Yash: 'ಬಲವಂತವಾಗಿ ಕನ್ನಡ ಕಲಿಸಬೇಡಿ' ಎಂದ ಯಶ್ ಮೇಲೆ ಕನ್ನಡಿಗರು ಗರಂ, ಏಕೆ?
ನಟ ಯಶ್ ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ್ದಾರೆ ಎನ್ನುವ ಮಾತಿದೆ. ಮೊದಲಿನಿಂದಲೂ ಕನ್ನಡದ ವಿಚಾರದಲ್ಲಿ ಸದಾ ನಿಲ್ಲುವ ನಟ ಯಶ್. ಆದರೆ ಇತ್ತೀಚೆಗೆ ಅವರು ಕನ್ನಡದ ಬಗ್ಗೆ ಆಡಿರುವ ಒಂದೇ ಒಂದು ಮಾತು ವಿರೋಧಕ್ಕೆ ಕಾರಣವಾಗುತ್ತಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಯಶ್, "ಬಲವಂತವಾಗಿ ಕನ್ನಡ ಕಲಿಸೋದು ಬೇಡ" ಎಂದಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಯಶ್ ಅವರಿಗೆ ಕನ್ನಡ ವಿರೋಧಿ ಎನ್ನುವ ಪಟ್ಟವನ್ನೂ ಕಟ್ಟಿದ್ದಾರೆ.
ಇತ್ತೀಚೆಗೆ ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ್ದ ಯಶ್, ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು, ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ ಎಂದು ಪೋಸ್ಟ್ ಮಾಡಿದ್ದರು. ಅಲ್ಲದೆ ಆದಾಯ ತೆರಿಗೆ ಇಲಾಖೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಶ್ ಮಾತನಾಡಿದ್ದರು. "ನಮಗೆಲ್ಲ ಒಂದು ಖುಷಿ ಏನು ಅಂದ್ರೆ, ಬೆಂಗಳೂರು ಹಾಗೂ ಕರ್ನಾಟಕಕ್ಕೆ ಎಲ್ಲ ಕಡೆಯಿಂದ ಬಂದವರು ಜನಗಳ ಬಗ್ಗೆ ಒಳ್ಳೆಯದು ಮಾತನಾಡ್ತಾರೆ. ಇಲ್ಲಿ ವೆದರ್ ಮಾತ್ರವಲ್ಲ, ಜನ ಕೂಡ ಒಳ್ಳೆಯವರು. ನಮ್ಮ ಕನ್ನಡ ಹಾಗೂ ಕನ್ನಡಿಗರ ಸ್ವಭಾವ, ಪ್ರೀತಿ ಇನ್ನೂ ಹೆಚ್ಚಾಗಲಿ. ಎಲ್ಲರಿಗೂ ಕನ್ನಡವನ್ನು ಕಲಿಸೋಣ, ಆದರೆ ಬಲವಂತವಾಗಿ ಯಾರಿಗೂ ಏನನ್ನೂ ಕಲಿಸೋಕೆ ಆಗಲ್ಲ. ಹಾಗಾಗಿ ಭಾಷೆ ಕಲೀರಿ ಎಂದು ಫೈಟ್ ಮಾಡುವ ಬದಲು, ಕನ್ನಡ ಗೊತ್ತಿಲ್ಲದಿದ್ದರೆ ಇಲ್ಲಿ ಕಷ್ಟ ಎನ್ನುವ ಭಾವನೆ ಬರುವಂತೆ ಮಾಡಬೇಕು ಎಂದು ಅಭಿಪ್ರಾಯ ತಿಳಿಸಿದ್ದರು. ಇದು ಸದ್ಯ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.

ಬೇರೆ ಭಾಷೆಯವರ ದಬ್ಬಾಳಿಕೆ ಕಾಣಿಸ್ತಿಲ್ವಾ?
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವರು ಯಶ್ ಹೇಳಿದ್ದು ಸರಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು "ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಅಂತ ಕನ್ನಡದ ಬಗ್ಗೆ ಮೃದು ಸ್ವಭಾವ ತೋರುತ್ತಿದ್ದಾರೆ" ಎಂದು ಖಂಡಿಸಿದ್ದಾರೆ. ಕೆಲ ಕನ್ನಡಿಗರು ನಟ ಯಶ್ ಮಾತನಾಡಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. "ಯಶ್ ಅವರು ಕನ್ನಡವನ್ನು ಬಲವಂತವಾಗಿ ಕಲಿಸೋದು ಬೇಡ ಎಂದಿದ್ದು ಸರಿ. ಆದರೆ ಕರ್ನಾಟಕದಲ್ಲಿ ಎಲ್ಲೆಡೆ ಬಲವಂತವಾಗಿ ಹಿಂದಿ ಹೇರಿಕೆ ನಡೆಯುತ್ತಿದೆ. ಈ ಬಗ್ಗೆ ಯಶ್ ಯಾಕೆ ಮಾತನಾಡಲ್ಲ?" ಎಂದು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ.
"ಇಲ್ಲಿವರೆಗೆ ತಣ್ಣಗಾಗಿ ಮಲಗಿದ್ದ ಕನ್ನಡಿಗರನ್ನ ಹೇಗೋ ಕಷ್ಟಪಟ್ಟು ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದ್ದಾರೆ. ಆದರೆ ಯಶ್ ತರಹದವರು ಅವರನ್ನ ಏಕೆ ಮತ್ತೆ ಮಲಗಿಸುತ್ತಿದ್ದಾರೆ?" ಎಂದು ಕಾಮೆಂಟ್ ಮಾಡಿದ್ದಾರೆ. "ಯಶ್ ನೀವು ನಿಮ್ಮ ಎರಡು ಸಿನಿಮಾ ಕಲೆಕ್ಷನ್‌ಗೋಸ್ಕರ ಕನ್ನಡ ತಾಯಿಗೆ ದ್ರೋಹ ಬಗೆಯಬೇಡಿ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಯಶ್ ಬೆಂಬಲಕ್ಕೆ ನಿಂತಿದ್ದಾರೆ. "ಬಲವಂತದಿಂದ ಕನ್ನಡ ಕಲಿಸೋದು ಹೇಗೆ ಸಾಧ್ಯ? ಇದರಲ್ಲಿ ತಪ್ಪು ಏನಿದೆ? ಯಶ್ ಹೇಳಿದ್ದು ಸರಿಯಾಗಿ ಇದೆ. ಕನ್ನಡ ಉಪಯೋಗಿಸುವ ಅವಶ್ಯಕತೆ ಸೃಷ್ಟಿಸಿ ಸಾಕು" ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
"ಯಶ್ ಎಲ್ಲ ಕನ್ನಡ ಭಾಷಾ ಭಯೋತ್ಪಾದಕರಿಗೆ ಚೆನ್ನಾಗಿ ಕಿವುಚಿದ್ದಾರೆ. ಯಶ್ ರೀತಿ ಯೋಚನೆ ಮಾಡುವ ಜನಗಳ ಸಂತತಿ ಜಾಸ್ತಿ ಅಗಲಿ. ನಿಮಗೆ ಶಾಪ ಹಾಕುವ ಪಾಪಿಗಳ ಸಂತತಿ ನಶಿಸಿ ಹೋಗಲಿ" ಎಂದು ಹೇಳಿದ್ದಾರೆ. "ಯಶ್ ಮಾತಲ್ಲಿ ಅದರಲ್ಲಿ ತಪ್ಪೇನಿದೆ? ಕರುಣೆ ತೋರಿಸೋದೆ, ಕರುನಾಡಿನ ಗುಣ. ಅದನ್ನ ಭಾಷೆ ಹೆಸರಲ್ಲಿ ಹಾಳು ಮಾಡಬೇಡಿ. ಯಶ್ ಹೇಳ್ತಿರೋದು ಸರಿ ಇದೆ" ಎಂದಿದ್ದಾರೆ. ಯಶ್ ಅವರ ಮಾತು ಸರಿ ಇದೆ. ಕನ್ನಡ ಕಲಿತೋರೆಲ್ಲ ಕನ್ನಡಿಗರಲ್ಲ, ಇಲ್ಲಿನ ಬಹುತೇಕರು ಕನ್ನಡ ಕಲಿತಿದ್ದರೂ ಕೂಡ ಕನ್ನಡ ಪರ ಇಲ್ಲ" ಎಂದಿದ್ದಾರೆ.












Click it and Unblock the Notifications