Shiva Rajkumar: 'ನಿಮ್ಮಂತೆ ಡಾಕ್ಟರ್ ಕೂಡ ನಮಗೆ ದೇವರಾಗಿದ್ದಾರೆ': ಗೀತಕ್ಕ ಭಾವುಕ
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ ಅಂದರೆ ಡಿಸೆಂಬರ್ 24ರಂದು ಅವರಿಗೆ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು 6 ಗಂಟೆಗಳ ಕಾಲ ತಜ್ಞ ವೈದ್ಯರ ತಂಡ ನಡೆಸಿದ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಭಾರತೀಯ ಮೂಲದ ತಜ್ಞ ವೈದ್ಯರ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಐಸಿಯುನಲ್ಲಿ ಶಿವಣ್ಣಗೆ ಚಿಕಿತ್ಸೆ ಮುಂದುವರಿದಿದ್ದು, ಇನ್ನೊಂದು ವಾರ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ. ಬಳಿಕ ಅಲ್ಲಿನ ಮನೆಗೆ ಶಿಫ್ಟ್ ಆಗಲಿರುವ ಶಿವಣ್ಣ, ಸಂಪೂರ್ಣ ಚಿಕಿತ್ಸೆಯ ಬಳಿಕ ಮುಂದಿನ ತಿಂಗಳು ಅಂದರೆ ಜನವರಿ ಅಂತ್ಯದ ವೇಳೆಗೆ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎನ್ನುವುದು ಸದ್ಯದ ಮಾಹಿತಿಯಾಗಿದೆ.

ಇನ್ನು ಶಿವರಾಜ್ ಕುಮಾರ್ ಅವರ ಸದ್ಯದ ಆರೋಗ್ಯ ಸ್ಥಿತಿ ಮತ್ತು ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಗ್ಗೆ ಮೊದಲ ಬಾರಿಗೆ ಅವರ ಧರ್ಮಪತ್ನಿ ಗೀತಾ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ವಿಡಿಯೋ ಹೇಳಿಕೆ ನೀಡಿರುವ ಗೀತಕ್ಕ ವೈದ್ಯರ ತಂಡಕ್ಕೆ ಧನ್ಯವಾದ ಹೇಳಿ ಭಾವುಕರಾಗಿದ್ದಾರೆ.
'ಎಲ್ಲರಿಗೂ ನಮಸ್ಕಾರ ನಾವು ಈ ದೇಶಕ್ಕೆ ಏನು ವಿಷಯಕ್ಕೆ ಎಂದು ಬಂದಿದ್ದೇವು ಅದು ಈಗ ಯಶಸ್ವಿಯಾಗಿದೆ. ನೀವು ಹೇಗೆ ನಮಗೆ ಅಭಿಮಾನಿಗಳು ದೇವರಾಗುತ್ತೀರೋ, ಅದೇ ರೀತಿ ಡಾಕ್ಟರ್ ಕೂಡ ನಮಗೆ ದೇವರಾಗಿದ್ದಾರೆ. ಯಾಕೆಂದರೆ ಶಿವಣ್ಣ ಅವರಿಗೆ ಆಪರೇಷನ್ ಚೆನ್ನಾಗಿ ಆಯ್ತು. ಈಗ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ'.

'ಡಾಕ್ಟರ್ ಈಗಾಗಲೇ ಎಲ್ಲವನ್ನೂ ಹೇಳಿದ್ದಾರೆ. ನೀವೆಲ್ಲರೂ ಶಿವರಾಜ್ ಕುಮಾರ್ ಅವರಿಗೋಸ್ಕರ ಪೂಜೆಗಳನ್ನು ಮಾಡಿದ್ದೀರಿ. ಅವರಿಗೆ ಒಳ್ಳೆದಾಗಲಿ ಎಂದು ಬಯಸಿ ಬೇಡಿಕೊಂಡಿದ್ದೀರಿ. ನೀವೆಲ್ಲಾ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಇವತ್ತು ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಚೆನ್ನಾಗಿ ಆಗಿ, ಆಪರೇಷನ್ ಯಶಸ್ವಿಯಾಗಲು ನಮ್ಮ ಡಾಕ್ಟರ್ ಮನೋಹರ್ ಅವರೇ ಕಾರಣ ಅಂತಾ ನಾನು ಹೇಳಲು ಇಷ್ಟಪಡುತ್ತೇನೆ'.
'ನಾವು ಇಲ್ಲಿಗೆ ಬಂದು ಏನು ಸಾಧಿಸಬೇಕು ಅಂತಿದ್ದೇವು. ಅದನ್ನು ನಾವು ಮಾಡಿದ್ದೇವೆ. ನಮ್ಮ ಡಾಕ್ಟರ್ ಹಾಗೂ ಅವರ ತಂಡದ ಸಹಾಯದಿಂದ ನಾವು ಇವತ್ತು ಅಂದುಕೊಂಡಿರುವುದನ್ನು ಮಾಡಿದ್ದೇವೆ. ಸದ್ಯದಲ್ಲೇ ಶಿವರಾಜ್ ಕುಮಾರ್ ಅವರು ನಿಮ್ಮ ಹತ್ತಿರ ಎಲ್ಲಾ ಮಾತನಾಡುತ್ತಾರೆ. ಈಗ ಸ್ವಲ್ಪ ಸುಸ್ತಾಗಿರುವುದರಿಂದ ಇನ್ನು ಮೂರ್ನಾಲ್ಕು ದಿನಗಳಲ್ಲಿ ಅವರು ಬಂದು ನಿಮ್ಮ ಜೊತೆ ಮಾತನಾಡುತ್ತಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವಾಗಲೂ ಚಿರ ಋಣಿಯಾಗಿರುತ್ತೇನೆ. ನಾನು ಯಾವತ್ತೂ ನಿಮ್ಮನ್ನು ಹಾಗೂ ನಮ್ಮ ಡಾಕ್ಟರ್ ಅನ್ನು ನನ್ನ ಜನ್ಮದಲ್ಲಿಯೇ ಮರೆಯುವುದಿಲ್ಲ' ಎಂದು ಗೀತಾ ಶಿವರಾಜ್ ಕುಮಾರ್ ಅವರು ಭಾವುಕರಾಗಿ ಮಾತನಾಡಿದ್ದಾರೆ.












Click it and Unblock the Notifications