ಬಸವನಗುಡಿ ಕ್ಷೇತ್ರದಲ್ಲಿ ಬದಲಾವಣೆಯ 'ವಿಷಲ್'

ಹದಿನೈದು - 16 ವರ್ಷ ಯುಎಸ್ಎನಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಉದ್ಯೋಗ ಮಾಡಿದ್ರು. ಹನುಮಂತನಗರಕ್ಕೆ ವಾಪಸ್ಸು ಬಂದು ಈಗ ಮೂರು ವರ್ಷ ಆಯ್ತು. ಅವರಿಗೆ ಅಮೆರಿಕಾ ಸಾಕು ಎನಿಸಿರಲಿಲ್ಲ, ಬೆಂಗಳೂರು ಬೇಕಾಗಿತ್ತು.
ಕುಲಗೆಟ್ಟಿರುವ ಸಾರ್ವಜನಿಕ ಬದುಕಿನ ಬಗ್ಗೆ ನಮ್ಮ ಜನ ಸದಾ ತೂಕಡಿಸುವುದು, ಹಾಗೇನೇ ನಿದ್ದೆಗೆ ಜಾರುವುದನ್ನು ಅವರು ಗಮನಿಸಿದ್ದರು. ನಾವೆಲ್ಲ ನಿದ್ದೆ ಮಾಡುವಾಗ ರಾಜಕಾರಣಿಗಳು ಮತ್ತು ಸರಕಾರಿ ನೌಕರರು ಎಚ್ಚರವಾಗಿರುತ್ತಿದ್ದದ್ದನ್ನು ಅವರು ಎಚ್ಚರಿಕೆಯಿಂದ ಗಮನಿಸಿದ್ರು.
ಹಾಗಂತ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರದ ಬಗ್ಗೆ ಅವರಿಗೆ ಬೇಸರವೂ ಇಲ್ಲ, ಕೋಪವೂ ಇಲ್ಲ. ಕೊಳಕನ್ನು ತಿದ್ದುವ ಶ್ರದ್ಧೆ ಮತ್ತು ಶ್ರಮದಲ್ಲಿ ಮಾತ್ರ ನಂಬಿಕೆ. ಮೊದಲಿಗೆ ಅಣ್ಣಾ ಹಜಾರೆ ಆರಂಭಿಸಿದ ಆಂದೋಲನ, ಕ್ಲೀನ್ ಪಾಲಿಟಿಕ್ಸ್, ದೆಹಲಿಯ ಸಾಮೂಹಿಕ ಅತ್ಯಾಚಾರದ ವಿರುದ್ಧದ ಬಂಡಾಯಕ್ಕೆ ದನಿ ಗೂಡಿಸಿದರು.
ದೂರನಿಂತು ನೋಡುವುದಕ್ಕಿಂತ ಸಮೀಪಕ್ಕೆ ಹೋಗಬೇಕೆಂಬ ಛಲ ಮೂಡಿದ್ದೇ ತಡ ಅವರು ಒಂದು ರಾಜಕೀಯ ಪಕ್ಷ ಸೇರಲು ತೀರ್ಮಾನಿಸಿದರು. ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಎಲೆಕ್ಷನ್ನಿಗೆ ನಿಂತರು. ಒಂದು ವಿಷಲ್ ಹಾಕಿದ್ದೇ ತಡ, ಸಮಾನಮನಸ್ಕ ಕಾರ್ಯಕರ್ತರ ಪುಟಾಣಿ ಪಡೆ ಸೃಷ್ಟಿಯಾಯಿತು.
ಕ್ಷೇತ್ರದ ಹನುಮಂತನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ, ಬ್ಯಾಂಕ್ ಕಾಲೋನಿ, ಶ್ರೀನಿವಾಸನಗರ, ಬಸವನಗುಡಿ, ಎನ್ಆರ್ ಕಾಲೋನಿ ಮತ್ತು ತ್ಯಾಗರಾಜನಗರದ ಮನೆಮನೆಗೆ ತೆರಳಿ ವೋಟು ಕೇಳಿದರು, ವೋಟಿನ ಜತೆ ಸ್ವಲ್ಪ ನೋಟೂ ಕೊಡಿ ಎಂದರು.
ನಮ್ಮ ಕೈಯಲ್ಲಿ ಮಾಡುವುದಕ್ಕೆ ಆಗದ್ದನ್ನು ಈಯಮ್ಮ ಮಾಡ್ತಾಳೆ ಎಂಬ ಭರವಸೆಯಿಂದ ದಾನಿಗಳು ಹತ್ತು ಇಪ್ಪತ್ತು ಮೂವತ್ತು ಸಾವಿರದಂತೆ ಹಣ ಕೊಟ್ಟರು. ಅಷ್ಟು ಹಣ ಇಟ್ಕೊಂಡು ಇವರು ಇವತ್ತಿನ ಚುನಾವಣೆ ಗಡಿಬಿಡಿಯಲ್ಲಿ ಮುಳುಗಿದ್ದಾರೆ.
ತಮ್ಮ ಎದುರಾಳಿ ಯಾರೇ ಆಗಲಿ. ನಾನು ನನ್ನ ಕೆಲಸ ನನ್ನ ಕನಸು ಎಂದು ಹೋರಾಟಕ್ಕೆ ಇಳಿದಿರುವ ಇವರ ವಿರುದ್ಧ ಜೆಡಿಎಸ್ಸು ಬಾಗೇಗೌಡರನ್ನಾದರೂ ನಿಲ್ಲಿಸಲಿ, ಶರವಣರನ್ನಾದರೂ ನಿಲ್ಲಿಸಲಿ. ಪ್ರೊ ಬಿಕೆ ಚಂದ್ರಶೇಖರ್ ಅಥವಾ ಕಳೆದ ಬಾರಿ ಸೋತ ಚಂದ್ರಶೇಖರ್ ಅವರಿಗಾದರೂ ಕಾಂಗ್ರೆಸ್ ಟಿಕೆಟ್ ಕೊಡಲಿ. ಹಾಲಿ ಬಿಜೆಪಿ ಶಾಸಕ ರವಿಸುಬ್ರಮಣ್ಯ ಅವರೇ ಮತ್ತೆ ನಿಲ್ಲಲಿ. ಚಿಂತೆಯಿಲ್ಲ.
ತಮ್ಮ ಕ್ಷೇತ್ರದ ಮತದಾರರ ಜಾತಿ ಲೆಕ್ಕಾಚಾರ ಹಾಕುವ ಗೋಜಿಗೆ ಇವರು ಹೋಗಿಲ್ಲ. ಬಸವನಗುಡಿ ಕ್ಷೇತ್ರದ ಎಲ್ಲಾ ಬಡಾವಣೆಗಳಲ್ಲೂ ವಿದ್ಯಾವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. Good Governance ಬೇಕಿದ್ದರೆ Good Candidate ಆರಿಸುತ್ತಾರೆ ಎನ್ನುವುದು ಇವರ ಅಚಲವಾದ ನಂಬಿಕೆ. ಇವರನ್ನು ನೀವು ಖುದ್ದಾಗಿ ಕಾಣಬೇಕೆಂದರೆ ಹನುಮಂತನಗರ ಮುಖ್ಯರಸ್ತೆ ಗಣೇಶ್ ಭವನದ ಸಮೀಪದಲ್ಲಿರುವ ಅವರ ಎಲೆಕ್ಷನ್ ಕಚೇರಿಗೆ ತೆರಳಬೇಕಾಗುತ್ತದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications