ಶಿಡ್ಲಘಟ್ಟ: ನಿರ್ಣಾಯಕ ಆಗಲಿದೆ ಮೇಲೂರು ರವಿ ಸ್ಪರ್ಧೆ
ಏಷ್ಯಾದಲ್ಲೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಇರುವುದು ಈ ತಾಲೂಕಿನಲ್ಲಿ. ಇಲ್ಲಿನ ರೇಷ್ಮೆಗೂ ಒಳ್ಳೆ ಬೇಡಿಕೆ ಇದೆ. ಒಳಚರಂಡಿ ಸೌಲಭ್ಯ ಹೊಂದಿದ ಮೊದಲ ನಗರ ಎಂಬ ಅಗ್ಗಳಿಕೆ ಶಿಡ್ಲಘಟ್ಟದ್ದು. ದೇಶಭಕ್ತರು, ಯೋಧರನ್ನು ಹೊಂದಿರುವ ಭಕ್ತರಹಳ್ಳಿ ಈ ತಾಲೂಕಿನ ಪ್ರಮುಖ ಗ್ರಾಮ.
ಇಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕವಾದವು. ಪಟ್ಟಣದಲ್ಲಿ ಮುಸ್ಲಿಮರ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ತಾಲೂಕಿನಲ್ಲಿ ಕಾಂಗ್ರೆಸ್ ನ ಪ್ರಾಬಲ್ಯ ಕಾಯ್ದುಕೊಂಡು ಬಂದಿತ್ತು. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿ.ಮುನಿಯಪ್ಪ ಅವರನ್ನು ಸೋಲಿಸಿದ ಜೆಡಿಎಸ್ ನ ರಾಜಣ್ಣ ಶಾಸಕರಾದರು.
ಒಂದು ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷದಿಂದ ಪಾಪಣ್ಣ ಎಂಬುವವರು ಶಾಸಕರಾಗಿದ್ದರು. ತಾಲೂಕಿನ ಗ್ರಾಮೀಣ ಪ್ರದೇಶಗಳು ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಅಭಿವೃದ್ಧಿ ಆಗಬೇಕಿದೆ. ಈ ಭಾಗದ ಜನರ ಹೆಚ್ಚಿನ ವಹಿವಾಟು ಚಿಂತಾಮಣಿ ಮತ್ತು ಬೆಂಗಳೂರು ಜೊತೆಗೆ ಹೆಚ್ಚು.

ಮೇಲೂರಿನ ರವಿ ಜೆಡಿಎಸ್ ಟಿಕೆಟ್ ಕೇಳಿದ್ದು, ಅವರಿಗೆ ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ನಿಲ್ಲುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗೆ ಅನುಕೂಲ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶಿಡ್ಲಘಟ್ಟದ ದೇವರು ಹಿಂದೆ-ಮುಂದೆ ಅನ್ನೋ ಮಾತು ಕೇಳಿರ್ತೀರಿ. ಅದು ಯಾಕೆ ಗೊತ್ತಾ? ಅಲ್ಲಿನ ರಸ್ತೆ ಅಷ್ಟು ಕಿಷ್ಕಿಂದೆ. ದೇವರ ರಥವನ್ನು ನೇರವಾಗಿ ತಿರುಗಿಸಲು ಸಹ ಸಾಧ್ಯವಾಗದಷ್ಟು ಇಕ್ಕಟ್ಟು. ಅಂದರೆ ರಸ್ತೆ ಅಭಿವೃದ್ಧಿ ಆಗಬೇಕು ಅನ್ನೋದು ಸತ್ಯ.
ಇನ್ನು ಇಲ್ಲಿನ ಜನರ ಬಹು ಕಾಲದ ಬೇಡಿಕೆ ಅಂದರೆ ಅತ್ಯಾಧುನಿಕ ರೇಷ್ಮೆ ಮಾರುಕಟ್ಟೆ ನಿರ್ಮಾಣ. ಆ ಬೇಡಿಕೆ ಇನ್ನೂ ಈಡೇರಿಲ್ಲ. ಆ ನಂತರ ಅರಣ್ಯಪ್ರದೇಶದ ಅಭಿವೃದ್ಧಿ ಆಗಬೇಕು ಎಂಬುದು ಕೂಡ ಇನ್ನೂ ಪ್ರಸ್ತಾವದ ಹಂತದಲ್ಲಿಯೇ ಇದೆ. ಅದು ಸಾಕಾರ ಆಗುತ್ತದಾ ಎಂಬ ಬಗ್ಗೆ ಜನರ ನಿರೀಕ್ಷೆಯೂ ಹಾಗೇ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಸ್ ಡಿಪೋ, ಅಂಬೇಡ್ಕರ್ ಭವನ, ರಂಗ ಮಂದಿರ, ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೊಸ ಸ್ಥಳ ಮತ್ತು ಮೂಲಸೌಕರ್ಯ, ನಗರಸಭೆಯ ಹೊಸ ಕಟ್ಟಡ ಹಾಗೂ ನಗರದ ನೀರು ಮತ್ತು ತ್ಯಾಜ್ಯ ವಿಲೇವಾರಿ, ರೈಲು ನಿಲ್ದಾಣದಲ್ಲಿ ತರಕಾರಿ, ಆಲೂಗಡ್ಡೆ, ಈರುಳ್ಳಿ, ಗೊಬ್ಬರ ಮುಂತಾದವುಗಳ ಸಾಗಾಣಿಕೆಗೆ ಅನುಕೂಲಕರ ಗೋದಾಮು ಇಲ್ಲ್.
ಇನ್ನು ತಾಲೂಕು ರೇಷ್ಮೆಗೆ ಪ್ರಸಿದ್ಧವಾದರೂ ಇಲ್ಲಿ ರೇಷ್ಮೆ ಕಾಲೇಜಿಲ್ಲ, ಬೆಳೆಗಾರರಿಗೆ ಹಾಗೂ ನೂಲು ಬಿಚ್ಚಾಣಿಕೆದಾರರಿಗೆ ತರಬೇತಿ ಕೇಂದ್ರವಿಲ್ಲ, ಸಮರ್ಪಕವಾದ ಆಟದ ಮೈದಾನ ಮತ್ತು ಉದ್ಯಾನವನವಿಲ್ಲ... ಹೀಗೆ ಬೇಕುಗಳ ಪಟ್ಟಿಯಿದೆ.












Click it and Unblock the Notifications