ಚಿಕ್ಕಬಳ್ಳಾಪುರ: ಜೆಡಿಎಸ್- 'ಕೈ' ಕದನ, ಗೆದ್ದವರಿಗೆ ಕೈ ತುಂಬ ಕೆಲಸ
ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ ದೊಡ್ಡ ಆಲದ ಮರದ ಕೆಳಗಿನ ಗಿಡದಂಥದ್ದು ಚಿಕ್ಕಬಳ್ಳಾಪುರ. ಹಲವರ ಪಾಲಿಗೆ ಈ ಊರಿನ ಕೆಲಸ ಬೇಕು, ಮನೆ, ಸೈಟು ಬೇಕು. ಆದರೆ ಬೆಂಗಳೂರಿನ ಕಡೆಗೆ ಮನಸ್ಸಿನ ಸೆಳೆತ. ಈ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆದವರಿಗೆ ಉದ್ಧಾರ ಮಾಡೋದಕ್ಕೆ ಸಾಕಷ್ಟು ಕೆಲಸಗಳಿವೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 20 ಕಿ.ಮೀ.ಗಳಷ್ಟು ಸಮೀಪ. ಆದ್ದರಿಂದ ರಿಯಲ್ ಎಸ್ಟೇಟ್ ಆಕಾಶದತ್ತ ನೋಡುತ್ತಿದೆ. ಇಡೀ ಜಿಲ್ಲೆಯ ಜನರ ಬಹು ಕಾಲದ ಬೇಡಿಕೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ. ಪ್ರವಾಸೋದ್ಯಮದಲ್ಲಿ ನಂದಿ ಬೆಟ್ಟ ಪ್ರವಾಸಿಗರ ಮೆಚ್ಚಿನ ತಾಣ, ಸ್ಕಂದಗಿರಿ ಪರ್ವತಾರೋಹಿಗಳ ಖುಷಿಯ ತಾಣ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸರ್ ಎಂ.ವಿಶ್ವೇಶ್ವರಯ್ಯ ಜನಿಸಿದ ಮುದ್ದೇನಹಳ್ಳಿ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ. ಪುಷ್ಪೋದ್ಯಮ, ರೇಷ್ಮೆ ಮತ್ತು ದ್ರಾಕ್ಷಿಗೆ ಹೆಚ್ಚು ಪ್ರಸಿದ್ಧವಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ, ಪೂರ್ಣಪ್ರಮಾಣದ ಅಭಿವೃದ್ಧಿ ಆಗಿಲ್ಲ. ಬೆಂಗಳೂರಿಗೆ ಸ್ಯಾಟಲೈಟ್ ಟೌನ್ ಆಗಿ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಒಕ್ಕಲಿಗರು, ಬಲಿಜಿಗರು, ಆರ್ಯವೈಶ್ಯರ ಜನಸಂಖ್ಯೆ ಹೆಚ್ಚು. ಅವರೇ ನಿರ್ಣಾಯಕ ಮತದಾರರು. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯಿದೆ. ಬಿಜೆಪಿಗೆ ಹೇಳಿಕೊಳ್ಳುವಂಥ ಆದ್ಯತೆ ಇಲ್ಲ. ನೂತನ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಘೋಷಣೆಯಾದ ನಂತರ ಜೆಡಿಎಸ್ ನಿಂದ ಕೆ.ಪಿ.ಬಚ್ಚೇಗೌಡ ಶಾಸಕರಾಗಿದ್ದರು. ಆ ನಂತರ ಕಾಂಗ್ರೆಸ್ ನ ಡಾ. ಕೆ.ಸುಧಾಕರ್ ಶಾಸಕರಾಗಿದ್ದಾರೆ.
ಈ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾದವರು ಪುನರಾಯ್ಕೆಯಾಗಿದ್ದು ತುಂಬಾನೇ ಕಡಿಮೆ. ಅಂದಹಾಗೆ ಚಿಕ್ಕಬಳ್ಳಾಪುರ ಅಂದರೆ ಸಂಸದ ವೀರಪ್ಪ ಮೊಯಿಲಿಗೆ ಪುನರ್ಜನ್ಮ ನೀಡಿದ ಕ್ಷೇತ್ರ. ಎರಡು ಬಾರಿ ಅವರು ಇಲ್ಲಿಂದಲೇ ಅಂದರೆ ಈ ಜಿಲ್ಲೆಯಿಂದಲೇ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ತೆಲುಗಿನ ಪ್ರಭಾವ ದಟ್ಟವಾಗಿದೆ. ಇಲ್ಲಿ ಚಿರಂಜೀವಿ, ಬಾಲಕೃಷ್ಣ, ಎನ್ ಟಿಆರ್ ಅಭಿಮಾನಿಗಳು ಆ ನಟರ ಜನ್ಮದಿನ ಆಚರಿಸುತ್ತಾರೆ. ಇಲ್ಲಿಗೆ ಚುನಾವಣೆ ಪ್ರಚಾರಕ್ಕಾಗಿ ಚಿರಂಜೀವಿ ಬಂದರೂ ಅಚ್ಚರಿ ಇಲ್ಲ. ಇನ್ನು ಫ್ಲೋರೋಸಿಸ್ ಎಂಬುದು ಇಲ್ಲಿನ ಜನರ ಪಾಲಿನ ಶಾಪ. ಚಿಕ್ಕಬಳ್ಳಾಪುರ ಜಿಲ್ಲೆ ಅಂತಾಗಿ ಹತ್ತು ವರ್ಷಗಳಷ್ಟೇ ಆಗಿದೆ. ಕೋಲಾರದಿಂದ ಬೇರ್ಪಟ್ಟ ಈ ಜಿಲ್ಲೆಯ ಕರುಳು ಬಳ್ಳಿ ಸಂಬಂಧ ಇನ್ನೂ ಕಡಿದಿಲ್ಲ.
ರೇಷ್ಮೆ- ಹಾಲು ಇಲ್ಲಿನ ಜನರ ಆದಾಯ ಮೂಲದಲ್ಲಿ ಮುಖ್ಯ ಪಾಲು ಪಡೆದಿವೆ. ಬೆಂಗಳೂರಿನ ಯಲಹಂಕದಿಂದ ನಿಂತು ಕಲ್ಲು ಬೀಸಿದರೆ ಸೀದಾ ಚಿಕ್ಕಬಳ್ಳಾಪುರಕ್ಕೆ ಬೀಳುತ್ತದೆ ಎಂಬಷ್ಟು ಹತ್ತಿರ. ಈ ವಿಧಾನಸಭಾ ಕ್ಷೇತ್ರ ಹಲವು ಅಚ್ಚರಿಗಳನ್ನು ನೀಡುವ ಸಾಧ್ಯತೆಗಳಿವೆ.












Click it and Unblock the Notifications