ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ಪೂಜಾರಿ ಸಾವಿನ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯನಟ ರಾಕೇಶ್ ಪೂಜಾರಿ ನಿಧನವು ಕರ್ನಾಟಕದ ಜನತೆಗೆ ಶಾಕ್ ನೀಡಿದೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ತಮ್ಮ ಪ್ರತಿಭೆ ಗುರುತಿಸಿಕೊಂಡಿದ್ದ ರಾಕೇಶ್, ಬಳಿಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲೂ ನಟಿಸಿ ಜನಮನ ಗೆದ್ದಿದ್ದರು. ಇನ್ನು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿಯೂ ರಾಕೇಶ್ ಪೂಜಾರಿ ನಟಿಸಿದ್ದು, ಇತ್ತೀಚೆಗೆ ಶೂಟಿಂಗ್ ಮುಗಿಸಿ ಬಂದಿದ್ದರು. ರಾಕೇಶ್ ಈ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಇದರ ನಡುವೆಯೇ ಅವರು ವಿಧಿಯಾಟಕ್ಕೆ ಇಹಲೋಕ ತ್ಯಜಿಸಿದ್ದಾರೆ. ರಾಕೇಶ್ ಅವರ ಸಾವಿನ ಬಗ್ಗೆ ಹಾಗೂ ಸಿನಿಮಾದಲ್ಲಿನ ಪಾತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ರಾಕೇಶ್ ಪೂಜಾರಿ ಸಾವಿಗೆ ರಿಷಬ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿರುವ ರಿಷಬ್ ಶೆಟ್ಟಿ, "ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ ಎಂದು ಕಂಬನಿ ಮಿಡಿದಿದ್ದಾರೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ" ಎಂದು ಸಂತಾಪ ಸೂಚಿಸಿದ್ದಾರೆ.

ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾ ಸಖತ್ ಹಿಟ್ ಕಂಡಿತ್ತು. ಇದಾದ ಬಳಿಕ ಈ ಸಿನಿಮಾದ ಸೀಕ್ವೆಲ್‌ಗಳನ್ನು ಮುಂದುರಿಸುವುದಾಗಿ ರಿಷಬ್ ಘೋಷಿಸಿದ್ದರು. ಅದರಂತೆ ಕಾಂತಾರ ಚಾಪ್ಟರ್-1 ಸಿನಿಮಾವನ್ನು ರಿಷಬ್ ಕೈಗೆತ್ತಿಕೊಂಡಿದ್ದರು. ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಇದೇ ಸಿನಿಮಾದಲ್ಲಿ ರಾಕೇಶ್ ಪೂಜಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವಕಾಶಗಳು ಅರಸಿ ಬರುತ್ತಿರುವ ಹೊತ್ತಲ್ಲೇ ರಾಕೇಶ್ ಬಾರದ ಲೋಕಕ್ಕೆ ತೆರಳಿರುವುದು ಕಾಂತಾರ ಚಿತ್ರತಂಡಕ್ಕೂ ಶಾಕ್ ನೀಡಿದೆ. ಇದು ರಾಕೇಶ್ ಅಭಿನಯದ ಕೊನೇ ಸಿನಿಮಾ ಎನಿಸಿಕೊಳ್ಳಲಿದೆ.

ಕಾಂತಾರ ಸಿನಿಮಾಗೆ ಸಾಲು ಸಾಲು ಸಂಕಷ್ಟ!
ಕಾಂತಾರ ಚಾಪ್ಟರ್-1 ಸಿನಿಮಾ ತಂಡಕ್ಕೆ ಒಂದೇ ವಾರದ ಅಂತರದಲ್ಲಿ ಎರಡು ಆಘಾತಕಾರಿ ಘಟನೆಗಳು ನಡೆದಿವೆ. ಈ ಸಿನಿಮಾದಲ್ಲಿ ನಟಿಸಿದ್ದ ಇಬ್ಬರು ಕಲಾವಿದರು ಸಾಲು ಸಾಲಾಗಿ ಸಾವನ್ನಪ್ಪುವ ಮೂಲಕ ಚಿತ್ರತಂಡವು ಶಾಕ್‌ನಲ್ಲಿದೆ. ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಕೊಲ್ಲೂರಿನಲ್ಲಿ ಕಾಂತಾರ ಚಾಪ್ಟರ್-1 ಶೂಟಿಂಗ್‌ಗೆ ಬಂದಿದ್ದ ಕೇರಳ ಮೂಲಕ ಜ್ಯೂನಿಯರ್ ಆರ್ಟಿಸ್ಟ್‌ವೊಬ್ಬರು, ನದಿಯಲ್ಲಿ ಮುಳುಗಿ ದಾರುಣ ಸಾವು ಕಂಡಿದ್ದರು. ಆಳ ಗೊತ್ತಿಲ್ಲದೆ, ಸ್ನೇಹಿತರೊಂದಿಗೆ ನೀರಿಗೆ ಇಳಿದಿದ್ದ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಈ ಘಟನೆ ಮಾಸುವ ಮುನ್ನವೇ ಇದೇ ಸಿನಿಮಾದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಅವರು ಕೂಡ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಚಿತ್ರತಂಡವು ಸದ್ಯ ಈ ಸರಣಿ ಸಾವಿನಿಂದ ಬೆಚ್ಚಿಬಿದ್ದಿದೆ.












Click it and Unblock the Notifications