• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಟಿಎಂ ಲೇಔಟ್ : ರವಿರೆಡ್ಡಿ ಸಂದರ್ಶನ (ಭಾಗ 3)

By ಶಾಮ್
|

ಪ್ರ : ಇದನ್ನೆಲ್ಲ ಹೇಗೆ ಸಾಧಿಸುತ್ತೀರಿ?

ಉ : ಸರ್ಕಾರದ ಮಟ್ಟದಲ್ಲಿ ಈಗಾಗಲೆ ಅನೇಕ ಯೋಜನೆಗಳಿದ್ದು ಅವುಗಳೆಲ್ಲ ಬಹುತೇಕ ಭ್ರಷ್ಟಾಚಾರದಿಂದ ಮತ್ತು ಕೆಟ್ಟ ಮೇಲ್ವಿಚಾರಣೆಯಿಂದ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ನಾನು ಈ ಕ್ಷೇತ್ರದಲ್ಲಿ ಮೂಲಭೂತಸೌಲಭ್ಯಗಳಷ್ಟೇ ಅಲ್ಲದೆ, ಶಿಕ್ಷಣ, ಉದ್ಯೋಗ, ಮತ್ತು ಸುರಕ್ಷತೆಯ ಬಗ್ಗೆಯೂ ಗಮನ ನೀಡುತ್ತೇನೆ. ಬಿಬಿಎಂಪಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದು ನಮ್ಮ ನಗರಸಭಾ ಸದಸ್ಯರು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಅನಧಿಕೃತ ಅಧಿಕಾರಿಗಳಾಗಿಬಿಟ್ಟಿದ್ದಾರೆ. ಇದನ್ನೆಲ್ಲ ನಿಲ್ಲಿಸಬೇಕಿದೆ ಮತ್ತು ಆಡಳಿತ ಮತ್ತು ಕಾಮಗಾರಿ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕಿದೆ. ನಾಗರಿಕರನ್ನು ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹೆಚ್ಚುಹೆಚ್ಚು ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕಿದೆ. ಮುಂದಿನ ದಿನಗಳಲ್ಲಿ ನಗರಗಳಲ್ಲಿನ ಬಡತನ ಬಹುಮುಖ್ಯ ಸಮಸ್ಯೆಯಾಗಲಿದ್ದು ಅದನ್ನು ನಿವಾರಿಸಲು ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ. ಮಡಿವಾಳ ಕೆರೆಗೆ ಎಲ್ಲಾ ರೀತಿಯ ಕೊಳಚೆ ನೀರು ಬರುವುದನ್ನು ತಡೆಗಟ್ಟಿ ಕೆರೆಯ ಪರಿಸರವನ್ನು ಉತ್ತಮಗೊಳಿಸಬೇಕಿದೆ.

ಪ್ರ : ಈ ಚುನಾವಣಾ ಹೋರಾಟದಲ್ಲಿ ನಾಗರಿಕ ಸಮಾಜದ ಪಾತ್ರವೇನು?

ಉ : ಇತ್ತೀಚಿನ ದಿನಗಳ ನಮ್ಮ ಪ್ರಚಾರ ಕಾರ್ಯ ಬಿಟಿಎಮ್ ಕ್ಷೇತ್ರದ ಮೂಲೆಮೂಲೆಗೂ ತಲುಪಿದೆ. ನಾವು ಯಾಕಾಗಿ ಚುನಾವಣೆಗೆ ನಿಲ್ಲುತ್ತಿದ್ದೇವೆ ಮತ್ತು ಆ ಮೂಲಕ ಏನು ಹೇಳಲು ಪ್ರಯತ್ನಿಸುತ್ತಿದ್ದೇವೆ ಎನುವುದನ್ನು ಜನ ಗಮನಿಸಲು ಆರಂಭಿಸಿದ್ದಾರೆ. ಪ್ರತಿದಿನವೂ ಇಲ್ಲಿಯ ಮತದಾರರು ನಮ್ಮೊಡನೆ ಕೈಜೊಡಿಸಲು ಮುಂದೆ ಬರುತ್ತಿದ್ದಾರೆ. ಇದು ಬರಲಿರುವ ದಿನಗಳಲ್ಲಿ ಹೆಚ್ಚಾಗಲಿದೆಯೆ ಹೊರತು ಕಡಿಮೆಯಾಗುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ. ಇಲ್ಲಿಯ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ನಾನು ಪತ್ರ ಬರೆಯುತ್ತಿದ್ದೇನೆ ಮತ್ತು ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದೇನೆ. ಇತ್ತೀಚಿನ ದಿನಗಳ ಕೆಟ್ಟ ರಾಜಕೀಯದಿಂದ ಮತ್ತು ಅನರ್ಹ ಜನಪ್ರತಿನಿಧಿಗಳಿಂದ ರೋಸತ್ತಿರುವ ನಾಗರಿಕ ಸಮಾಜ ನಮ್ಮ ಜೊತೆಗಿದೆ ಎನ್ನುವ ವಿಶ್ವಾಸ ನನಗಿದೆ.

ರವಿ ಕೃಷ್ಣಾರೆಡ್ಡಿ ಕುರಿತು

ರವಿ ಕೃಷ್ಣಾರೆಡ್ಡಿ ವೃತ್ತಿಯಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಮತ್ತು ಪ್ರವೃತ್ತಿಯಲ್ಲಿ ಲೇಖಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ. ಬೆಂಗಳೂರಿನ ಬಳಿಯ ಬೊಮ್ಮಸಂದ್ರ ಮೂಲದವರಾದ ರವಿ, ಕಳೆದ ಹದಿನೈದು ವರ್ಷಗಳಿಂದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದು, ಅದರಲ್ಲಿ ಹತ್ತು ವರ್ಷ ಅಮೆರಿಕದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ಸಲುವಾಗಿ ಇವರು ಎರಡು ವರ್ಷದ ಹಿಂದೆ ಅಮೆರಿಕದಿಂದ ವಾಪಸಾಗಿದ್ದು ಈಗ ಬೆಂಗಳೂರಿನ ಬಿಟಿಎಮ್ ಲೇಔಟ್‌ನಲ್ಲಿ ವಾಸಿಸುತ್ತಿದ್ದಾರೆ.

ರವಿಯವರು ಕನ್ನಡದಲ್ಲಿ ಹಲವಾರು ವಿಷಯಗಳ ಮೇಲೆ ಬರೆದಿದ್ದು, ಇವು ಪತ್ರಿಕೆಗಳಲ್ಲಿ, ವಾರಪತ್ರಿಕೆಯಲ್ಲಿ, ಅಂತರ್ಜಾಲದಲ್ಲಿ ಪ್ರಕಟಗೊಂಡಿವೆ. ಇಲ್ಲಿಯತನಕ ಇವರ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಇವರ ಲೇಖನಗಳು 'ಜಿಜ್ಞಾಸೆ ಗಂಗೆಯ ದಡದ ಕಾಲದಲ್ಲಿ' ಪುಸ್ತಕ ರೂಪದಲ್ಲಿ ಹೊರಬಂದಿದೆ. 2006ರಲ್ಲಿ ಇವರು "ವಿಕ್ರಾಂತ ಕರ್ನಾಟಕ" ಎನ್ನುವ ಕನ್ನಡ ವಾರಪತ್ರಿಕೆಯನ್ನು ಆರಂಭಿಸಿದ್ದರು. ಪ್ರಸ್ತುತ ಅವರು www.vartamaana.com ಮತ್ತು www.vicharamantapa.net ಎಂಬ ಎರಡು ಅಂತರ್ಜಾಲ ಇ-ಮ್ಯಾಗಜೈನ್‌ಗಳ ಸಂಪಾದಕರಾಗಿದ್ದಾರೆ. ಕನ್ನಡದಲ್ಲಿ "ಭೂಮಿ ಹುಟ್ಟಿದ್ದು ಹೇಗೆ" ಎಂಬ ವಿಡಿಯೋ ಸಾಕ್ಷ್ಯಚಿತ್ರ ಸಹ ನಿರ್ಮಿಸಿದ್ದಾರೆ.

2011 ರಲ್ಲಿ ರವಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಸಚಿವ ಸೋಮಣ್ಣನವರ ವಿರುದ್ಧ ಅಕ್ರಮ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಈಗ ಆ ಮೊಕದ್ದಮೆ ವಿಚಾರಣೆ ಹಂತದಲ್ಲಿದೆ.

2008ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಮೆರಿಕದಲ್ಲಿನ ಕೆಲಸದಿಂದ ಒಂದು ತಿಂಗಳು ರಜೆ ತೆಗೆದುಕೊಂಡು ಬಂದಿದ್ದ ರವಿಯವರು, ಕರ್ನಾಟಕದಲ್ಲಿಯ ರಾಜಕೀಯ ರಂಗ ಮೌಲ್ಯಗಳನ್ನು ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ "ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ" ಮೂರು ದಿನಗಳ ಕಾಲ "ಮೌಲ್ಯಾಗ್ರಹ" ಎಂಬ ಉಪವಾಸ ಸತ್ಯಾಗ್ರಹ ಮಾಡಿದ್ದರು. ಆ ಸಂದರ್ಭದಲ್ಲಿ ಜನರಿಂದಲೇ ದೇಣಿಗೆ ಸಂಗ್ರಹಿಸಿ ಅವರು ಸಾಂಕೇತಿಕ ಪ್ರತಿಭಟನೆಯ ರೂಪದಲ್ಲಿ ನಗರದ ಜಯನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದರು. ಜನರಿಂದ ಸಂಗ್ರಹಿಸಿದ 4.22 ಲಕ್ಷ ರೂಪಾಯಿ ಮೊತ್ತದಲ್ಲಿ ಚುನಾವಣೆ ನಡೆಸಿದ್ದ ಅವರು ತಮ್ಮ ಎಲ್ಲಾ ದೇಣಿಗೆ ಮತ್ತು ಖರ್ಚುವೆಚ್ಚದ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದರು.

English summary
Ravi Krishna Reddy is contesting from Lok Satta party for BTM Layout constituency in assembly election to be held on May 5, 2013. In an interview with Oneindia Ravi Reddy talks about his plans to fight against corruption and improve the infrastructure if he wins. Excerpts from the interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X