ಶಿರಹಟ್ಟಿಯಲ್ಲಿ ಗೆದ್ದ ಪಕ್ಷಕ್ಕೇ ಅಧಿಕಾರ ಸಿಗುತ್ತಾ?
ಬೆಂಗಳೂರು, ಮೇ 15: ಯಾವ ಸರ್ಕಾರಕ್ಕೆ ಬಹುಮತ ಸಿಗುತ್ತದೆ ಎನ್ನುವುದು ಸದ್ಯದ ಕುತೂಹಲ. ದೊಡ್ಡ ನಾಯಕರ ಭವಿಷ್ಯ ಏನಾಗಲಿದೆ ಎಂಬ ಕಾತರ ಹೆಚ್ಚುತ್ತಿದೆ. ಇವೆಲ್ಲದರ ನಡುವೆ ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಫಲಿತಾಂಶದತ್ತ ರಾಜಕೀಯ ಮುಖಂಡರ ಕಣ್ಣು ನೆಟ್ಟಿದೆ.
ರಾಜ್ಯ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ಶಿರಹಟ್ಟಿ ಕ್ಷೇತ್ರದ ಫಲಿತಾಂಶಕ್ಕೆ ಮಹತ್ವವಿದೆ. 1978ರಿಂದಲೂ ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೋ, ರಾಜ್ಯದಲ್ಲಿ ಅದೇ ಪಕ್ಷ ಅಧಿಕಾರಕ್ಕೆ ಬಂದಿರುವುದು ವಿಶೇಷ. ಹೀಗಾಗಿ ಅತಂತ್ರ ವಿಧಾನಸಭೆಯ ಫಲಿತಾಂಶ ಬರಲಿದೆ ಎಂಬ ಅಂದಾಜಿನ ನಡುವೆಯೇ ಶಿರಹಟ್ಟಿಯ ಫಲಿತಾಂಶಕ್ಕೆ ಪ್ರಾಮುಖ್ಯ ದೊರೆತಿದೆ.
ಶಿರಹಟ್ಟಿಯಲ್ಲಿ ಕಾಂಗ್ರೆಸ್ ಶಾಸಕ ರಾಮಕೃಷ್ಣ ಎಸ್ ದೊಡ್ಡಮನಿ ಮತ್ತು ಬಿಜೆಪಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ನಡುವೆ ನೇರ ಹಣಾಹಣಿ ಇದೆ ಎನ್ನಲಾಗಿದೆ.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ರಾಜ್ಯದಲ್ಲಿ ರಚನೆಯಾಗುವ ಸರ್ಕಾರಕ್ಕೂ ಶಿರಹಟ್ಟಿಯ ಅಭ್ಯರ್ಥಿಯ ಗೆಲುವಿಗೂ ನಂಟು ಇರುವುದನ್ನು ಕಾಣಬಹುದು.
1978ರಲ್ಲಿ ಗೂಳಪ್ಪ ಉಪನಾಳ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಆಗ ದೇವರಾಜ ಅರಸು ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರು.
1983ರಲ್ಲಿ ಉಪನಾಳ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆಗ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷಕ್ಕೆ ಉಪನಾಳ ಬೆಂಬಲ ನೀಡಿದ್ದರು.
1985ರಲ್ಲಿ ಜನತಾಪಕ್ಷದ ಟಿ.ಬಿ. ಬಾಳಿಕಾಯಿ ಜಯಗಳಿಸಿದ್ದರು. ಆಗ ರಾಮಕೃಷ್ಣ ಹೆಗಡೆ ಅವರ ಸರ್ಕಾರ ಅಸ್ತಿತ್ವದಲ್ಲಿತ್ತು. 1989ರಲ್ಲಿ ಎಸ್.ಎಂ. ಪಾಟೀಲ ಜಯಗಳಿಸಿದರು. ಆಗ ವೀರೇಂದ್ರ ಪಾಟೀಲ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿತ್ತು.
1994ರಲ್ಲಿ ಜನತಾದಳ ಪಕ್ಷದಿಂದ ಗಂಗಣ್ಣ ಮಹಂತ ಶೆಟ್ಟರ್ ಅವರು ಜಯಗಳಿಸಿದ್ದರು. ಆಗ ಜೆಡಿಎಸ್ ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಅಧಿಕಾರ ಹಿಡಿದಿತ್ತು.
1999 ಮತ್ತು 2004ರಲ್ಲಿ ಕಾಂಗ್ರೆಸ್‌ನ ಜಿ.ಎಸ್. ಗಡ್ಡದೇವರಮಠ ಜಯಗಳಿಸಿದ್ದರು. ಈ ಅವಧಿಯಲ್ಲಿ ಕ್ರಮವಾಗಿ ಎಸ್.ಎಂ. ಕೃಷ್ಣ ಮತ್ತು ಧರಂ ಸಿಂಗ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
2008ರಲ್ಲಿ ಬಿಜೆಪಿಯ ರಾಮಣ್ಣ ಲಮಾಣಿ ಜಯಗಳಿಸಿದ್ದರು. ಆಗ ಮೊದಲ ಬಾರಿಗೆ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಹಿಡಿದಿತ್ತು.












Click it and Unblock the Notifications