃಷ್ಣಜನ್ಮಾಷ್ಟಮಿಯಂದೇ ನೆರವೇರಿದೆ. ಈ ವಿಶೇಷ ದಿನವೇ ತಮ್ಮ ಮುದ್ದು ಕೃಷ್ಣನಿಗೆ ಸಿಂಹಪ್ರಿಯಾ ಜೋಡಿ ವಿಶೇಷ ಹೆಸರಿಟ್ಟಿದೆ. ಇಂದು ನಡೆದ ಅದ್ಧೂರಿ ನಾಮಕರಣ ಮಹೋತ್ಸವಕ್ಕೆ ಸೆಲೆಬ್ರಿಟಿಗಳು ಕೂಡ ಸಾಕ್ಷಿಯಾಗಿದ್ದಾರೆ. ಇನ್ನು ಹರಿಪ್ರಿಯಾ ಅವರ ಪುತ್ರನಿಗೆ ಇಟ್ಟಿರುವ ಹೆಸರು ಕೂಡ ಮುದ್ದಾಗಿದೆ.
ಈ ಜೋಡಿಗೆ ಮಗು ಜನಿಸಿ ಹಲವು ತಿಂಗಳಾದರೂ ಎಲ್ಲಿಯೂ ಸಾರ್ವಜನಿಕರವಾಗಿ ಮುಖ ತೋರಿಸಿರಲಿಲ್ಲ. ಇಂದು ನಾಮಕರಣ ಮಾಡುವ ಮೂಲಕ ತಮ್ಮ ಪುತ್ರನನ್ನ ಎಲ್ಲರಿಗೂ ಪರಿಚಯಿಸಿದ್ದಾರೆ. ಇಡೀ ಕುಟುಂಬ ಹಳದಿ ಬಣ್ಣದ ವಿಶೇಷ ಉಡುಗೆ ತೊಟ್ಟು ಮಿಂಚಿದೆ. ಕೃಷ್ಣ ಜನ್ಮಾಷ್ಟಮಿಯ ವಿಶೇಷ ದಿನದಂದೇ ಮಗನ ನಾಮಕರಣ ನೆರವೇರಿದ್ದು, ಮಗನಿಗೆ ವಿಪ್ರಾ ಎನ್.ಸಿಂಹ ಎಂಬ ಹೆಸರಿಡಲಾಗಿದೆ.

ಮಗನಿಗೆ ಇಟ್ಟಿರೋ ʻವಿಪ್ರಾʼ ಎಂಬ ಹೆಸರಿನ ಬಗ್ಗೆ ಅರ್ಥೈಸಿರುವ ನಟಿ ಹರಿಪ್ರಿಯಾ, ನಮ್ಮಿಬ್ಬರ ಹೆಸರಿನ ಮೊದಲಿನ ಅಕ್ಷರಗಳಾದ ವಿ ಹಾಗೂ ಎಚ್ ಎರಡೂ ಅವನ ಹೆಸರಲ್ಲಿದೆ. ಹಾಗಾಗಿ ಅರ್ಥಪೂರ್ಣ ಹಾಗೂ ವಿಭಿನ್ನವಾದ ಹೆಸರಿಡಬೇಕು ಎಂದು ನಾವು ಮೊದಲಿನಿಂದಲೇ ಪ್ಲ್ಯಾನ್ ಮಾಡಿದ್ದೆವು. ಮಗ ಬೆಳೆದು ದೊಡ್ಡವನಾದ ಮೇಲೆ ಯಾಕೆ ಇಂತಹ ಹೆಸರಿಟ್ಟಿದ್ದು ಎಂದು ಕೇಳಬಾರದು. ಹಾಗಾಗಿ ಈ ಹೆಸರನ್ನು ಇಟ್ಟಿದ್ದೇವೆ ಎಂದಿದ್ದಾರೆ.
ವಿಪ್ರಾ ಹೆಸರಿನ ಅರ್ಥವೇನು?
ಇವನು ನಮ್ಮ ಜೀವನದ ವಿಐಪಿ. ಹಾಗಾಗಿ ಅವನ ಹೆಸರಿನಲ್ಲೂ ವಿಐಪಿ ಇರಲಿ ಎಂದು ವಿಪ್ರಾ ಎಂದು ನಾಮಕರಣ ಮಾಡಿದ್ದೇವೆ. ಅವನ ಹೆಸರು ಇಂಗ್ಲಿಷ್‌ನ V ಇಂದ ಶುರುವಾಗಿ Hನಿಂದ ಕೊನೆಗೊಳ್ಳುತ್ತದೆ. ವಿಪ್ರಃ ಅಂದ್ರೆ ಎಂದರೆ ಶಿವತತ್ವ, ಎರಡು ಶಕ್ತಿಗಳ ಆಶೀರ್ವಾದ. ಹೀಗಾಗಿ ಈ ಹೆಸರಿನಲ್ಲಿ ವಿಶಿಷ್ಟವಾದ ಅರ್ಥವೂ ಇದೆ ಎಂದು ಎಂದು ವಸಿಷ್ಠ ಹಾಗೂ ಹರಿಪ್ರಿಯಾ ಹೇಳಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಾದ ನಟಿ ಪ್ರಣಿತಾ ಸುಭಾಷ್, ಸೋನಲ್ ಮೊಂಥೆರೋ, ಗರುಡಾ ರಾಮ್ ಸೇರಿದಂತೆ ಹಲವರು ಈ ನಾಮಕರಣದಲ್ಲಿ ಭಾಗಿಯಾಗಿದ್ದರು. ಪ್ರಣಿತಾ ಅವರು ಹರಿಪ್ರಿಯಾ ಮಗನೊಂದಿಗೆ ಆಟವಾಡಿರುವ ವಿಡಿಯೋ ಕೂಡ ಹರಿದಾಡಿದೆ.
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮೊದಲಿನಿಂದಲೂ ಲವ್‌ನಲ್ಲಿದ್ದರು. ಆದರೆ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಮದುವೆಗೆ ಕೆಲವೇ ದಿನಗಳು ಬಾಕಿ ಇದ್ದಾಗ ಅವರು ಈ ವಿಚಾರ ರಿವೀಲ್ ಮಾಡಿದ್ದರು. 2023ರ ಜನವರಿಯಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಮದುವೆ ವಾರ್ಷಿಕೋತ್ಸವದಂದೇ ಮೊದಲ ಮಗುವನ್ನು ಸ್ವಾಗತಿಸಿದ್ದರು.
ಈ ಜೋಡಿಯನ್ನ ಸಿಂಹಪ್ರಿಯಾ ಎಂದು ಅಭಿಮಾನಿಗಳು ಕರೆಯುತ್ತಾರೆ. ಮಗು ಹುಟ್ಟಿದಾಗಲೂ ಇವರು ಸಿಂಹಗಳ ಫೋಟೋ ಹಂಚಿಕೊಂಡಿದ್ದರು. ಮರಿಸಿಂಹನ ಪೋಸ್ಟರ್ ಹಂಚಿಕೊಂಡು "ಅವನು ನಮ್ಮ ಮದುವೆಯ ದಿನದಂದೇ ಬಂದ" ಎಂದು ಪೋಸ್ಟ್ಗೆ ಕ್ಯಾಪ್ಷನ್ ಕೊಟ್ಟಿದ್ದರು. ಇಂದು ಮಗನಿಗೆ ಹೆಸರಿಟ್ಟು ಫುಲ್ ಖುಷಿಯಾಗಿದೆ ಜೋಡಿ.












Click it and Unblock the Notifications