ನಿಮ್ಮ ವೈಯಕ್ತಿಕ ಅನುಭವವನ್ನ ಇಡೀ ಇಂಡಸ್ಟ್ರಿ ಮೇಲೆ ಹೇರಬೇಡಿ: ರೊಚ್ಚಿಗೆದ್ದ ಸತೀಶ್ ನೀನಾಸಂ
ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಆಡಿರುವ ಮಾತುಗಳು ವಿವಾದ ಸೃಷ್ಟಿಸಿದೆ. ಕನ್ನಡ ಸಿನಿಮಾವೊಂದರಲ್ಲಿ ನಟಿಸುವಾಗ ಆದ ಕೆಟ್ಟ ಅನುಭವ, ವರ್ತನೆ ಕುರಿತು ಹೇಳಿಕೊಂಡಿರುವ ಅವರು ಒಟ್ಟಾರೆ ಕನ್ನಡ ಚಿತ್ರರಂಗ ಹಿಂದುಳಿದೆ. ಇಡೀ ದೇಶದಲ್ಲೇ ಸ್ಯಾಂಡಲ್‌ವುಡ್ ಅನಾಗರಿಕ ಚಿತ್ರರಂಗ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೆಳವಾಡಿ ಅವರ ಹೇಳಿಕೆ ಕುರಿತು ನಟ ನೀನಾಸಂ ಸತೀಶ್ (Sathish Ninasam) ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ನೂರಾರು ವರ್ಷಗಳಿಂದ ಕನ್ನಡ ಚಿತ್ರರಂಗ ನಡೆಯುತ್ತಿದೆ. ಇಲ್ಲಿ ತುಂಬಾ ಒಳ್ಳೆ ನಿರ್ಮಾಪಕರು ಬಂದಿದ್ದಾರೆ. ಅದರಿಂದಲೇ ಇಂಡಸ್ಟ್ರಿ ಬದುಕಿದೆ. ಇಷ್ಟು ಮಂದಿ ಇದ್ದೇವೆ, ಎಲ್ಲರೂ ಅನ್ನ ತಿಂತಿದ್ದೀವಿ. ನಾವೆಲ್ಲರೂ ಶಿಸ್ತಿನಿಂದ ಕೆಲಸ ಮಾಡುತ್ತಿದ್ದೇವೆ. ನೂರಾರು ಚಿತ್ರತಂಡಗಳು ಕೆಲಸ ಮಾಡುತ್ತಿವೆ. ಯಾವುದೋ ಒಂದು ಟೀಂ ಮಾಡಿದ ಕೆಲಸಕ್ಕೆ ಇಡೀ ಕನ್ನಡ ಚಿತ್ರರಂಗದ ಬಗ್ಗೆ ಆ ರೀತಿ ಮಾತನಾಡಿರುವುದು ಸರಿಯಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ನನಗೆ ಪ್ರಕಾಶ್ ಬೆಳವಾಡಿ ಅವರ ಮೇಲೆ ತುಂಬಾ ಗೌರವ ಇದೆ. ಅವರು ನನ್ನ ಸ್ನೇಹಿತರು, ಹಿರಿಯರು ಹಾಗೂ ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಾನು ತುಂಬಾ ಇಷ್ಟಪಡುವ ನಟ ಕೂಡ. ಆದರೆ ನಿಮ್ಮ ಒಂದೇ ಅನುಭವವನ್ನ ಎಲ್ಲರೂ ಮೇಲೂ ಹೇರುವುದಕ್ಕೆ ಆಗಲ್ಲ' ಎಂದು ನಟ ಸತೀಶ್ ಗರಂ ಆಗಿ ಉತ್ತರಿಸಿದ್ದಾರೆ.
'ನನ್ನ ಪ್ರಕಾರ ಅವರು ಮಾತನಾಡಿರುವುದು ತುಂಬಾ ತಪ್ಪು. ಅವರು ಯಾಕೆ ಆ ರೀತಿ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅವರು ಹೇಳಿದಂತೆ ಕನ್ನಡ ಸಿನಿಮಾಗಳಲ್ಲಿ ಕಲಾವಿದರಿಗೆ ಕಾಂಟ್ರ್ಯಾಕ್ಟ್ ಇಲ್ಲ ಅನ್ನೋದು ಸುಳ್ಳು. ನಮ್ಮ ಸಿನಿಮಾದಲ್ಲೇ ಪ್ರತಿ ಕಲಾವಿದರಿಗೂ ಅಗ್ರಿಮೆಂಟ್ ಇದೆ. ಒಂದು ವೇಳೆ ನೀವು ಮಾಡಿಕೊಂಡಿಲ್ಲ ಅಂದಾಗ ಕೇಳಬೇಕಿತ್ತು' ಎಂದು ಪ್ರಕಾಶ್ ಬೆಳವಾಡಿ ಅವರಿಗೆ ತಿರುಗೇಟು ನೀಡಿದ್ದಾರೆ.
'ಬೆಳವಾಡಿ ಅವರು ಇಡೀ ಇಂಡಸ್ಟ್ರಿ ಬಗ್ಗೆ ಆ ಹೇಳಿಕೆ ನೀಡಿರುವುದನ್ನು ನಾನು ಒಪ್ಪಲ್ಲ. ಪ್ರತಿ ಕ್ಷೇತ್ರದಲ್ಲೂ ಒಳ್ಳೆಯವರು, ಕೆಟ್ಟವರು ಅನ್ನೋದು ಇದ್ದೇ ಇರುತ್ತೆ. ಅಷ್ಟು ವರ್ಷಗಳಿಂದ ಹೆಣ್ಣು ಇಂಡಸ್ಟ್ರಿಯಲ್ಲಿ ಧೈರ್ಯವಾಗಿ ಕೆಲಸ ಮಾಡುತ್ತಿಲ್ವಾ? ಅವರನ್ನು ಯಾರು ಹೇಗೆ ನಡೆಸಿಕೊಂಡಿದ್ದಾರೋ? ಅವರಿಗೆ ಏನು ಕೆಟ್ಟ ಅನುಭವ ಆಯ್ತೋ ಗೊತ್ತಿಲ್ಲ, ಅದು ಅವರ ಪರ್ಸನಲ್ ಎಕ್ಸ್‌ಪೀರಿಯೆನ್ಸ್. ಆದರೆ ಅವರ ವೈಯಕ್ತಿಕ ಅನುಭವದಿಂದ ಇಡೀ ಕನ್ನಡ ಚಿತ್ರರಂಗವೇ ಹಾಗಿದೆ ಅನ್ನೋದು ಸರಿಯಲ್ಲ' ಎಂದು ಸತೀಶ್ ಎಚ್ಚರಿಕೆ ನೀಡಿದ್ದಾರೆ.
ತಪ್ಪು ಮಾಡಿದವರ ಬಗ್ಗೆ ಮಾತ್ರವೇ ಮಾತನಾಡಿ!
'ನಾನು ಯಾವುದೋ ಒಂದು ಸಣ್ಣ ಪಾತ್ರಕ್ಕೆ ಬಂದವನು. ಇವತ್ತು ನನ್ನ ಇಂಡಸ್ಟ್ರಿ ಇಲ್ಲಿವರೆಗೆ ಕರೆದುಕೊಂಡು ಬಂದಿಲ್ವಾ? ನಾವೆಲ್ಲ ಸೇರಿ ಸಿನಿಮಾಗೆ ಕೆಲಸ ಮಾಡ್ತಿದ್ದೀವಿ, ಹಾಗಾದರೆ ನಾವೆಲ್ಲ ಸರಿ ಇಲ್ವಾ? ಎಂದು ಕೇಳಿದ್ದಾರೆ. ನಿಮಗೆ ಯಾವುದೋ ಒಂದು ಪ್ರೊಡಕ್ಷನ್‌ನವರಿಂದ ಕೆಟ್ಟ ಅನುಭವ ಆಯ್ತು ಅಂದ್ರೆ, ಅದನ್ನಷ್ಟೇ ಹೇಳಿ. ಅದನ್ನೇ ಇಡೀ ಇಂಡಸ್ಟ್ರಿಗೆ ಹೋಲಿಸಿ ಅನಾಗರಿಕತೆಯಿಂದ ಕೂಡಿದೆ ಅನ್ನೋದು ತಪ್ಪು. ಕನ್ನಡ ಇಂಡಸ್ಟ್ರಿಯಲ್ಲಿ ಎಂತೆಂಥಾ ಸಿನಿಮಾಗಳು ಬಂದಿವೆ? ಹಾಗಾದ್ರೆ ಅದೆಲ್ಲ ಒಂದೇ ಸಲ ಹೋಯ್ತಾ? ಇಲ್ಲಿ ಯಾರಿಗೂ ಬೆಲೆ ಇಲ್ವಾ? ಬೆಳವಾಡಿ ಅವರು ಇಡೀ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿರುವುದು ತಪ್ಪು' ಎಂದು ಸತೀಶ್ ನೀನಾಸಂ ಖಂಡಿಸಿದ್ದಾರೆ.












Click it and Unblock the Notifications