ಅಪ್ಪು ಹೆಸರಲ್ಲಿ ಹೀಗಾ ಮಾಡೋದು? ವಿಷಯ ಗೊತ್ತಾದ್ರೆ ಅಭಿಮಾನಿಗಳ ರಕ್ತ ಕುದಿಯುತ್ತೆ!
ಸ್ಯಾಂಡಲ್‌ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಹೃದಯದಲ್ಲಿ ದೇವರಾಗಿ ನೆಲೆಸಿದ್ದಾರೆ. ಅಪ್ಪು ಸ್ಮರಣಾರ್ಥ ಹಲವರು ಪುಣ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ. ಅನ್ನದಾನ, ಶಿಕ್ಷಣ ಸೇರಿದಂತೆ ಹಲವು ಜನೋಪಯೋಗಿ ಕೆಲಸಗಳ ಮೂಲಕ ಆರಾಧಿಸುತ್ತಿದ್ದಾರೆ. ಆದರೆ, ಅಪ್ಪು ಹೆಸರಿಗೆ ಕಳಂಕ ತರುವ ಯತ್ನವೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ರಾಜ್ಯಾದ್ಯಂತ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳೇ ನಡೆಯುತ್ತಿದ್ದು, ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಅಪ್ಪು ಅವರ ಹೆಸರಿನಲ್ಲಿ ವಂಚನೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘದ ಹೆಸರಿನಲ್ಲೇ ಯಾವುದೋ ವ್ಯಕ್ತಿ ನಕಲಿ ಕ್ರೀಡಾಕೂಟದ ಪೋಸ್ಟರ್ ಮಾಡಿಸಿ ಹರಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಪೋಸ್ಟರ್‌ನಲ್ಲಿ ನ್ಯಾಷನಲ್ ಲೆವೆಲ್ ಪುರುಷರ ಮತ್ತು ಮಹಿಳೆಯರ ಓಟದ ಸ್ಪರ್ಧೆ ಆಯೋಜಿಸಿರುವುದಾಗಿ ಮುದ್ರಿಸಲಾಗಿದೆ. ಈ ಪೋಸ್ಟರ್ ಮೂಲಕ ಅಮಾಯಕರನ್ನು ವಂಚಿಸುವ ಉದ್ದೇಶ ಹೊಂದಿದ್ದಾನೆ ಎನ್ನಲಾಗಿದೆ. ಈ ಪೋಸ್ಟರ್‌ನಲ್ಲಿ ಕ್ರೀಡಾಕೂಟದ ಸ್ಥಳ ಮಳವಳ್ಳಿ ಎಂದು ಮುದ್ರಿಸಿದ್ದು, ಅಸಲಿಗೆ ಇಂತಹ ಯಾವುದೇ ಕ್ರೀಡಾಕೂಟ ಅಲ್ಲಿ ಆಯೋಜಿಸುತ್ತಿಲ್ಲ ಎಂಬುದು ಗೊತ್ತಾಗಿದೆ.
ಇನ್ನು ಈ ನಕಲಿ ಪೋಸ್ಟರ್‌ನಲ್ಲಿ ಕ್ರೀಡಾಕೂಟಕ್ಕೆ ಭಾರಿ ಮೊತ್ತದ ನಗದು ಬಹುಮಾನ ಕೂಡ ಇರುವುದಾಗಿ ಪ್ರಕಟಣೆ ಹೊರಡಿಸಲಾಗಿದೆ. ಓಟದ ಸ್ಪರ್ಧೆಯಲ್ಲಿ ಗೆದ್ದವರಿಗೆ 5 ಲಕ್ಷ ರೂಪಾಯಿ ಪ್ರಥಮ ಬಹುಮಾನ, 4 ಲಕ್ಷ ದ್ವಿತೀಯ ಬಹುಮಾನ ಹಾಗೂ ಕ್ರಮವಾಗಿ 3 ಲಕ್ಷ, 2 ಲಕ್ಷ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನ ಇರುವುದಾಗಿ ಪ್ರಕಟಣೆಯಲ್ಲಿದೆ. ವಾಟ್ಸಾಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ಶೇರ್ ಮಾಡಲಾಗಿದ್ದು, ಇದನ್ನು ಹಲವರು ನಿಜ ಎಂದೇ ಭಾವಿಸಿದ್ದಾರೆ.

ಈ ನಕಲಿ ಪೋಸ್ಟರ್ ರಾಶಿರಾಪು ಸೇನಾ ಸಮಿತಿ ಕಣ್ಣಿಗೆ ಬಿದ್ದಿದ್ದು, ಕೂಡಲೇ ಮಳವಳ್ಳಿ ಠಾಣೆಗೆ ತೆರಳಿ ದೂರು ದಾಖಲಿಸಿದೆ. ಯಾರೋ ಅಪರಿಚಿತ ವ್ಯಕ್ತಿಯು ಈ ರೀತಿ ವಂಚನೆ ಮಾಡಲು ಅಪ್ಪು ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾನೆ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂಗಡವಾಗಿ 3,500 ರೂಪಾಯಿ ಎಂಟ್ರಿ ಫೀಸ್ ಕಟ್ಟಬೇಕು ಎಂದೂ ಪ್ರಕಟಣೆಯಲ್ಲಿದ್ದು, ಹಲವರು ಈ ಸ್ಪರ್ಧೆ ನಿಜವೆಂದು ನಂಬಿ ಹಣ ಹಾಕಿರುವ ಸಾಧ್ಯತೆಯೂ ಇದೆ ಎಂದು ದೂರಿದೆ.
ಇನ್ನು ನವೆಂಬರ್ 20ರಂದು ಬೆಳಿಗ್ಗೆ 8 ಗಂಟೆಗೆ ಈ ಓಟದ ಸ್ಪರ್ಧೆ ನಡೆಯಲಿದ್ದು, ಇದನ್ನು ಮಂಡ್ಯ ಜಿಲ್ಲೆಯ ಮಳವಳ್ಳಿಯ ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಆಯೋಜಿಸುತ್ತಿದೆ ಎಂದು ಬಿಂಬಿಸಲಾಗಿದೆ. ಆದರೆ, ಈ ಪೋಸ್ಟರ್ ಅನ್ನು ಮುಧೋಳದಲ್ಲಿ ಮುದ್ರಿಸಲಾಗಿದ್ದು, ಇದು ಸಂಪೂರ್ಣ ನಕಲಿ ಎಂದು ಆರೋಪ ಮಾಡಲಾಗಿದೆ.

ಸ್ಪರ್ಧೆ ಮಾಡಿರುವ ವ್ಯಕ್ತಿ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಕೆಲವರು ಈ ಪೋಸ್ಟರ್ ಓದಿ ಭಾರಿ ಮೊತ್ತದ ನಗದು ಬಹುಮಾನ ಪಡೆಯುವ ಆಸೆಗೆ ಮುಂಗಡ ಹಣ ನೀಡುವ ಸಾಧ್ಯತೆಯೂ ಇದೆ. ದಯವಿಟ್ಟು ಯಾರೂ ಕೂಡ ಈ ರೀತಿ ಪೋಸ್ಟರ್ ನಂಬಿ ಮೊದಲೇ ಹಣ ಕಳಿಸಿ ವಂಚನೆಗೆ ಒಳಗಾಗಬೇಡಿ ಎಂದು ರಾಶಿರಾಪು ಸೇನಾ ಸಮಿತಿ ಅಧ್ಯಕ್ಷ ದೊಡ್ಡಯ್ಯ ಮನವಿ ಮಾಡಿದ್ದಾರೆ. ಸದ್ಯ ಈ ವಿಚಾರವು ಅಪ್ಪು ಅಭಿಮಾನಿಗಳು ಗರಂ ಆಗುವಂತೆ ಮಾಡಿದೆ.












Click it and Unblock the Notifications