Darshan Bail: ದರ್ಶನ್‌ಗೆ ಜಾಮೀನು ಸಿಗುತ್ತಾ? ಈ ಕಾರಣಗಳಿಂದ ಸಿಗುವುದು ಡೌಟು!
ಬೆಂಗಳೂರು, ಸೆಪ್ಟಂಬರ್ 05: ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರ ತನಿಖೆ ಒಂದು ಹಂತಕ್ಕೆ ಬಂದಿದ್ದು, ಬುಧವಾರವಷ್ಟೇ ನ್ಯಾಯಾಲಯಕ್ಕೆ ನಟ ದರ್ಶನ್ ಮತ್ತು ಸಹಚರರ ವಿರುದ್ಧ 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಹಾಗಾದರೆ ದರ್ಶನ್ ಅವರಿಗೆ ಜಾಮೀನು ಸಿಕ್ಕಿಬಿಡುತ್ತಾ?, ಜೈಲಿನಿಂದ ಬಿಡುಗಡೆ ಆಗುತ್ತಾರಾ? ಎಂಬ ಚರ್ಚೆಗಳು ಶುರುವಾಗಿವೆ. ಮೂಲಗಳ ಪ್ರಕಾರ ದರ್ಶನ್‌ಗೆ ಜಾಮೀನು ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ನಿಯಮದ ಪ್ರಕಾರ ರೇಣುಕಾಸ್ವಾಮಿ ಪ್ರಕರಣ ದಾಖಲಾಗಿ 90 ದಿನಗಳಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಕಾನೂನು ಹೇಳುತ್ತದೆ. ಅದರಂತೆ ಚಾರ್ಜ್ ಶೀಟ್, ಜಾಮೀನು ಬಗ್ಗೆ ನಟ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗಾದರೆ ಅವರು ಅರ್ಜಿ ಹಾಕಿದರೆ ಜಾಮೀನು ಸಿಗುತ್ತಾ?, ಸಿಗದಿರಲು ಬಲವಾದ ಕಾರಣಗಳೇನು?

ದರ್ಶನ್ ಪರ ವಕೀಲರು ದರ್ಶನ್‌ಗೆ ಜಾಮೀನು ಕೊಡಿಸಲು ಕಾತರರಾಗಿದ್ದಾರೆ. ಈ ಕುರಿತು ವಾದ ಮಂಡನೆಗೆ ಸಜ್ಜಾಗಿದ್ದಾರೆ. ಆದರೆ ಹಣ ಬಲ, ಸ್ಟಾರ್‌ಗಿರಿ, ಫೇಸ್ ವ್ಯಾಲ್ಯೂ, ಅಭಿಮಾನಿಗಳ ಬೆಂಬಲ, ಪ್ರಭಾವಿಗಳ ಪರಿಚಯ ಹೊಂದಿರುವ ದರ್ಶನ್‌ಗೆ ಜಾಮೀನು ಕೊಡದಿರಲು ಅದೇ ಕಂಟಕವಾಗುವ ಸಾಧ್ಯತೆಗಳು ಹೆಚ್ಚಿವೆ.
ಈಗಾಗಲೇ ಪವಿತ್ರಾ ಗೌಡಗೆ ಸಲ್ಲಿಕೆ ಆಗಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇದೀಗ ನಟ ದರ್ಶನ್ ಜಾಮೀನು ಪಡೆಯಲು ಯತ್ನಿಸಿದರೂ ಅದು ವಿಫಲ ಯತ್ನವಾಗಬಹುದು. ಜಾಮೀನು ನೀಡದಂತೆ ಪ್ರಬಲವಾದ ಮಂಡನೆಗೆ ಅನೇಕ ಸಂಗತಿಗಳು, ಸಾಕ್ಷ್ಯಗಳು ಇವೆ. ದರ್ಶನ್ ವಿರುದ್ಧ ಸಾಕಷ್ಟು ಅಂಶಗಳು ಕಣ್ಣಿಗೆ ರಾಚುತ್ತವೆ. ಅದರ ಆಧಾರದಲ್ಲಿ ದರ್ಶನ್‌ಗೆ ಬೇಲ್ ನೀಡದಂತೆ ಸರ್ಕಾರಿ ವಕೀಲರು ವಾದ ಮಾಡಬಹುದು. ಮುಖ್ಯವಾಗಿ ದರ್ಶನ್ ಜಾಮೀನು ವಿಚಾರದಲ್ಲಿ ಅವರ ಅಭಿಮಾನಿಗಳು ಮುಳ್ಳಾಗಿದ್ದಾರೆ ಎಂಬುದು ಸುಳ್ಳಲ್ಲ.
ಈ ಕಾರಣದಿಂದ ದರ್ಶನ್‌ಗೆ ಜಾಮೀನು ಡೌಟು
* ರೇಣುಕಾಸ್ವಾಮಿ ಕರೆದುಕೊಂಡು ಬಂದು ಹಲ್ಲೆ ಮಾಡಿ, ಆತನ ಸಾವಿಗೆ ಕಾರಣವಾದ ಉದ್ದೇಶ ಸಾಬೀತಾಗಿದೆ.
* ಮೃತ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
* ರೇಣುಕಾಸ್ವಾಮಿ ಮೃತಪಡುತ್ತಿದ್ದಂತೆ ಸಾಕ್ಷಿ ನಾಶಕ್ಕೆ ಯತ್ನಿಸಿರುವುದು ಸಾಬೀತಾಗಿದೆ. ಇದು ಸಹ ಚಾರ್ಜ್ ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
* ದರ್ಶನ್ ಖುದ್ದು 30 ಲಕ್ಷ ರೂಪಾಯಿ ಸಜ್ಜು ಮಾಡಿ ಮೂವರನ್ನು ತಾವೇ ಕೊಲೆ ಮಾಡಿದ್ದಾರೆಂದು ಒಪ್ಪಿಕೊಳ್ಳಲು ಕಳುಹಿಸಿರುವುದು, ದರ್ಶನ್ ಸೂಚನೆ ಮೇರೆಗೆ ಇದೆಲ್ಲ ನಡೆದಿರುವುದು ತನಿಖೆಯಯಲ್ಲಿ ಬಯಲಾಗಿದೆ.

* ಪ್ರಭಾವಿ ದರ್ಶನ್ ತುರ್ತಾಗಿ ಭಾರೀ ಪ್ರಮಾಣದ ಹಣ ಅಣಿಗೊಳಿಸಿ ಇತರರನ್ನು ಸರೆಂಡರ್ ಮಾಡಿಸಲು ಕಳುಹಿಸಿದ್ದರು. ಆತನ ಹಣದಿಂದ ಏನು ಬೇಕಾದರೂ ಮಾಡಬಲ್ಲ ಎಂದು ವಕೀಲರು ವಾದಿಸಬಹುದು.
* ರೇಣುಕಾಸ್ವಾಮಿ ಸಾವಿನ ನಂತರ ಕೆಲವು ಪ್ರಭಾವಿ ರಾಜಕಾರಣಗಳಿಗೆ ಕರೆ ಮಾಡಿರುವುದು.
* ಪೊಲೀಸ್ ದರ್ಶನ್ ಅನ್ನು ಬಂಧಿಸದಂತೆ ಪೊಲೀಸರ ಮೇಲೆ ನಿರಂತರ ಒತ್ತಡ ಬಂದಿರುವುದು.
* ಹಣ ಕೊಟ್ಟು ಸಾಕ್ಷಿ ನಾಶ ಮಾಡುವ ಸಾಧ್ಯತೆ ಈ ಪ್ರಕರಣದಲ್ಲಿ ಹೆಚ್ಚಿರುವುದು. ಅಲ್ಲದೇ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆ ಜಾಮೀನು ಎಲ್ಲ ಪ್ರಕರಣದಲ್ಲಿ ಸಿಗುವುದು ಕಷ್ಟಸಾಧ್ಯ.
* ಮುಖ್ಯವಾಗಿ ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಬೆದರಿಕೆ ಹಾಕಿದ್ದಾರೆ.
* ಡಿ ಬಾಸ್ ಜೈಲಿಂದ ಬಿಡುಗಡೆ ಆಗುತ್ತಿದ್ದಂತೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿಕೊಂಡು ಓಡಾಡಿದ್ದಾರೆ. ಈ ಕುರಿತ ಸಾಕ್ಷ್ಯಗಳು ಪೊಲೀಸರ ಬಳಿ ಇವೆ. ಕೆಲವರು ಕರೆ ಮಾಡಿ ಬೆದರಿಕೆ ಹಾಕಿದ ಘಟನೆ ವರದಿ ಆಗಿವೆ
ಈ ಮೇಲಿನ ಎಲ್ಲ ಪ್ರಬಲ ಕಾರಣಗಳು ಇದ್ದು ದರ್ಶನ್ ಗೆ ಜಾಮೀನು ನೀಡುವುದು ಸರಿಯಲ್ಲ ಎಂದು ವಾದ ಮಂಡನೆ ಆಗಿ, ಅದು ಪರಿಗಣನೆ ಆಗಿದ್ದೇ ಆದರೆ ದರ್ಶನ್‌ಗೆ ಜಾಮೀನು ಸಿಗುವುದು ಬಹುತೇಕ ಡೌಟು ಎನ್ನಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಪ್ರಕರಣ ಮುಂದೇನಾಗಲಿದೆ? ಎಂಬುದರ ಬಗ್ಗೆ ಜನರಿಗೆ ಕುತೂಹಲ ಹೆಚ್ಚಾಗಿದೆ.












Click it and Unblock the Notifications