ಮತ ಹಾಕಲು ಅಂಗವಿಕಲರಿಗೆ ವಿಶೇಷ ಸೌಲಭ್ಯ:ಸಂಜೀವ್ ಕುಮಾರ್
ಬೆಂಗಳೂರು, ಮೇ 1: ಮತದಾನದಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗ ದಿವ್ಯಾಂಗರಿಗಾಗಿ ಪ್ರಸ್ತುತ ವಿಧಾನ ಸಭಾ ಚುನಾವಣೆಯ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ತಿಳಿಸಿದರು.
ದಿವ್ಯಾಂಗರ ಮತದಾನವನ್ನು ಪ್ರೋತ್ಸಾಹಿಸಲು ಹಾಗೂ ದಿವ್ಯಾಂಗರಿಗಾಗಿ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುತ್ತಾ ರಾಜ್ಯದಲ್ಲಿ 3,40,276 ದಿವ್ಯಾಂಗಚೇತನರಿದ್ದು ಈ ಪೈಕಿ 3,35,966 ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ವಿಶೇಷ ಮತದಾರರ ನೋಂದಣಿ ಅಭಿಯಾನದಲ್ಲಿ ದಿವ್ಯಾಂಗರಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ ಸುಮಾರು 13,243 ದಿವ್ಯಾಂಗರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಅಶ್ವಿನಿ ಅಂಗಡಿ ಮತ್ತು ಪ್ಯಾರಾ ಒಲಂಪಿಯಡ್ ಗಿರೀಶ್ ಅವರನ್ನು ಚುನಾವಣಾ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದ್ದು ಇದರಿಂದ ದಿವ್ಯಾಂಗರಿಗೆ ಮತದಾನದ ಬಗ್ಗೆ ಉತ್ಸಾಹ ತುಂಬಬಹುದು ಎಂದು ಹೇಳಿದರು.
ದಿವ್ಯಾಂಗರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ಅನೇಕ ರೀತಿಯ ದಿವ್ಯಾಂಗ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ದಿವ್ಯಾಂಗರು ಸುಲಭವಾಗಿ ಮತಗಟ್ಟೆ ಪ್ರವೇಶಿಸಲು ಅನುವಾಗುವಂತೆ ರ್ಯಾಂಪ್‍ಗಳನ್ನು ನಿರ್ಮಿಸಲಾಗಿದೆ.
ವಿಕಲಾಂಗರ ವಾಹನಗಳಿಗೆ ಮತಗಟ್ಟೆ ಹತ್ತಿರ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಅವರುಗಳು ಸಹಾಯಕ್ಕಾಗಿ ಸ್ವಯಂ ಸೇವಕ ಸಿಬ್ಬಂದಿಗಳಿರುತ್ತಾರೆ. ಜೊತೆಗೆ ಸುಲಭವಾಗಿ ಮತದಾನ ಮಾಡಲು ಅವರುಗಳಿಗೆ ಸರತಿಯಲ್ಲಿ ನಿಲ್ಲುವ ಬದಲು ನೇರವಾಗಿ ಮತ ಚಲಾಯಿಸಲು ಮೊದಲ ಅವಕಾಶ ಮಾಡಿಕೊಡಲಾಗುತ್ತದೆ.
ಮತ ಯಂತ್ರಗಳಲ್ಲಿ ಅಂಧ ವ್ಯಕ್ತಿಗಳಿಗಾಗಿ ಬ್ರೈಲ್ ಲಿಪಿಯನ್ನು ಅಳವಡಿಸಲಾಗಿದೆ. ದೃಷ್ಠಿ ಮಂದವುಳ್ಳ ವ್ಯಕ್ತಿಗಳಿಗಾಗಿ ಭೂತಕನ್ನಡಿಯನ್ನು ನೀಡಲಾಗುತ್ತದೆ. ಮತಗಟ್ಟೆ ಪ್ರವೇಶಿಸುವ ಅಂಗವಿಕಲರು ಕೆಲಕಾಲ ವಿರಮಿಸಿಕೊಳ್ಳಲು ಅನುವಾಗುವಂತೆ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಗೆ ತಮ್ಮನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಚುನಾವಣಾ ಆಯೋಗಕ್ಕೆ ತಾವು ಅಭಾರಿ, ಸಾರ್ವಜನಿಕರು ಯಾವುದೇ ಆಮಿಷಗಳಿಗೆ ಒಳಗಾಗದೆ ಉತ್ತಮ ನಾಯಕರನ್ನು ಆರಿಸಬೇಕು, ಕೃತಕಕೊಡುಗೆಗಳಿಗೆ ಮಾರು ಹೋಗಬೇಡಿ ನಾನು ಮತದಾನ ಮಾಡುತ್ತೇನೆ ನೀವು ಸಹ ಮತದಾನ ಮಾಡಿ ಎಂದು ಅಶ್ವಿನಿ ಅಂಗಡಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications