ಚಿಂತಾಮಣಿ: ಆಂಧ್ರ ಶೈಲಿ ರಾಜಕಾರಣ, ಪಕ್ಷಗಳು ಇಲ್ಲಿ ಗೌಣ
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾದರೂ ಚಿಂತಾಮಣಿ ಪ್ರಮುಖ ವಾಣಿಜ್ಯ ನಗರಿ. ಇದು ಹಿರಿ ಮಗನಿಗಿಂತ ಕಿರಿ ಮಗ ಎತ್ತರ-ಗಾತ್ರ ಬೆಳೆದರೆ ಹೇಗೋ ಹಾಗೆ. ಚಿಂತಾಮಣಿಯು ಜಿಲ್ಲಾ ಕೇಂದ್ರವನ್ನೂ ಮೀರಿ ಬೆಳೆದಿದೆ. ನೆನಪಿರಲಿ, ಇದು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು, ಕೋಲಾರ ಜೊತೆಗೆ ಹೆಚ್ಚು ನಂಟು ಹೊಂದಿದೆ. ಕೈವಾರ ನಾರೇಯಣ ತಾತಯ್ಯ ದೇಗುಲ, ಮುರುಗಮಲ್ಲಾ ದರ್ಗಾ ಪ್ರಮುಖ ಧಾರ್ಮಿಕ ಹಾಗೂ ಜಾತ್ಯತೀತ ಕ್ಷೇತ್ರ.
ಚಿಂತಾಮಣಿಯ ಮಾವು ಬಲೇ ರುಚಿಕಟ್ಟು. ಶ್ರೀನಿವಾಸಪುರ ಮಾವಿಗೂ ಇಲ್ಲಿನ ಮಾವಿಗೂ ಪೈಪೋಟಿ. ಒಕ್ಕಲಿಗರ ಪ್ರಾಬಲ್ಯವಿದ್ದು, ಕುಟುಂಬ ರಾಜಕಾರಣ ಮೇಲುಗೈ ಪಡೆದಿದೆ. ಕಾಂಗ್ರೆಸ್ ನಿಂದ ಡಾ.ಎಂ.ಸಿ.ಸುಧಾಕರ್ ಎರಡು ಬಾರಿ ಶಾಸಕರಾದರೆ, ಈಗ ಜೆಡಿಎಸ್ ನಿಂದ ಜೆ.ಕೆ.ಕೃಷ್ಣಾರೆಡ್ಡಿ ಶಾಸಕರಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಲ್ಲಿ ಹಿಂಸಾಚಾರ ಪ್ರಮಾಣ ಹೆಚ್ಚು ಅಂತ ಬಿಂಬಿಸಲಾಗಿದೆ. ಆ ಮಾತಿಗೆ ತಕ್ಕ ಹಾಗೆ ಕಂಬಾಲಪಲ್ಲಿ ದಲಿತರ ಮಾರಣಹೋಮ ಮತ್ತು ಯರ್ರಕೋಟೆಯಲ್ಲಿ ಕಳ್ಳರೆಂದು ಭಾವಿಸಿ ಗ್ರಾಮಸ್ಥರಿಂದ 10 ಜನರ ಹತ್ಯೆ ಮುಂತಾದ ವಿಚಾರಗಳಿಗೆ ಸುದ್ದಿಯೂ ಆಗಿದೆ. ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಸತತ ಏಳು ಬಾರಿ ಗೆಲುವು ಸಾಧಿಸಿದ್ದು, ಈ ವಿಧಾನಸಭಾ ಕ್ಷೇತ್ರದ ಮೇಲೆ ತಮ್ಮ ಹಿಡಿತ ಹೊಂದಿದ್ದಾರೆ.

ಇಲ್ಲಿನ ಕೆಲ ಬಡಾವಣೆಗಳು ಅಭಿವೃದ್ಧಿಯಿಂದ ಸುಧಾರಿಸಿದ್ದು, ಆದರೂ ಇನ್ನಷ್ಟು ಪ್ರಗತಿ ಆಗಬೇಕಿದೆ. ಅಂದಹಾಗೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಹೆಚ್ಚು ಒತ್ತು ಇರುವ ಕ್ಷೇತ್ರವಿದು. ಭಾರತ ರತ್ನ ಪ್ರೊ ಸಿಎನ್ ಆರ್ ರಾವ್ ಅವರ ತಾತನವರ ಮೂಲ ಇದೇ ಚಿಂತಾಮಣಿ.
ಇಲ್ಲಿನ ಹೋಬಳಿ ಕೇಂದ್ರಗಳು ಸುಧಾರಣೆ ಆಗಬೇಕು ಎಂಬುದು ತುಂಬ ಹಳೇ ಬೇಡಿಕೆ. ಜತೆಗೆ ಸಂಚಾರ ವ್ಯವಸ್ಥೆಯೂ ಇನ್ನೂ ಚೆನ್ನಾಗಿ ಆಗಬೇಕು ಎಂಬುದು ಸ್ಥಳೀಯವಾಗಿರುವ ಬೇಡಿಕೆ. ಇಲ್ಲಿನ ರಾಜಕಾರಣಕ್ಕೆ ಸಮಾಜ ಸೇವೆ ಎಂಬ ಹೊಸ ಬಾಗಿಲು ತೆರೆದಿದ್ದು ಕಳೆದ ಬಾರಿಯ ಚುನಾವಣೆಯಲ್ಲಿ. ಕೆ.ಎಚ್.ಮುನಿಯಪ್ಪ ಅವರೊಂದಿಗಿನ ಎಂ.ಸಿ.ಸುಧಾಕರ್ ವಿರಸ ಬಹಳ ದುಬಾರಿಯಾಯಿತು. ಇದರಿಂದ ನುಕ್ಸಾನು ಆಗಿದ್ದು ಕಾಂಗ್ರೆಸ್ಸಿಗೆ ಹಾಗೂ ಸುಧಾಕರ್ ಗೆ.
ಹಾಗೆ ನೋಡಿದರೆ ಇಲ್ಲಿ ಪಕ್ಷಗಳು ಗೌಣ. ವ್ಯಕ್ತಿನಿಷ್ಠ ರಾಜಕಾರಣ ಮುನ್ನೆಲೆಯಲ್ಲಿದೆ. ಸ್ವಲ್ಪ ಮಟ್ಟಿಗೆ ಆಂಧ್ರ ಶೈಲಿಯ ರಾಜಕಾರಣವನ್ನೂ ಇಲ್ಲಿ ಕಾಣಬಹುದು.












Click it and Unblock the Notifications