ತುಮಕೂರು ಕ್ಷೇತ್ರ: ಅಂಗೈ ಅಗಲದ ನಗರಕ್ಕೆ ಮೂಲಸೌಕರ್ಯ ಮೈನಸ್
ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಂದರೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳು. ಹತ್ತಾರು ಜಿಲ್ಲೆಗೆ ತೆರಳಲು ಇರುವ ಹೆಬ್ಬಾಗಿಲು. ಈಗಷ್ಟೇ ಬಿರುಸು ಕಾಣುತ್ತಿರುವ ರಿಯಲ್ ಎಸ್ಟೇಟ್. ಅಂಗೈ ಅಗಲದಷ್ಟಿರುವ ನಗರ ಪ್ರದೇಶ. ಮುಖ್ಯ ಬಸ್ ನಿಲ್ದಾಣದಿಂದ ಯಾವ ದಿಕ್ಕಿಗೆ ಹೊರಟರೂ ಎಂಟು-ಹತ್ತು ಕಿಲೋಮೀಟರ್ ನಲ್ಲಿ ಮುಗಿದೇ ಹೋಗುವ ನಗರ ವ್ಯಾಪ್ತಿ.
ಬೆಂಗಳೂರೆಂಬ ಬೆಂಗಳೂರು ಒಂದೂವರೆ ಗಂಟೆ ಕಾಲದಷ್ಟು ದೂರದಲ್ಲೇ ಇದೆ ಎಂಬುದೂ ಸೇರಿದಂತೆ ನಾನಾ ಕಾರಣಕ್ಕೆ ಇಷ್ಟವಾಗುವ ಈ ನಗರದ ಆತ್ಮದಲ್ಲಿನ್ನೂ ಹಳ್ಳಿಗಾಡಿದೆ. ಸತತವಾಗಿ ಬಿಜೆಪಿ ಬಾವುಟ ಹಾರಿದ್ದ ಈ ಕ್ಷೇತ್ರದಲ್ಲೀಗ ಕಾಂಗ್ರೆಸ್ ನ ಡಾ.ರಫೀಕ್ ಅಹಮದ್ ಶಾಸಕರು.
ಬಿಜೆಪಿಗೆ ಇಲ್ಲಿ ಬಂಡಾಯದ ಶಾಪ ತಟ್ಟಿದೆ. ಕೆಜೆಪಿಯಿಂದ ಬಂದ ಜ್ಯೋತಿಗಣೇಶ್ ಗೆ ನಗರ ಕ್ಷೇತ್ರದ ಟಿಕೆಟ್ ಸಿಕ್ಕ ಮೇಲಂತೂ ಬಿಜೆಪಿಗೆ ಬಂಡಾಯದ ಕಾವು ವಿಪರೀತವಾಗಿಯೇ ತಾಗಿದೆ. ಇನ್ನು ಜೆಡಿಎಸ್ ಯಾವ ಕ್ಷಣದಲ್ಲಾದರೂ ಚಿಗಿತು ನಿಲ್ಲುವ ಸಾಧ್ಯತೆ ಇರುವ ಕ್ಷೇತ್ರ ಇದು. ಅದಕ್ಕೆ ತಕ್ಕಂತೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಹಗಲಿರುಳು ಬೆವರು ಹರಿಸಿ ಪ್ರಚಾರ ಕೈಗೊಂಡಿದ್ದಾರೆ.

ಕಾಂಗ್ರೆಸ್ ನಿಂದ ರಫೀಕ್ ಅಹಮದ್ ಅವರೇ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೂಲಸೌಕರ್ಯವಾದ ರಸ್ತೆ, ಚರಂಡಿ, ಸಾರಿಗೆ ಸೌಲಭ್ಯ ಇವೆಲ್ಲವೂ ಇಲ್ಲಿ ಇನ್ನೂ ಅಭಿವೃದ್ಧಿ ಕಾಣಬೇಕಿದೆ. ಲಿಂಗಾಯತ, ಒಕ್ಕಲಿಗ, ಮುಸ್ಲಿಮರ ಮತಗಳು ಬಹಳ ಮುಖ್ಯವಾದವು. ವಿಶ್ವಕರ್ಮ, ಬ್ರಾಹ್ಮಣ, ಆರ್ಯವೈಶ್ಯ ಹಾಗೂ ಜೈನರ ಮತಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ.
ಇಲ್ಲಿನ ಎಪಿಎಂಸಿ, ಕೋ ಆಪರೇಟಿವ್ ಬ್ಯಾಂಕ್- ಸೊಸೈಟಿ...ಇತರ ವಾಣಿಜ್ಯ ಚಟುವಟಿಕೆಯ ಕೇಂದ್ರಗಳನ್ನು ಲೆಕ್ಕ ಸಹಿತ ಮುಂದಿಟ್ಟರೆ ಈ ನಗರದ ತಾಕತ್ತು ಏನು ಎಂಬುದರ ಅರಿವಾಗುತ್ತದೆ. ನಗರಕ್ಕೆ ಹೊಂದಿಕೊಂಡಂತೆ ಇರುವ ಕ್ಯಾತ್ಸಂದ್ರದ ಸಿದ್ದಗಂಗಾ ಮಠದ ಕೀರ್ತಿ ರಾಷ್ಟ್ರವ್ಯಾಪಿ ಇದೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿ ಅದ್ಯಾವ ಕಾಲವಾಯಿತೋ? ಆದರೆ ಖಾಸಗಿ ಬಡಾವಣೆಗಳನ್ನು ಮಾಡುವವರಿಗೆ ಜಾಗಕ್ಕೆ ಕೊರತೆಯಿಲ್ಲ ಆದರೆ ನಗರಾಭಿವೃದ್ಧಿ ಇಲಾಖೆಗೆ ಮಾತ್ರ ಯಾವ ಸ್ಥಳವೂ ಸಿಗುತ್ತಿಲ್ಲ. ಕುಡಿಯುವ ನೀರು, ಕೆಲ ಬಡಾವಣೆಗಳ ರಸ್ತೆ, ಬೀದಿ ದೀಪದ ಅಭಿವೃದ್ಧಿ ಆಗಬೇಕಿದೆ. ಪಾದಚಾರಿ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕಿದೆ.
ಮುಸ್ಲಿಮರ ಬಾಹುಳ್ಯ ಇರುವ ಪ್ರದೇಶದ ಕೆಲವು ಕಡೆ ಕೋಮು ಸಂಘರ್ಷಗಳು ಉದ್ಭವಿಸಬಹುದು ಎಂಬ ಭಯದಲ್ಲೇ ಜನರು ಬದುಕುವ ಸನ್ನಿವೇಶವನ್ನು ಕಾಣಬಹುದು. ಇದಕ್ಕೆ ರಾಜಕೀಯ ಪಕ್ಷಗಳು ಕಾರಣ ಎನ್ನುವುದು ಕೆಲವು ಸಂಘಟನೆಗಳ ಮುಖಂಡರ ಆರೋಪ. ಒಳ್ಳೆ ಚಿತ್ರಮಂದಿರಗಳು ಇಲ್ಲದ, ಒಂದೊಳ್ಳೆ ಈಜುಕೊಳ ಇಲ್ಲದ ಈ ಕ್ಷೇತ್ರದ ಬಗ್ಗೆ ಸ್ಮಾರ್ಟ್ ಸಿಟಿಯ ಕನಸುಗಳನ್ನು ಕಾಣಲಾಗುತ್ತಿದೆ.












Click it and Unblock the Notifications