ಕ್ಷೇತ್ರ ಪರಿಚಯ : ಸೊರಬದಲ್ಲಿ ಸಹೋದರರ ಮುಖಾಮುಖಿ!
ಶಿವಮೊಗ್ಗ ಜಿಲ್ಲೆಯಲ್ಲಿದ್ದರೂ ನೀರಿನ ಕೊರತೆ ಎದುರಿಸುವ ಕ್ಷೇತ್ರ ಸೊರಬ. ಶಾಶ್ವತ ನೀರಾವರಿ ಯೋಜನೆ ಬೇಕು ಎಂಬುದು ದಶಕಗಳ ಕೂಗು. ನೀರಿನ ಹೆಸರು ಹೇಳಿ ಅನೇಕರು ರಾಜಕೀಯ ಮಾಡಿದ್ದಾರೆ. ಆದರೆ, ನೀರು ಸಿಕ್ಕಿಲ್ಲ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ತವರು ಕ್ಷೇತ್ರ ಸೊರಬ. ಪ್ರತಿ ಬಾರಿಯ ಚುನಾವಣೆಯಲ್ಲಿ ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಅವರ ಸ್ಪರ್ಧೆಯಿಂದಾಗಿ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತದೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವರದಾ ನದಿಗೆ ಅಡ್ಡವಾಗಿ ಆನವಟ್ಟಿ ಬಳಿ ಜಲಾಶಯ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಬಂಗಾರಪ್ಪ ಅವರ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ನ ಮಧು ಬಂಗಾರಪ್ಪ. ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕೆಲವು ತಿಂಗಳ ಹಿಂದೆ ಅವರು, ಸೊರಬದಿಂದ ಶಿವಮೊಗ್ಗ ತನಕ ಪಾದಯಾತ್ರೆ ಮಾಡಿದ್ದರು.
2008ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ನಿರಾಕರಿಸಲು ಕಾರಣವೇ ಇಲ್ಲ.
ಕ್ಷೇತ್ರದ ರಾಜಕೀಯದಲ್ಲಿ ಕೆಲವು ಬದಲಾವಣೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ಹಾಲಪ್ಪ ಅಥವ ಕುಮಾರ್ ಬಂಗಾರಪ್ಪ ಅವರಲ್ಲಿ ಯಾರಿಗೆ ಟಿಕೆಟ್? ಎಂಬುದು ಕುತೂಹಲದ ಪ್ರಶ್ನೆ.
ಮಧು ಬಂಗಾರಪ್ಪ ಮತ್ತೊಮ್ಮೆ ಕಣಕ್ಕಿಳಿಯುವುದು ಖಚಿತ. ಆದರೆ, ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ಕೊಟ್ಟರೆ ಸಹೋದರರ ಸವಾಲು ಖಚಿತ. ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಸೇರಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಸದ್ಯದ ಪ್ರಶ್ನೆ.
2013ರ ಚುನಾವಣೆಯಲ್ಲಿ ಮಧು ಬಂಗಾರಪ್ಪ 58,541 ಮತಗಳನ್ನು ಪಡೆದಿದ್ದಾರೆ. ಕೆಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಹಾಲಪ್ಪ 37,316 ಮತ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪ 33,176 ಮತ್ತು ಬಿಜೆಪಿಯಿಂದ ಸ್ಪರ್ಧಿಸಿದ್ದ ಚಿಕ್ಕವಾಲಿ ನಾಗರಾಜ್ ಗೌಡ 5,226ಮತಗಳನ್ನು ಪಡೆದಿದ್ದರು.












Click it and Unblock the Notifications