ಸಮೀಕ್ಷೆ: ಕಾಂಗ್ರೆಸ್ ಗೆ ಪ್ಲಸ್ ಆಗುತ್ತದಂತೆ ರಾಹುಲ್ ಟೆಂಪಲ್ ರನ್
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ದೇಗುಲ, ಮಠ-ಮಾನ್ಯಗಳನ್ನು ಗಿರಗಿರ ಎಂದು ಸುತ್ತಾಡಿದ್ದು ಈ ಸಲ ಕಾಂಗ್ರೆಸ್ ಪಾಲಿಗೆ ಲಾಭದಾಯಕ ಆಗುವ ಸಾಧ್ಯತೆ ಇದೆ. ಇಂಡಿಯಾ ಟುಡೇ- ಕಾರ್ವಿ ಸಂಸ್ಥೆ ಕರ್ನಾಟಕ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗ ಆಗಿದೆ. ರಾಹುಲ್ ಗಾಂಧಿ ಅವರ ದೇಗುಲ ಭೇಟಿಯಿಂದ ಕಾಂಗ್ರೆಸ್ ಗೆ ಪ್ಲಸ್ ಆಗಲಿದೆಯಂತೆ.
ರಾಹುಲ್ ಗಾಂಧಿ ಅವರು ಶೃಂಗೇರಿ, ತುಮಕೂರಿನ ಸಿದ್ದಗಂಗಾ ಮಠ, ಕೊಪ್ಪಳದ ಹುಲಿಗೆಮ್ಮ ದೇವಸ್ಥಾನ, ಬಸವ ಕಲ್ಯಾಣ ಹೀಗೆ ಕರ್ನಾಟಕದ ನಾನಾ ಕಡೆ ಮಠ-ಮಾನ್ಯಗಳಿಗೆ ಭೇಟಿ ನೀಡಿದ್ದು ಕಾಂಗ್ರೆಸ್ ಪಾಲಿಗೆ ಈ ಬಾರಿಯ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಬಹುದು ಎಂಬ ಅಭಿಪ್ರಾಯವನ್ನು ಶೇ 42ರಷ್ಟು ಮಂದಿ ಅನುಮೋದಿಸಿದ್ದಾರೆ.

ಶೇಕಡಾ 35ರಷ್ಟು ಮಂದಿ ಇಲ್ಲ ಎಂಬ ಉತ್ತರ ನೀಡಿದ್ದರೆ, ಶೇ 23ರಷ್ಟು ಮಂದಿ ಹೇಳಲಾಗುವುದಿಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮೇಲ್ನೋಟಕ್ಕೆ ಫಲಿತಾಂಶವನ್ನು ಗಮನಿಸುವುದಾದರೆ ರಾಹುಲ್ ಗಾಂಧಿ ಅವರ ದೇಗುಲ, ಮಠ-ಮಾನ್ಯಗಳ ಭೇಟಿ ಕಾಂಗ್ರೆಸ್ಸಿನ ಪಾಲಿಗೆ ಪ್ಲಸ್ ಆಗುವಂತೆ ಕಾಣುತ್ತಿದೆ. ಆದರೂ ಚುನಾವಣಾ ಫಲಿತಾಂಶ ಬರುವವರೆಗೂ ಕಾದು ನೋಡಬೇಕಿದೆ.











Click it and Unblock the Notifications