ನನ್ನಷ್ಟು ಸಂಭಾವನೆ ಸೀರಿಯಲ್‌ನಲ್ಲಿ ಯಾರಿಗೂ ಸಿಕ್ಕಿಲ್ಲ: ಅಚ್ಚರಿ ವಿಚಾರ ಹೇಳಿದ ನಟ ಅವಿನಾಶ್
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ನಟ ಅವಿನಾಶ್ ಅವರು ಜನಪ್ರಿಯತೆ ಪಡೆದಿದ್ದಾರೆ. ಖಳನಟ ಹಾಗೂ ಪೋಷಕ ಪಾತ್ರಗಳ ಮೂಲಕ ಬರೋಬ್ಬರಿ ನಾಲ್ಕು ದಶಕಗಳ ಕಾಲ ಅವರು ತೆರೆಯ ಮೇಲೆ ಮಿಂಚುತ್ತಿದ್ದಾರೆ. ಇದೀಗ ಅವಿನಾಶ್ ಅವರು ಕಿರುತೆರೆಗೆ ಮರಳುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ "ವಸುದೇವ ಕುಟುಂಬ" ಎನ್ನುವ ಧಾರಾವಾಹಿಯಲ್ಲಿ ಹಿರಿಯ ನಟ ಅವಿನಾಶ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಬರೋಬ್ಬರಿ 30 ವರ್ಷಗಳ ಬಳಿಕ ಅವಿನಾಶ್ ಅವರು ಕಿರುತೆರೆಗೆ ಮರಳಿದ್ದು, ತಮ್ಮ ಸಂಭಾವನೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಿನಿಮಾ ರಂಗದಲ್ಲಿ 40 ವರ್ಷಗಳನ್ನು ಪೂರೈಸುತ್ತಿರುವ ಹಿರಿಯ ನಟ ಅವಿನಾಶ್ ಅವರು ಕಿರುತೆರೆಗೆ ಕಾಲಿಟ್ಟಿದ್ದಾರೆ. ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದ ಅವರು ಕಿರುತೆರೆಯಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆಯೂ ಹಲವು ಸೀರಿಯಲ್‌ಗಳಲ್ಲಿ ನಟಿಸುವಂತೆ ಅವಿನಾಶ್ ಅವರಿಗೆ ಆಫರ್ ಕೊಡಲಾಗಿತ್ತು. ಆದರೆ ಮಾಡಲ್ಲ ಎಂದು ನಿರಾಕರಿಸುತ್ತಿದ್ದರು. ಇದಕ್ಕೆ ಕಾರಣವನ್ನೂ ಹೇಳಿರುವ ಅವಿನಾಶ್ ಅವರು ಈ ಹೊಸ ಸೀರಿಯಲ್‌ಗೆ ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

'ನಾನು ಕೇಳಿದ ಸಂಭಾವನೆಗೆ ಓಕೆ ಅಂದ್ರು'
'ತುಂಬಾ ಚಾನಲ್‌ನವರು ನನಗೆ ಸೀರಿಯಲ್ ಮಾಡಿ ಎಂದು ಕೇಳಿಕೊಂಡರು. ಆದರೆ ನಾನು ನೇರವಾಗಿ ಮಾಡಲ್ಲ ಎಂದೇ ಹೇಳಿದ್ದೆ. ಸೀರಿಯಲ್ ನನಗೆ ಕಷ್ಟವಾಗುತ್ತೆ ಎಂದಿದ್ದೆ. ಆದರೆ ಈ ಸೀರಿಯಲ್‌ನವರು ಬಂದು ನನಗೆ ಕೇಳಿದ್ದಲ್ಲದೆ ನಾನು ಕೇಳಿದ ಎಲ್ಲದಕ್ಕೂ ಓಕೆ ಅಂದ್ರು. ಸಂಭಾವನೆ ವಿಚಾರದಲ್ಲೂ ಅಷ್ಟೇ ನಾನು ಕೇಳಿದ್ದಷ್ಟು ಒಪ್ಪಿಕೊಂಡರು. ಇದರಲ್ಲಿ ನನ್ನದು ಕ್ಯಾಮಿಯೋ ರೋಲ್ ಅಷ್ಟೇ. ನಾನೊಂದು ಹದಿನೈದು ಎಪಿಸೋಡ್‌ನಲ್ಲಿರುತ್ತೇನೆ' ಎಂದು ಅವಿನಾಶ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
'ಶೂಟಿಂಗ್ ಕೂಡ ಕೆಲವೇ ದಿನ ಅಂದ್ರು. ಅದಕ್ಕಾಗಿ ಮಾಡೋಣ ಅಂತ ಒಪ್ಕೊಂಡೆ. ನನ್ನ ಸಂಭಾವನೆ ಎಷ್ಟಿದೆ? ಎಂದು ರಿವೀಲ್ ಮಾಡಲ್ಲ. ಆದರೆ ನನ್ನ ಪ್ರಕಾರ ನಟರಾಗಿ ಸೀರಿಯಲ್‌ನಲ್ಲಿ ನನ್ನಷ್ಟು ಯಾರೂ ಪೇಮೆಂಟ್ ತೆಗೆದುಕೊಂಡಿರಲು ಸಾಧ್ಯವಿಲ್ಲ. ಅದಂತೂ ಸತ್ಯ' ಎಂದು ತಮ್ಮ ಸಂಭಾವನೆ ಕುರಿತು ಹೇಳಿದ್ದಾರೆ. ಆದರೆ ನಿಖರವಾಗಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
'ನನ್ನ ವೃತ್ತಿ ಬದುಕಿನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಸಾಧನೆ ಏನು ಎಂದು ಜನರೇ ಹೇಳಬೇಕು. ತುಂಬಾ ಪ್ರಶಸ್ತಿಗಳನ್ನ ತಗೊಂಡಿದ್ದೀನಿ. ಜನ ನನ್ನ ಇನ್ನೂ ನೋಡೋಕೆ ಇಷ್ಟಪಡುತ್ತಿದ್ದಾರೆ ಎಂದರೆ ಅದು ನನ್ನ ಮೇಲಿಟ್ಟಿರುವ ಪ್ರೀತಿ, ಗೌರವ. ಜನಕ್ಕೆ ಬೇಡವಾದಾಗ ನಾವು ಸಿನಿಮಾದಲ್ಲಿರಲು ಸಾಧ್ಯವೇ ಇಲ್ಲ' ಎಂದು ಅವಿನಾಶ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications