39ನೇ ವಿವಾಹ ವಾರ್ಷಿಕೋತ್ಸವಕ್ಕೆ ಸ್ಪೆಷಲ್ ಫೋಟೋಸ್ ಹಂಚಿಕೊಂಡ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ದಂಪತಿ ಇಂದು 39ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂತಸದಲ್ಲಿ ಶಿವಣ್ಣ ತಮ್ಮ ಜೋಡಿಯ ಸ್ಪೆಷಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ ಹಾಗೂ ಗೀತಕ್ಕ ದಂಪತಿಯ ಅಪರೂಪದ ನಾಲ್ಕು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಶಿವಣ್ಣನ ಅಭಿಮಾನಿಗಳು ಈ ಫೋಟೋ ನೋಡಿ ಫುಲ್ ಖುಷ್ ಆಗಿ ವಿಶ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ಶಿವಣ್ಣ ಹಂಚಿಕೊಂಡಿರುವ ಫೋಟೋಗಳ ಪೈಕಿ ತಮ್ಮ ಮದುವೆಯ ಫೋಟೋ, ಸಿನಿಮಾ ಶೂಟಿಂಗ್ ವೇಳೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವ ಫೋಟೋ, ಇತ್ತೀಚೆಗೆ ತೆಗೆಸಿಕೊಂಡಿರುವ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 39 ವರ್ಷಗಳ ಒಡನಾಟ ಎಂದು ಹಾರ್ಟ್ ಸಿಂಬಲ್‌ನೊಂದಿಗೆ ಶಿವಣ್ಣ ಬರೆದುಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ದಶಕಗಳಿಂದ ಮಿಂಚುತ್ತಿರುವ ಶಿವರಾಜ್‌ಕುಮಾರ್ ದೊಡ್ಮನೆಯ ದೊಡ್ಡ ಕುಡಿ. ರಾಜ್‌ಕುಮಾರ್ ಅವರ ಹಿರಿಯ ಪುತ್ರರಾಗಿರುವ ಶಿವಣ್ಣ ಅಂದಿನಿಂದ ಇಂದಿನವರೆಗೂ ವಯಸ್ಸೇ ಆಗದ ನಟ ಎಂದು ಕರೆಸಿಕೊಂಡಿದ್ದಾರೆ. 1986ರ ಮೇ 19ರಂದು ಶಿವರಾಜ್ ಕುಮಾರ್ ಹಾಗೂ ಗೀತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಅವರು ಏಳು ಬೀಳುಗಳನ್ನು ಕಂಡಿದ್ದಾರೆ. ಸಂತೋಷ, ದುಃಖ ಎಲ್ಲವನ್ನೂ ಸ್ವೀಕರಿಸುತ್ತಾ ಸುಂದರ ಬದುಕಿಗೆ ಸಾಕ್ಷಿಯಾಗಿದ್ದಾರೆ. ಇಂದಿಗೆ ಶಿವಣ್ಣ ಹಾಗೂ ಗೀತಾ ಅವರು ವಿವಾಹವಾಗಿ 39 ವರ್ಷಗಳಾಗಿವೆ. ಇಂದು ಶಿವಣ್ಣನ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.
ಗೀತಕ್ಕ ಶಿವರಾಜ್ಕುಮಾರ್ ಅವರನ್ನು ಪ್ರತಿ ಹಂತದಲ್ಲೂ ಬೆಂಬಲಿಸುತ್ತಾ ಬಂದಿದ್ದಾರೆ. ಇದನ್ನು ಖುದ್ದು ಶಿವಣ್ಣ ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್‌ನಿಂದ ಬಳಲಿದಾಗಲೂ ಅವರ ಸಂಪೂರ್ಣ ಆರೈಕೆಗೆ ಬೆನ್ನೆಲುಬಾಗಿ ನಿಂತಿದ್ದೇ ಗೀತಕ್ಕ ಎಂದಿದ್ದರು. ಅಂತಹ ಪರಿಸ್ಥಿತಿಯಲ್ಲೂ ನನ್ನ ಬೆಂಬಲಿಸಿ ಜೊತೆಗೆ ಇದ್ದಿದ್ದು ಗೀತಾ ಎಂದು ಕೊಂಡಾಡಿದ್ದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇತ್ತೀಚೆಗಷ್ಟೇ ಅಮೇರಿಕಾದಲ್ಲಿ ಕ್ಯಾನ್ಸರ್‌ಗೆ ಸರ್ಜರಿ ಆಗಿತ್ತು. ಒಂದು ತಿಂಗಳಮಟ್ಟಿಗೆ ಶಿವಣ್ಣ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ಈ ವೇಳೆಯೂ ಗೀತಕ್ಕ ಶಿವಣ್ಣ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ದಿಟ್ಟವಾಗಿ ನಿಂತಿದ್ದರು. ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಶಿವಣ್ಣನಿಗೆ ಇತ್ತೀಚೆಗೆ ಸರ್ಜರಿ ನಡೆದಿತ್ತು. ಬಳಿಕ ಅವರು ಸಂಪೂರ್ಣ ಗುಣಮುಖರಾಗಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಕೆಲಕಾಲ ವಿಶ್ರಾಂತಿ ಪಡೆದ ನಂತರ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಗೀತಕ್ಕ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಪುತ್ರಿ. ಮೂಲತಃ ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಗೀತಕ್ಕ ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ಶಾಸಕ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಇವರ ಸಹೋದರರಿಬ್ಬರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರೆ, ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ತನ್ನ ಅತ್ತೆ ಪಾರ್ವತಮ್ಮ ಅವರು ಸಿನಿಮಾಗೆ ಸಂಬಂಧಿಸಿದಂತೆ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಈಗ ಅದೇ ಹಾದಿಯಲ್ಲಿ ಗೀತಕ್ಕ ಕೂಡ ಸಾಗಿದ್ದಾರೆ.












Click it and Unblock the Notifications