Actor Darshan: ನಟ ದರ್ಶನ್ ಬರ್ತ್ ಡೇ ಸಂಭ್ರಮಾಚರಣೆಯಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಗಳು ಭಾಗಿ
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಸೇರಿದಂತೆ ಇನ್ನುಳಿದವರು ಕೂಡ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ನಿನ್ನೆ (ಫೆಬ್ರವರಿ 16) ದರ್ಶನ್ ಹುಟ್ಟುಹಬ್ಬ ಹಿನ್ನೆಲೆ ಹಲವು ಗಣ್ಯರು ಸೇರಿದಂತೆ ಚಿತ್ರರಂಗದ ಬಹುತೇಕ ಮಂದಿ ಅವರಿಗೆ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.
ಈ ನಡುವೆಯೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯೊಬ್ಬರು ಶುಭಕೋರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ಜೈಲು ಪಾಲಾಗಿದ್ದರು.

ಪ್ರಕರಣದಲ್ಲಿ ಜೈಲು ಸೇರಿದ್ದ 17 ಆರೋಪಿಗಳು ಕೂಡ ಇದೀಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಅಲ್ಲದೆ, ಇದೀಗ ಚಿತ್ರದುರ್ಗದಲ್ಲಿ ಕೆಲ ಆರೋಪಿಗಳು ನಟ ದರ್ಶನ್ ಬರ್ತ್ ಡೇ ಸಂಭ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಸಂಭ್ರಮಾಚರಣೆಯಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಅನು ಕುಮಾರ್ ಹಾಗೂ ಜಗ್ಗ ಕೂಡ ಭಾಗಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಜೈಲಿನಿಂದ ಬಿಡುಗಡೆಯಾದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಆರೋಪಿಗಳು ದರ್ಶನ್ ಹುಟ್ಟುಹಬ್ಬ ಆಚರಣೆ ಮಾಡಲು ಹೊರಗೆ ಬಂದಿದ್ದಾರೆ. ಪ್ರಕರಣದ ಆರೋಪಿಗಳಾದ ಅನು ಕುಮಾರ್ ಹಾಗೂ ಜಗ್ಗ ದರ್ಶನ್ ಹುಟ್ಟಹಬ್ಬವನ್ನು ಸ್ನೇಹಿತರು, ಮಕ್ಕಳ ಜೊತೆ ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ. ಅಂದರ ಪುನಶ್ಚೇತನ ಸಂಸ್ಥೆಯಲ್ಲಿ ವಿಶೇಷ ಚೇತನರಿಂದ ಕೇಕ್ ಕತ್ತರಿಸಿ ನಟ ದರ್ಶನ್‌ಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ, ಚಿತ್ರದುರ್ಗ ಜಿಲ್ಲಾಸ್ಪತ್ರೆ ರೋಗಿಗಳಿಗೆ ಕೇಸರಿ ಬಾತ್, ರೈಸ್ ಬಾತ್ ಹಂಚಿ ಸಂಭ್ರಮಿಸಿದರು ಎಂದು ತಿಳಿದುಬಂದಿದೆ.
ಈ ಎಲ್ಲಾ ಆರೋಪಿಗಳು ಹಲವು ತಿಂಗಳುಗಳ ಕಾಲ ಸೆರೆವಾಸ ಅನುಭವಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ನಟ ದರ್ಶನ್ ಸಹಚರರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಆತನನ್ನು ಭೀಕರವಾಗಿ ಹತ್ಯೆ ಮಾಡಿದ್ದರು ಎಂದು ಪೊಲೀಸರ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ಇನ್ನು ಅನುಕುಮಾರ್ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಮಗನ ಚಿಂತೆಯಲ್ಲೇ ಅವರ ತಂದೆ ಸಾವನ್ನಪ್ಪಿದ್ದರು. ಆರೋಪಿಗಳ ಕುಟುಂಬಸ್ಥರು ವಿವಿಧ ಕಷ್ಟಗಳನ್ನ ಎದುರಿಸಿದ್ದರು. ಇಷ್ಟೆಲ್ಲಾ ಆದರೂ ಆರೋಪಿಗಳು ನಟ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬೇಕಿತ್ತಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications