ಅಂಬರೀಷ್ ಕುಟುಂಬದ ಜೊತೆ ಮುನಿಸು ಮರೆತ್ರಾ ದರ್ಶನ್? ಅಚ್ಚರಿ ಮೂಡಿಸಿದ ಪೋಸ್ಟ್
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರ ಕುಟುಂಬದೊಂದಿಗೆ ಆಪ್ತವಾಗಿದ್ದವರು. ಅಂಬಿ ಅವರನ್ನು ಅಪ್ಪಾಜಿ ಹಾಗೂ ಸುಮಲತಾ ಅವರನ್ನು ಮದರ್ ಇಂಡಿಯಾ ಎಂದೇ ಕರೆಯುತ್ತಿದ್ದರು. ಸುಮಲತಾ ಅವರು ಕೂಡ ದರ್ಶನ್ ಅವರನ್ನು ದೊಡ್ಮಗ ಎಂದೇ ಕರೆಯುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲಿನಿಂದ ಹೊರಬಂದ ನಂತರ ಅಂಬಿ ಕುಟುಂಬದಿಂದ ದರ್ಶನ್ ಅವರು ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಅಂಬಿ ಕುಟುಂಬದವರನ್ನು ಅನ್‌ಫಾಲೋ ಮಾಡುವ ಮೂಲಕ ಶಾಕ್ ನೀಡಿದ್ದರು. ಯಾವುದೇ ಕಾರಣಕ್ಕೆ ದರ್ಶನ್ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ದರ್ಶನ್ ಮುನಿಸು ಮರೆತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಹ ಬೆಳವಣಿಗೆಯೊಂದು ನಡೆದಿದೆ.
ದರ್ಶನ್ ತೂಗುದೀಪ ಅವರು ಜಾಮೀನಿನ ಮೇಲೆ ಹೊರಬಂದು ಹಲವು ತಿಂಗಳಾದರೂ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್ ಅವರನ್ನು ಭೇಟಿಯಾಗಲಿಲ್ಲ. ಸದಾ ಒಂದೇ ಕುಟುಂಬದವರಂತಿದ್ದ ದರ್ಶನ್ ಹಾಗೂ ಸುಮಲತಾ ಅವರ ನಡುವೆ ಏನೋ ಬಿರುಕು ಮೂಡಿದೆ ಎಂಬ ಮಾತುಗಳು ಜೋರಾಗಿ ಕೇಳಿಬಂದಿತ್ತು. ದರ್ಶನ್ ಅವರು ಇನ್‌ಸ್ಟಾಗ್ರಾಂನಲ್ಲಿ ಸುಮಲತಾ ಅವರನ್ನು ಅನ್‌ಫಾಲೋ ಮಾಡಿದ್ರು. ಸುಮಲತಾ ಮಾತ್ರವಲ್ಲ, ಅವರ ಮಗ ಅಭಿಷೇಕ್ ಅಂಬರೀಶ್ ಹಾಗೂ ಅವರ ಪತ್ನಿ ಅವಿವಾ ಬಿದ್ದಪ್ಪ ಸೇರಿದಂತೆ ಆರು ಮಂದಿ ಆಪ್ತರನ್ನೇ ದರ್ಶನ್ ಅನ್‌ಫಾಲೋ ಮಾಡಿದ್ದು ಅಚ್ಚರಿ ಮೂಡಿಸಿತ್ತು.

ಅದಾದ ಮೇಲೂ ಸುಮಲತಾ ಹಾಗೂ ದರ್ಶನ್ ಅವರು ಯಾವುದೇ ಕಾರ್ಯಕ್ರಮದಲ್ಲಿ ಭೇಟಿಯಾಗಲಿಲ್ಲ. ಅಭಿಷೇಕ್ ಅಂಬರೀಷ್ ಮಗುವಿನ ನಾಮಕರಣಕ್ಕೂ ದರ್ಶನ್ ಗೈರಾಗಿದ್ದರು. ಹಾಗಾಗಿ ಈ ಎರಡೂ ಕುಟುಂಬಗಳ ನಡುವೆ ಬಿರುಕು ಬಿಟ್ಟಿದೆ ಎಂದು ಮತ್ತಷ್ಟು ದೃಢವಾದ ಮಾತುಗಳು ಎಲ್ಲೆಡೆ ಕೇಳಿಬಂದವು. ಆದರೆ, ಯಾವ ಕಾರಣಕ್ಕೆ ದರ್ಶನ್ ಅವರು ಈ ರೀತಿ ನಡೆದುಕೊಂಡರು ಎಂದು ತಿಳಿಯಲಿಲ್ಲ. ಇನ್ನು ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರಿಂದ ಸುಮಲತಾ ಅಂಬರೀಷ್ ಅವರು ಕೂಡ ಸ್ಪಷ್ಟನೆ ನೀಡಿದ್ದರು.
ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಪೋಸ್ಟ್ ಯಾರನ್ನಾದರೂ ಗುರಿಯಾಗಿಸಿ ಮಾಡಿದ್ದಲ್ಲ, ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ನನ್ನನ್ನ ಯಾರು ಫಾಲೋ ಮಾಡ್ತಾರೆ ಅಥವಾ ಅನ್‌ಫಾಲೋ ಮಾಡ್ತಾರೆ ಎಂಬುದನ್ನ ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿ ಬಂದ ನಂತರವೇ ನನಗೂ ತಿಳಿಯಿತು. ನಿಜಕ್ಕೂ ದರ್ಶನ್ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ ಎಂದು ಎಂದಿದ್ದರು.

ತಾಯಿ-ಮಗನ ಸಂಬಂಧದಲ್ಲಿ ಅನಗತ್ಯ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸ ಎಂದಿಗೂ ಹೊಂದಿಲ್ಲ ಎಂದು ಸುಮಲತಾ ತೆರೆ ಎಳೆದಿದ್ದರು. ಆದರೆ ದರ್ಶನ್ ಅಂಬಿ ಕುಟುಂಬದೊಂದಿಗೆ ಅಂತರ ಕಾಯ್ದುಕೊಂಡಿದ್ದು ಕಂಡುಬಂದಿತ್ತು.
ಅಂಬಿ ಬರ್ತ್‌ಡೇಗೆ ದಚ್ಚು ವಿಶ್
ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬಕ್ಕೆ ದರ್ಶನ್ ವಿಶ್ ಮಾಡುವ ಪೋಸ್ಟ್ ಹಂಚಿಕೊಂಡಿದ್ದು, ಇದರ ಬೆನ್ನಲ್ಲೇ ಅಂಬಿ ಫ್ಯಾಮಿಲಿ ಜೊತೆಗಿದ್ದ ಮುನಿಸು ಮರೆತು ಒಂದಾದ್ರಾ ಎಂಬ ಮಾತುಗಳು ಕೇಳಿಬರುತ್ತಿವೆ. ತಂದೆಯ ಸಮಾನರಾದ ಅಂಬಿ ಅಪ್ಪಾಜಿ ಅವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾ ಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್ ಸ್ಟಾರ್ ಎಂದು ದರ್ಶನ್ ವಿಶ್‌ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಬೆನ್ನಲ್ಲೇ ದಚ್ಚು ಮುನಿಸು ಮರೆತು ಮತ್ತೆ ಅಂಬಿ ಕುಟುಂಬದೊಂದಿಗೆ ಇದ್ದಾರೆ ಎಂದು ಅವರ ಅಭಿಮಾನಿಗಳು ಕೂಡ ಖುಷ್ ಆಗಿದ್ದಾರೆ.












Click it and Unblock the Notifications