Kantara 2: ನಟ ರಿಷಬ್ ಶೆಟ್ಟಿಯ 'ಕಾಂತಾರ-2' ಸಿನಿಮಾಗೆ ಆರಂಭದಲ್ಲೇ ವಿಘ್ನ
ನಿರ್ದೇಶಕ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಭರ್ಜರಿ ಸಕ್ಸಸ್ ಕಂಡ ಕಾರಣ ಅದರ ಸೀಕ್ವೆಲ್ ಕಾಂತಾರ-2ರ ಚಿತ್ರೀಕರಣದ ಹುರುಪಿನಿಂದ ನಡೆಯುತ್ತಿದೆ. ಈ ಸಿನಿಮಾ ಮೇಲೂ ಪ್ರೇಕ್ಷಕರು ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಇದೀಗ ಈ ಸಿನಿಮಾಗೆ ವಿಘ್ನ ಎದುರಾಗಿದೆ. ಚಿತ್ರತಂಡದ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.
ಹೌದು, ಕಾಂತಾರ-2 ಚಿತ್ರೀಕರಣದ ಹೆಸರಿನಲ್ಲಿ ಅರಣ್ಯ ಪ್ರದೇಶಕ್ಕೆ ಹಾನಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಾಂತಾರ-2 ಸಿನಿಮಾದ ಶೂಟಿಂಗ್‌ಗಾಗಿ ಅರಣ್ಯ ಪ್ರದೇಶವನ್ನು ಪಡೆದುಕೊಳ್ಳಲಾಗಿದ್ದು, ಈ ವೇಳೆ ಇಲ್ಲಿರುವ ಮರಗಳನ್ನು ಕಡಿಯಲಾಗಿದೆ ಹಾಗೂ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿದ್ದಾರೆ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ.

ಈ ಹಿನ್ನೆಲೆ ಕಾಂತಾರ-2 ಚಿತ್ರೀಕರಣಕ್ಕೆ ಇಲ್ಲಿನ ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದ ಈ ನಡೆಯ ವಿರುದ್ಧ ಸಿಡಿದೆದ್ದಿದ್ದಾರೆ. ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿರುವ ಕಾರಣ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬಂದು ಅಪಾಯವನ್ನೊಡ್ಡುತ್ತವೆ. ಈ ಹಿನ್ನೆಲೆ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಬಾರದು. ಇದರಿಂದ ವನ್ಯಜೀವಿಗಳಿಗೂ ತೊಂದರೆ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ವನ್ಯಜೀವಿಗಳಿರುವ ಪ್ರದೇಶದಲ್ಲಿ ಶೂಟಿಂಗ್ ನಡೆಸಬೇಡಿ. ಈ ಕೂಡಲೇ ಇಲ್ಲಿ ಶೂಟಿಂಗ್ ನಿಲ್ಲಿಸುವಂತೆ ತಾಲ್ಲೂಕು ಆಡಳಿತ ಮುಂದಾಗಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುವುದಾಗಿಯೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಳೆದ ಜನವರಿ 2ರಿಂದ ಶೂಟಿಂಗ್ ನಡೆಸಲಾಗುತ್ತಿದೆ. ಅಲ್ಲದೆ ಸಿನಿಮಾ ಶೂಟಿಂಗ್‌ಗಾಗಿ ಯಾವೆಲ್ಲ ಅನುಮತಿ ಪಡೆದಿದ್ದಾರೆ ಎಂಬುದರ ಕುರಿತು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಮಾಹಿತಿ ಬಹಿರಂಗಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಸದ್ಯ ಈ ಸಿನಿಮಾದ ನಿರ್ದೇಶಕ ಹಾಗೂ ನಟರೂ ಆಗಿರುವ ರಿಷಬ್ ಶೆಟ್ಟಿ ಅವರಿಗೆ ಆರಂಭದಲ್ಲೇ ವಿಘ್ನ ಎದುರಾದಂತಿದೆ.
ಕಾಂತಾರ ಮೊದಲ ಚಾಪ್ಟರ್ ಅನ್ನು ರಿಷಬ್ ಅವರು ತಮ್ಮ ಹುಟ್ಟೂರಿನಲ್ಲೇ ಶೂಟ್ ಮಾಡಿದ್ದರು. ಅವರು ಹುಟ್ಟೂರು ಸೇರಿದಂತೆ ಅಕ್ಕಪಕ್ಕದ ಪ್ರದೇಶದಲ್ಲೇ ಇಡೀ ಸಿನಿಮಾ ಚಿತ್ರೀಕರಣ ನಡೆಸಲಾಗಿತ್ತು. ಬಳಿಕ ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾಗೆ ಭಾರಿ ಸ್ಪಂದನೆ ಸಿಕ್ಕಿದ್ದರಿಂದ ನಂತರ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಹುಭಾಷೆಗಳಲ್ಲಿ ತೆರೆಕಂಡಿತ್ತು. ಅಲ್ಲಿಯೂ ಈ ಸಿನಿಮಾ ಸಕ್ಸಸ್ ಕಂಡಿತ್ತು. ಈ ಹಿನ್ನೆಲೆ ರಿಷಬ್ ಕಾಂತಾರ ಸೀಕ್ವೆಲ್ ಮಾಡುವುದಾಗಿ ಘೋಷಣೆ ಮಾಡಿದ್ದರು. ಸದ್ಯ ಇದಕ್ಕೆ ಸ್ಕ್ರಿಪ್ಟ್ ರಚಿಸಲು ಅವರು ಹುಟ್ಟೂರಿನಲ್ಲೇ ಬೀಡುಬಿಟ್ಟಿದ್ದಾರೆ.
ಇನ್ನು ರಿಷಬ್ ಅವರು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಜೈ ಹನುಮಾನ್ ಸಿನಿಮಾದಲ್ಲಿ ಹನುಮನ ಪಾತ್ರ ಮಾಡುತ್ತಿದ್ದು, ಇದರ ವಿರುದ್ಧವೂ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹನುಮಂತನ ಚಿತ್ರಣವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ್ದರು. ಇದೀಗ ಕಾಂತಾರ ಸಿನಿಮಾಗೂ ವಿಘ್ನ ಎದುರಾಗಿದೆ.












Click it and Unblock the Notifications