ನನ್ನ 'ತಾತ' ಕೂಡ ಸ್ವಾತಂತ್ರ್ಯ ಹೋರಾಟಗಾರ: ನಟ ಚೇತನ್ ಅಹಿಂಸಾ ವಿಶೇಷ ಲೇಖನ
ಬೆಂಗಳೂರು, ಆಗಸ್ಟ್ 15: ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ನಾಡಿನೆಲ್ಲೆಡೆ ಸ್ವಾತಂತ್ರ್ಯ ಹಬ್ಬದ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆ ಈ ಸಂದರ್ಭದಲ್ಲಿ ದೇಶದ ಸ್ಥಿತಿಗತಿಗಳ ಬಗ್ಗೆ ನಟ ಚೇತನ್ ಅಹಿಂಸಾ ಧ್ವನಿ ಎತ್ತಿದ್ದು, ಸ್ವಾತಂತ್ರ್ಯ ಎಂದರೇನು? ನಮ್ಮ ಮುಂದಿನ ಪೀಳಿಗೆಗೆ ಆ ಸ್ವಾತಂತ್ರ್ಯದ ಕನಸನ್ನು ನನಸಾಗಿಸುವ ಹಾದಿಯಲ್ಲಾದರೂ ನಾವಿದ್ದೇವೆಯೇ..? ಎಂದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ, ನಮ್ಮ ಸುತ್ತ-ಮುತ್ತ ನಡೆಯುತ್ತಿರುವ ಸದ್ಯದ ವಿದ್ಯಮಾನಗಳನ್ನು ನೋಡಿದಾಗ, ಕನ್ನಡ ನಾಡಿನ ಕವಿ, ಚಿಂತಕ, 'ಸಿದ್ಧಲಿಂಗಯ್ಯ'ನವರ "ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ" ಎಂಬ ಗೀತೆ ನೆನಪಾಗುತ್ತೆ. ಇವತ್ತು ಕೂಡ ಈ ಗೀತೆ ಪ್ರಸ್ತುತ ಎಂದು ಅನಸುತ್ತದೆ. 2024 ರಲ್ಲಿ ಕೂಡ ನಿಜವಾದ ಸ್ವಾತಂತ್ರ್ಯ ಎಂದರೇನು? ನಮ್ಮ ಮುಂದಿನ ಪೀಳಿಗೆಗೆ ಆ ಸ್ವಾತಂತ್ರ್ಯದ ಕನಸನ್ನು ನನಸಾಗಿಸುವ ಹಾದಿಯಲ್ಲಾದರೂ ನಾವಿದ್ದೇವೆಯೇ..? ಎಂಬ ಪ್ರಶ್ನೆ ಮೂಡುತ್ತೆ.

ಹೌದು, ಎಲ್ಲರಿಗೂ ಗೊತ್ತಿರುವಂತೆ ಆಗಸ್ಟ್ 15, 1947 ರ ಮಧ್ಯರಾತ್ರಿಯ ಸಮಯದಲ್ಲಿ, ಭಾರತ ಬ್ರಿಟಿಷ್ ರಾಜ್ ಆಳ್ವಿಕೆಯಿಂದ ಮುಕ್ತಿಯನ್ನು ಪಡೆಯಿತು. ಬ್ರಿಟಿಷರ ನಿರ್ಗಮನ ಮತ್ತು ಸ್ವ-ಆಡಳಿತದ ಸಾಕ್ಷಾತ್ಕಾರದೊಂದಿಗೆ ರಾಜಕೀಯ ಸ್ವಾತಂತ್ರ್ಯವನ್ನು ಸಾಧಿಸಲಾಯಿತು. ಇನ್ನೂ ಈ 'ಸ್ವರಾಜ್ಯ'ದ ಹಾದಿ ಸುಗಮವಾಗಿ ಇರಲಿಲ್ಲವಾದರೂ, ನಮ್ಮ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಹೋರಾಟಗಾರರಲ್ಲಿ ನನ್ನ 'ತಾತ' ಕೂಡ ಇದ್ದರು ಮತ್ತು ಅವರು ಕೂಡ ಜೈಲಿಗೆ ಹೋಗಿದ್ದರು ಅನ್ನುವುದು ನನಗೆ ಹೆಮ್ಮೆಯ ವಿಷಯ ಮತ್ತು ನಾನು ಅವರಿಗೆ ಸದಾ ಕೃತಜ್ಞನಾಗಿರುತ್ತೇನೆ.
20ನೇ ಶತಮಾನದ ಮಧ್ಯದಲ್ಲಿ ಯುರೋಪಿಯನ್ ವಸಾಹತುಶಾಹಿಯನ್ನು ಕಿತ್ತೊಗೆಯುವುದರೊಂದಿಗೆ ಮತ್ತು ಸ್ವಾತಂತ್ರ್ಯ ರಾಷ್ಟವಾಗಿ ರೂಪಗೊಳ್ಳಲು ಭಾರತಕ್ಕೆ ಸ್ವ-ಸರ್ಕಾರವು ಅನಿವಾರ್ಯವಾಗಿತ್ತು. ಅದಾಗ್ಯೂ, ಭಾರತದ ಅತ್ಯುತ್ತಮ ಕನಸಿಗೆ ದೇಶಿಯ ಶಕ್ತಿಗಳು ಅಧಿಕಾರ ಹಿಡಿದುಕೊಳ್ಳಬೇಕಾದರೂ ಅದರ ಎಲ್ಲ ನಾಗರಿಕರ ಆದರ್ಶ ರಾಷ್ಟ್ರದ ದೃಷ್ಟಿಕೋನವನ್ನು ಈಡೇರಿಸುವುದು ಕೂಡ ಅಷ್ಟೇ ಅವಶ್ಯಕ.
ನಾವು ಈ ಸ್ವಾಂತಂತ್ರ್ಯವನ್ನು ಕೇವಲ 'ನಿಯಮಿತ ಚುನಾವಣೆ'ಗಳಿಗೆ ಮತ್ತು 'ಅಧಿಕಾರದ ಅಹಿಂಸಾತ್ಮಕ' ಬದಲಾವಣೆಗೆ ಮಾತ್ರ ಸೀಮಿತಗೊಳಿಸಬಾರದು. ಅದರ ಬದಲು ನಮ್ಮ ಸಂವಿಧಾನದ ಪೀಠಿಕೆ ನಮಗೆ ಕಲ್ಪಿಸಿರುವ 'ಸಮಾನತೆ', 'ನ್ಯಾಯ', 'ಸ್ವಾತಂತ್ರ್ಯ', 'ಭಾತೃತ್ವ', 'ಧರ್ಮ ನಿರಪೇಕ್ಷತೆ' ಮತ್ತು 'ಸಮಾಜವಾದ'ದ ಮಾರ್ಗದಲ್ಲಿ ನಡೆದಾಗ ಮಾತ್ರ ಈ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತೆ. ನಿಜವಾದ ಸ್ವಾತಂತ್ರ್ಯದ ಕಡೆಗೆ ನಮಗೆ ಇದು ಮಾರ್ಗದರ್ಶನವನ್ನೂ ನೀಡುತ್ತದೆ.
20ನೇ ಶತಮಾನದ ಮಹಾನ್ ರಾಷ್ಟ್ರ ನಿರ್ಮಾಪಕರಾದ 'ತಂದೆ ಪೆರಿಯಾರ್' ಮತ್ತು 'ಬಾಬಾಸಾಹೇಬ್ ಅಂಬೇಡ್ಕರ್' ಅವರು ಪ್ರತಿರೋಧದ ಅನ್ವೇಷಣೆಯಿಲ್ಲದೆ ಸ್ವರಾಜ್ಯ ಅರ್ಥಹೀನ ಮತ್ತು ಶೂನ್ಯ ಎಂದು ನಮಗೆ ಕಲಿಸಿದವರು. ಇದು ನಮ್ಮೆಲ್ಲರನ್ನೂ ಸಂಕೋಲೆಯಲ್ಲಿ ಹಾಕುವ ಅಸಮಾನತೆ ಮತ್ತು ಅನ್ಯಾಯದ ಸಂಪೂರ್ಣದ ವ್ಯವಸ್ಥೆಗೆ ಸವಾಲಾಗಿದೆ.
ವಿವಿಧ 'ಜಾತಿ', 'ವರ್ಗ', 'ಲಿಂಗ', 'ಭಾಷಾ ಹಿನ್ನೆಲೆ', 'ಪ್ರದೇಶ', 'ಧರ್ಮ' ಮತ್ತು ವಯಸ್ಸಿನ 'ಭೇದ ಭಾವ' ಮರೆತು, 'ವಿಭಜನೆಯ ಶಕ್ತಿ' ಮತ್ತು 'ಪ್ರಸ್ತುತ ಸ್ಥಿತಿಯ ಶಕ್ತಿ'ಯ ವಿರುದ್ಧ ನಾವೆಲ್ಲರು ಹೋರಾಡಬೇಕು. ವಿರೋಧಿಸಬೇಕು. ಪರಿವರ್ತನೆಯ ಶಕ್ತಿಯಾಗಿ ಹೊರ ಹೊಮ್ಮಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯವನ್ನು ನಾವು ತರಲು ಸಾಧ್ಯ. ಈ ದಿಸೆಯಲ್ಲಿ ನಾವೆಲ್ಲರೂ ಹೊಸ ಪೀಳಿಗೆಯ ಜೊತೆ ಸಮಾನತಾವಾದಿಗಳಾಗಿ ಹೆಜ್ಜೆ ಇಡಬೇಕು ಎಂದು ಚೇತನ್ ಅಹಿಂಸಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications