ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಜಿಲ್ಲಾ ಚುನಾವಣಾ ವಿಶ್ಲೇಷಣೆ:ಕೈ Vs ಕಮಲ

|
Google Oneindia Kannada News

ಪೊಡವಿಗೊಡೆಯ ಕೃಷ್ಣನ ನಾಡಿನಲ್ಲೀಗ ಬಿಸಿಲ ಝಳ. ಚುನಾವಣೆಯಿಂದಾಗಿ ಆ ಬಿಸಿ ಇನ್ನಷ್ಟು ಹೆಚ್ಚೇ ಆಗಿದೆ. ಹಾಗೆ ನೋಡಿದರೆ, ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಹುತೇಕ ನೇರ ಸ್ಪರ್ದೆ. ಕಾಪು ಕ್ಷೇತ್ರದಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ. ಒಂದು ಕಾಲಕ್ಕೆ ಕರಾವಳಿಯ ಈ ಭಾಗ ಕಾಂಗ್ರೆಸ್ಸಿನ ಭದ್ರ ಕೋಟೆಯಾಗಿತ್ತು .

ಆ ಕೋಟೆಯನ್ನು ಬಿಜೆಪಿ ಕೆಡವಿ ದಶಕ ಸಂದಿದೆ. ಈಗ ಇಲ್ಲಿ ಮತ್ತೆ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳಲು ಕಾದಾಡುತ್ತಿವೆ. ಕಾರ್ಕಳ ಹೊರತುಪಡಿಸಿ, ಉಳಿದೆಡೆ ಇರುವ ಸ್ಥಾನವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಯದ್ದಾಗಿದೆ.

ಆದರೆ, ಭ್ರಷ್ಟಾಚಾರ ಮತ್ತು ಒಳಜಗಳದಿಂದಾಗಿ ಬಿಜೆಪಿಯ ವೇಗಕ್ಕೆ ಸ್ವಲ್ಪ ಹೊಡೆತ ಬಿದ್ದಿರುವುದು ಸತ್ಯ, ಅದಕ್ಕೆ ಕೊಡಬಹುದಾದ ತಾಜಾ ಉದಾಹರಣೆಯೆಂದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯಲ್ಲಿ ನೆಲಕಚ್ಚಿದ್ದು. ಬಿಜೆಪಿಯ ಈ ಗೊಂದಲದ ಲಾಭ ಪಡೆದುಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್ಸಿನದು.

ಸದ್ಯಕ್ಕೆ ಬಿಜೆಪಿಯ ಹಿಡಿತದಲ್ಲಿರುವ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ವಿರೋಧಿ ಅಲೆ ಇರುವುದಂತೂ ನಿಜ. ಆದರೆ ಅದು ಕಾಂಗ್ರೆಸ್ ಪಾಲಿಗೆ ವರವಾಗಬೇಕೆಂದೇನೂ ಇಲ್ಲ. ಒಟ್ಟಾರೆ ಅಚ್ಚರಿಯ ಫಲಿತಾಂಶ ನಿಶ್ಚಿತ.

ಚುನಾವಣೆಯ ಹೊಸ್ತಿಲಲ್ಲಿ ಉಡುಪಿ ಜಿಲ್ಲಾ ಚುನಾವಣಾ ಕಣದಲ್ಲಿ ಒಂದು ಸುತ್ತೋಣ ಬನ್ನಿ...

ಉಡುಪಿ

ಉಡುಪಿ

ಉಡುಪಿ ವಿಧಾನಸಭಾ ಕ್ಷೇತ್ರ ಈಗ ಜಿದ್ದಾಜಿದ್ದಿನ ಕಣ. ಇಲ್ಲಿನ ಹಾಲಿ ಶಾಸಕ ಬಿಜೆಪಿಯ ರಘುಪತಿ ಭಟ್. ಆದರೆ ಸಿಡಿ ಹಗರಣದಿಂದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಸ್ಪರ್ದಿಸುವ ಅವಕಾಶ ಸುಧಾಕರ ಶೆಟ್ಟಿಯವರಿಗೆ ಅಯಾಚಿತವಾಗಿ ದಕ್ಕಿದೆ. ಕಾಂಗ್ರೆಸ್ಸಿನಿಂದ ಪ್ರಮೋದ್ ಮಧ್ವರಾಜ್ ಕಣದಲ್ಲಿದ್ದಾರೆ.

ಇಲ್ಲಿ ಬಲ್ಲವ ಮತದಾರರು ಜನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬಂಟರದ್ದು 2ನೇ ಸ್ಥಾನ, ದಲಿತರು-ಅಲ್ಪ ಸಂಖ್ಯಾತರು 3ನೇ ಸ್ಥಾನದಲ್ಲಿದ್ದಾರೆ.2008ರ ಚುನಾವಣೆಯಲ್ಲಿ ಪ್ರಮೋದ್ ಮದ್ವರಾಜ್ ಸೋತದ್ದು ಅಲ್ಪ ಮತದ ಅಂತರದಿಂದ .ಹಾಗಾಗಿ ಈ ಬಾರಿ ಮತ್ತೆ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.ದಾನ ಧರ್ಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮದ್ವರಾಜ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಅದೇ ಟ್ರಂಪ್ ಕಾರ್ಡ್.

ಇನ್ನು ಬಿಜೆಪಿ ಅಭ್ಯರ್ಥಿ ಸುಧಾಕರ ಶೆಟ್ಟರಿಗೆ , ಶಾಸಕ ರಘುಪತಿ ಭಟ್ ಕಾಲಾವಧಿಯಲ್ಲಾದ ಅಭಿವೃದ್ದಿ ಕೆಲಸಗಳೇ ಅಸ್ತ್ರ. ಸದ್ಯದ ಟ್ರೆಂಡ್ ನೋಡಿದರೆ, ಬಿಜೆಪಿಯ ಹಗರಣಗಳು, ಭ್ರಷ್ಟಾಚಾರ, ಒಳಜಗಳ ಮತ್ತು ರಘುಪತಿ ಭಟ್ಟರ ವ್ಯಕ್ತಿಗತ ವಿಚಾರಗಳು ಬಿಜೆಪಿ ವಿರುದ್ಧ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಕಂಡುಬಂದಿದೆ. ಅಂದ ಹಾಗೆ ಉಡುಪಿ ಕ್ಷೇತ್ರದಲ್ಲಿ ಯಾರೂ ಸತತ ಮೂರು ಬಾರಿ ಗೆದ್ದಿಲ್ಲ ಎನ್ನುವ ಇತಿಹಾಸವಿದೆ ಎನ್ನುವುದು ನಮ್ಮ ಓದುಗರ ಗಮನಕ್ಕೆ.

ಕಾಪು

ಕಾಪು

ಕಾಂಗ್ರೆಸ್ ಮಾಡಿಕೊಂಡ ಕೊನೇ ಕ್ಷಣದ ಗೊಂದಲದಿಂದಾಗಿಯೇ ಕಾಪು ಕ್ಷೇತ್ರ ಕೂಡಾ ಕುತೂಹಲದ ಕಣವಾಗಿ ಮಾರ್ಪಟ್ಟಿದೆ. ಟಿಕೆಟ್ ನೀಡದ್ದಕ್ಕೆ ಮಾಜಿ ಸಚಿವ ಕಾಂಗ್ರೆಸ್ಸಿನ ವಸಂತ ಸಾಲ್ಯಾನ್ ಜೆಡಿಎಸ್ಸಿನಿಂದ ಕಣಕ್ಕಿಳಿದಿದ್ದರೆ, ಹಾಲಿ ಶಾಸಕ ಲಾಲಾಜಿ ಆರ್ ಮೆಂಡನ್ ಬಿಜೆಪಿಯ ಅಭ್ಯರ್ಥಿ.ಕೊನೆ ಕ್ಷಣದಲ್ಲಿ ಟಿಕೆಟ್ ಪಡೆದ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ.

ಅವರೀಗೀಗ ಗೆಲ್ಲಲೇಬೇಕಾದ ಅನಿವಾರ್ಯತೆ. ಕಾಂಗ್ರೆಸ್ ಒಡೆದ ಮನೆಯಾಗಿರುವುದರಿಂದ ಬಿಜೆಪಿಯ ಲಾಲಾಜಿ ಆರ್. ಮೆಂಡನ್‍ಗೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಈ ಕ್ಷೇತ್ರದಲ್ಲಿದೆ. ಬಿಜೆಪಿ ಬಗೆಗಿನ ಭ್ರಮನಿರಸನ, ಯುಪಿಸಿಎಲ್ ವಿರೋಧಿ ಹೋರಾಟದಲ್ಲಿ ಜನರ ಜೊತೆಗಿರದ ನಿಲುವು, ಮೆಂಡನ್ ಅವರ ಗೆಲುವಿನ ಹಾದಿಗೆ ತಡೆಯೊಡ್ಡಬಹುದು.

ಇನ್ನು ಗಾಢವಾಗಿ ತಳವೂರಲು ವಿಫಲವಾಗಿರುವ ಜೆಡಿಎಸ್ಸಿನಿಂದ ಸಾಲ್ಯಾನ್ ಕಣಕ್ಕಿಳಿದಿರುವುದು, ಅವರ ಗೆಲುವಿಗಿಂತ ಕಾಂಗ್ರೆಸ್ ಅಭ್ಯರ್ಥಿಯ ಸೋಲಿನಲ್ಲಿ ಮಹತ್ತರ ಪಾತ್ರ ವಹಿಸಬಹುದು. ನಿರ್ಣಾಯಕವಾಗಿರುವ ಬಂಟರ ಮತಗಳು ಯಾರನ್ನು ಬೆಂಬಲಿಸಲಿವೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಸದ್ಯಕ್ಕೆ ಬಿಲ್ಲವ ಸಮುದಾಯ ಸ್ವಜಾತಿ ಬಂಧುವಾದ ಸೊರಕೆಯವರ ಬೆಂಬಲಕ್ಕೆ ನಿಂತಂತಿದೆ.ಒಂದಂತೂ ಸ್ಪಷ್ಟ. ಯಾರೇ ಗೆದ್ದರೂ ಇಲ್ಲಿ ಭರ್ಜರಿ ಗೆಲುವಿನ ಸಾಧ್ಯತೆ ತೀರಾ ಕಡಿಮೆ.

ಕುಂದಾಪುರ

ಕುಂದಾಪುರ

ಒಂದುಕಾಲಕ್ಕೆ ಕುಂದಾಪುರ ಕ್ಷೇತ್ರ ಕಾಂಗ್ರೆಸ್ಸಿನ ಭದ್ರ ಕೋಟೆ. ಆ ಕೋಟೆಯನ್ನು ಒಡೆದವರು ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ. ಅದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರು ಇಲ್ಲಿ ಪಕ್ಷೇತರ ಅಭ್ಯರ್ಥಿ. ಈಗಾಗಲೇ ಅವರಿಗೆ ಕೆಜೆಪಿ, ಜೆಡಿಎಸ್ ಮತ್ತು ಬಿಎಸಾರ್ ಪಕ್ಷದ ಬೆಂಬಲ ವ್ಯಕ್ತವಾಗಿದೆ.

ಹಾಗಾಗಿ ಕುಂದಾಪುರ ಕ್ಷೇತ್ರದ ಫಲಿತಾಂಶ ಆಗಲೇ ನಿರ್ಧಾರವಾಗಿದೆ ಎಂಬುದು ಬಹುತೇಕರ ಅಂಬೋಣ. ಅದಕ್ಕೆ ಕಾರಣವೂ ಇದೆ. ಸಚಿವ ಸ್ಥಾನ ನೀಡುವುದಾಗಿ ಹೇಳಿ, ಬಿಜೆಪಿ ನಾಯಕರಿಂದ ವಂಚಿಸಲ್ಪಟ್ಟ ಹಾಲಾಡಿಯವರ ಪರವಾಗಿ ಸಿಂಪತಿ ಅಲೆ ಕೂಡಾ ಇದೆ. ಇನ್ನು , ಇಲ್ಲಿ ಕಾಂಗ್ರೆಸ್‍ನಿಂದ ಮಲ್ಯಾಡಿ ಶಿವರಾಮ ಶೆಟ್ಟಿ ಕಣದಲ್ಲಿದ್ದರೆ, ಬಿಜೆಪಿಯಿಂದ ಕಿಶೋರ್ ಕುಮಾರ್ ಕಣದಲ್ಲಿದ್ದಾರೆ. ಹಾಗೆ ನೋಡಿದರೆ, ಇಲ್ಲಿ ತ್ರಿಕೋನ ಸ್ಪರ್ದೆ ಇದೆ.

ಹಾಲಾಡಿ ಸ್ಪರ್ದೆಯಿಂದಾಗಿ ಬಿಜೆಪಿ ಮತಗಳು ಚದುರಿ ಹೋಗುವುದು ನಿಶ್ಚಿತ. ಇದರ ಲಾಭ ಕಾಂಗ್ರೆಸ್‍ಗೆ ಆದರೂ ಆದೀತು. ಒಟ್ಟಾರೆ,ಬಿಜೆಪಿಗೆ ಸ್ಥಾನ ಉಳಿಸಿಕೊಳ್ಳುವುದು ಸವಾಲಾದರೆ, ಕಾಂಗ್ರೆಸ್ಸಿಗೆ ಸತತ ಸೋಲಿನ ಕಳಂಕ ತೊಳೆದುಕೊಳ್ಳಬೇಕಾದ ಅನಿವಾರ್ಯತೆ. ಹಾಗಾಗಿ ಕುಂದಾಪುರ ಕ್ಷೇತ್ರದಲ್ಲೂ ಕದನ ಕುತೂಹಲ ಏರ್ಪಟ್ಟಿದೆ. ಇಲ್ಲಿ ಹಾಲಾಡಿಯವರ ನೆಗೆಟಿವ್ ಅಂಶ ಅಂದರೆ, ಅವರ ಚಿಹ್ನೆ .ಈ ಹಿಂದೆ ಕಮಲದ ಬ್ರ್ಯಾಂಡ್ ಮೂಲಕ ಮತ ಪಡೆದಿದ್ದರೆ, ಈ ಬಾರಿ ಅಟೋ ರಿಕ್ಷಾ ಹಿಡಿಯಬೇಕಾದ ಅನಿವಾರ್ಯತೆ.

ಇನ್ನು ಹಾಲಾಡಿಯವರ ಪರ ಎಷ್ಟೇ ಸಿಂಪತಿ ಇದ್ದರೂ, ಬಿಜೆಪಿಯ ಸಾಂಪ್ರದಾಯಿಕ ಮತಗಳು ಅವರಿಗೇ ಬೀಳಬಹುದಾ ಅನ್ನುವುದು ಇನ್ನೂ ನಿಗೂಢ.ಇಲ್ಲಿರುವ ಬಿಲ್ಲವ ,ಮೊಗವೀರ ಮತಗಳನ್ನು ಸೆಳೆಯಲು ಸಾಧ್ಯ್ಯವಾದರೆ, ಗೆಲುವು ಸುಲಭ ಎನ್ನುವುದು ಬಿಜೆಪಿಯ ಲೆಖ್ಕಾಚಾರ.ಒಟ್ಟಾರೆ ಇಲ್ಲಿ ಮತದಾರರ ಪಲ್ಸ್ ಯಾರಿಗಾಗಿ ಮಿಡಿಯುತ್ತದೆ ಎನ್ನುವುದು ಚಿದಂಬರ ರಹಸ್ಯ.

ಕಾರ್ಕಳ

ಕಾರ್ಕಳ

ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ಮತ್ತು ಬಿಜೆಪಿಯ ಸುನಿಲ್ ಕುಮಾರ್ ನಡುವೆ ನೇರ ಸ್ಪರ್ದೆ. ಕೇವಲ ಸ್ಪರ್ದೆ ಅಲ್ಲ; ಮಾಡು ಇಲ್ಲವೇ ಮಡಿ ಎಂಬಂಥ ವಾತಾವರಣ. ಒಂದು ರೀತಿಯಲ್ಲಿ ಇದು ಜಾಗೃತ ಮತ್ತು ಪ್ರಜ್ಞಾವಂತ ಮತದಾರರಿರುವ ಕ್ಷೇತ್ರ.

ಅದಕ್ಕೆ ಅತ್ಯುತ್ತಮ ಉದಾಹರಣರಣೆಯೆಂದರೆ, ವೀರಪ್ಪ ಮೊಯಿಲಿ ಮತ್ತು ಗೋಪಾಲ ಭಂಡಾರಿಯವರಂಥಹ ಸಣ್ಣ ಸಮುದಾಯದ ಪ್ರತಿನಿಧಿಗಳನ್ನು ವಿಧಾನ ಸಭೆಗೆ ಕಳುಹಿಸಿದ್ದು. ಹಾಗೆ ನೋಡಿದರೆ, ಕಾರ್ಕಳದ ರಾಜಕೀಯದಲ್ಲಿ ಜಾತಿ, ಧರ್ಮಗಳ ಪ್ರಭಾವ ನುಸುಳಿದ್ದೇ 2004ರ ಚುನಾವಣೆಯ ನಂತರ. ಅದು ಈ ಬಾರಿಯೂ ಮುಂದುವರಿದಂತಿದೆ. ಇಲ್ಲಿ ಬಿಲ್ಲವ ಸಮುದಾಯ ಬಹುಸಂಖ್ಯಾತರು.

ನಂತರದ ಸ್ಥಾನ ಬಂಟರದ್ದು. ಉಳಿದಂತೆ, ಅಲ್ಪಸಂಖ್ಯಾತರು,ಹಿಂದುಳಿದ ವರ್ಗ ಮತ್ತು ಕೊಂಕಣಿ ಸಮುದಾಯವಿರುವ ಸಮ್ಮಿಶ್ರ ಸಮಾಜ. ಹಾಲಿ ಶಾಸಕ ಕಾಂಗ್ರೆಸ್‍ನ ಗೋಪಾಲ ಭಂಡಾರಿಯವರಿಗೆ ಸಜ್ಜನ, ಹೋರಾಟಗಾರ, ಉತ್ತಮ ಕೆಲಸಗಾರ ಮತ್ತು ಪ್ರತಿಕಾರ ರಾಜಕಾರಣದಿಂದ ದೂರವಿರುವ ರಾಜಕಾರಣಿ ಎಂಬ ಹೆಸರಿದೆ. , ಸುನಿಲ್ ಕುಮಾರ್ ಒಳ್ಳೇ ಮಾತುಗಾರ , ಸಂಘಟಕ.

ಇಲ್ಲಿ ಜಿಎಸ್‍ಬಿ ಸಮುದಾಯ ಬಹುತೇಕ ಬಿಜೆಪಿಯನ್ನು ಬೆಂಬಲಿಸಿಕೊಂಡೇ ಬಂದಿದೆ. ಹಾಗೆಂದು ಇಲ್ಲಿನ ಮತದಾರರಿಗೆ ಗೋಪಾಲ ಭಂಡಾರಿಯವರನ್ನು ತಿರಸ್ಕರಿಸಲು ಯಾವುದೇ ಬಲವಾದ ಕಾರಣಗಳಿದ್ದಂತಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಗೋಪಾಲ ಭಂಡಾರಿ ಮತ್ತು ಸುನಿಲ್ ಕುಮಾರ್ ನಡುವೆ ಶೀತಲ ಸಮರ ಕಾರ್ಕಳದ ಮೇಲೆ ಪರಿಣಾಮವಾಗಿರುವುದಂತೂ ನಿಜ. ಕಾರ್ಕಳದ ಸದ್ಯದ ಟ್ರೆಂಡ್ - ನೆಕ್ ಟು ನೆಕ್.

ಬೈಂದೂರು

ಬೈಂದೂರು

ಹಿಂದುಳಿದ ,ಬಹುತೇಕ ಗ್ರಾಮೀಣ ಪ್ರದೇಶವೇ ಇರುವ ಬೈಂದೂರು ಕೂಡಾ ಕುತೂಹಲ ಕೆರಳಿಸಿರುವ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಕದನ. ಕಾಂಗ್ರೆಸ್‍ನ ಗೋಪಾಲ ಪೂಜಾರಿ ಇಲ್ಲಿ ಚಿರಪರಿಚಿತ ವ್ಯಕ್ತಿ. ಎರಡು ಬಾರಿ ಶಾಸಕರಾಗಿದ್ದವರು. ಬಿಜೆಪಿಯ ಸುಕುಮಾರ ಶೆಟ್ಟಿ ಹೊಸ ಮುಖ, ರಾಜಕೀಯಕ್ಕೆ ಮೊದಲ ರಂಗಪ್ರವೇಶ.

ಕೊಲ್ಲೂರು ದೇವಳದ ಧರ್ಮದರ್ಶಿಯಾಗಿದ್ದರಿಂದಾಗಿ ಕ್ಷೇತ್ರದ ಜನತೆಗೆ ಪರಿಚಯ. ಇನ್ನು ಹಾಲಿ ಶಾಸಕ ಲಕ್ಷ್ಮಿನಾರಾಯಣರು ಕೆಜೆಪಿ ಜೊತೆ ಗುರುತಿಸಿಕೊಂಡಿದ್ದರಿಂದ ಸ್ಪರ್ದಿಸುವ ಅವಕಾಶ ಕಳೆದುಕೊಂಡರು. ಆ ಅವಕಾಶ ಸುಕುಮಾರ ಶೆಟ್ಟಿಗೆ ಸಿಕ್ಕಿದೆ. ಟಿಕೆಟ್ ವಿಚಾರದಲ್ಲಿ ಬೈಂದೂರು ಬಿಜೆಪಿ ಒಡೆದೆ ಮನೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸುಲಭದ ಮಾತಲ್ಲ. ಬಂಟರು, ಬಿಲ್ಲವರು ಮತ್ತು ಸೇರಿಗಾರರಿರುವ ಬೈಂದೂರು ಕ್ಷೇತ್ರದಲ್ಲಿ, ಬಂಟ ಮತಗಳು ನಿರ್ಣಾಯಕ.

ಹಾಗೆಂದು ತಮ್ಮವನು ಎಂಬ ಕಾರಣಕ್ಕೆ ಇಡೀ ಬಂಟ ಸಮುದಾಯ ಸುಕುಮಾರ ಶೆಟ್ಟರನ್ನು ಬೆಂಬಲಿಸುತ್ತಾರೆ ಎಂಬ ವಾತಾವರಣವಿಲ್ಲ. ಬಿಲ್ಲವರು ಮತ್ತು ಸೇರಿಗಾರರು ಒಟ್ಟಾಗಿ ಯಾರನ್ನಾದರೂ ಬೆಂಬಲಿಸಿದರೆ, ಅವರ ಗೆಲುವು ಸಾಧ್ಯ.ಒಟ್ಟಾರೆ ಸದ್ಯಕ್ಕೆ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಬೀಸಿದಂತಿದೆ.

English summary
Udupi district assembly election analysis. Neck to neck fight between Congress and BJP in three constituencies and triangular fight in two seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X