ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ನಟ ಧ್ರುವ ಸರ್ಜಾ ಹೇಳಿದ್ದೇನು?
ಮಂಗಳೂರು, ಏಪ್ರಿಲ್ 26: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಇಬ್ಬರು ಕನ್ನಡಿಗರು ಸೇರಿದಂತೆ ಸುಮಾರು 28 ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಸಂಪೂರ್ಣ ದೇಶವೇ ತಲ್ಲಣಿಸಿ ಹೋಗಿದೆ. ದೇಶದ ಪ್ರತಿಯೊಬ್ಬರು ಕೂಡ ಉಗ್ರರ ವಿರುದ್ಧ ಪ್ರತಿಕಾರಕ್ಕೆ ಕಾಯುತ್ತಿದ್ದಾರೆ.
ಈ ಬಗ್ಗೆ ನಟ ಧ್ರುವ ಸರ್ಜಾ ಮಾತನಾಡಿದ್ದು, 'ಅವರಿಗೆ ಅರ್ಥ ಆಗುವ ಭಾಷೆನಲ್ಲಿ ನಮ್ಮ ಭಾರತೀಯ ಸೇನೆ ಉತ್ತರ ಕೊಡುತ್ತದೆ. ಈಗಾಗಲೇ ಸಿಂಧು ನದಿ ನೀರನ್ನು ಬಂದ್ ಮಾಡಿದ್ದಾರೆ. ನಮ್ಮ ಭಗವದ್ಗೀತೆನಲ್ಲೇ ಇದೆ. ತಾಳ್ಮೆಯಿಂದ ಇರಬೇಕು. ಬೇಗ ಉತ್ತರ ಸಿಗುತ್ತದೆ. ದೇವರ ರೂಪದಲ್ಲಿ ಭಾರತೀಯ ಸೇನೆ ಶಿಕ್ಷೆ ಕೊಡುತ್ತಾರೆ' ಎಂದರು.

'ಮಾರ್ಟಿನ್ ಸಮಯದಲ್ಲಿ ಆ ಸ್ಥಳದಲ್ಲೇ ಚಿತ್ರೀಕರಣ ಮಾಡಿದ್ದೇವು. ಜಮ್ಮು ಕಾಶ್ಮೀರ ನಮ್ಮ ಕಿರೀಟ. ಯಾವತ್ತಿದ್ದರೂ ಅದು ನಮ್ಮದೇ. ನಾವು ಯುದ್ಧ ಪ್ರಾರಂಭ ಮಾಡಿಲ್ಲ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಮಹಿಳೆಯರು, ಮಕ್ಕಳು ಅಂತಾ ಫ್ಯಾಮಿಲಿ ನೋಡುತ್ತಿರುತ್ತಾರೆ. ನಮ್ಮ ಬಾಯಲ್ಲಿ ಬೇರೆಯವರ ಮಾತು ಬಂದರೆ ತಪ್ಪಾಗುತ್ತದೆ' ಎಂದರು.
ಪಹಲ್ಗಾಮ್ ದಾಳಿ ಬಗ್ಗೆ ಸುದೀಪ್ ಹೇಳಿದ್ದೇನು?
ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಗ್ಗೆ ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. 'ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ನಿಜಕ್ಕೂ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಸ್ಫೂರ್ತಿಯ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡಬೇಕಾದ ಸಮಯ' ಎಂದು ಸುದೀಪ್ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ 'ಈ ಹೇಡಿತನದ ಕೃತ್ಯದ ಹಿಂದಿರುವವರಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ' ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಪಹಲ್ಗಾಮ್ ದಾಳಿ ಬಗ್ಗೆ ಶಿವಣ್ಣ ಹೇಳಿದ್ದೇನು?
ಪಹಲ್ಗಾಮ್ ಉಗ್ರರ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಅವರು, 'ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ' ಎಂದಿದ್ದಾರೆ.












Click it and Unblock the Notifications