ಕ್ಷೇತ್ರ ಪರಿಚಯ: ಪುತ್ತೂರಲ್ಲಿ ಮತ್ತೆ ಶಕುಂತಳಾ ಶೆಟ್ಟಿ ರಾಜ್ಯಭಾರ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎರಡನೇ ದೊಡ್ಡ ನಗರ ಪುತ್ತೂರು. ಇದು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವೂ ಹೌದು. ಜಿಲ್ಲಾ ಕೇಂದ್ರ ಮಂಗಳೂರಿನಿಂದ 52 ಕಿಲೋಮೀಟರ್ ದೂರದಲ್ಲಿದೆ.
ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣಭಟ್ಟ ಮೊದಲಾದವರನ್ನು ನೀಡಿದ ತಾಲೂಕು ಇದು. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಶಿವರಾಮ ಕಾರಂತರ ಕಾರ್ಯಕ್ಷೇತ್ರ ಬಾಲವನ ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
1978ರಲ್ಲೇ ಇಲ್ಲಿ ಜನತಾ ಪಕ್ಷದಿಂದ ಉರಿಮಜಲು ರಾಮಭಟ್ ಗೆಲುವು ಸಾಧಿಸಿದ್ದರು. ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಡಿ.ವಿ. ಸದಾನಂದ ಗೌಡರ ರಾಜಕೀಯ ಗುರು ರಾಮಭಟ್ 1983ರಲ್ಲಿ ಬಿಜೆಪಿಯಿಂದ ಇಲ್ಲಿ ಗೆದ್ದಿದ್ದರು. ಮುಂದೆ ರಾಮಭಟ್ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಬೇರುಗಳನ್ನು ಇಳಿಬಿಡಲು ಪ್ರಮುಖ ಕಾರಣವಾಗಿದ್ದರು.

ಸದ್ಯ ಕಾಪು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿನಯ್ ಕುಮಾರ್ ಸೊರಕೆ ಇಲ್ಲಿ 1985 ಮತ್ತು 1989ರಲ್ಲಿ ಗೆಲುವು ಸಾಧಿಸಿದ್ದರು. ನಂತರ ಮತ್ತೆ ಪುತ್ತೂರು ನಿಧಾನವಾಗಿ ಬಿಜೆಪಿಯತ್ತ ವಾಲಿತು. 1994ರಿಂದ 2008ರ ವರೆಗೆ ಇಲ್ಲಿ ಬಿಜೆಪಿಯದ್ದೇ ರಾಜ್ಯಭಾರ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮುಂದೆ ಮುಖ್ಯಮಂತ್ರಿಯಾಗಿ, ಸದ್ಯ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದ ಗೌಡರು 1994 ರಲ್ಲಿ ಸೊರಕೆಯನ್ನು ಸೋಲಿಸಿ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತಂದಿದ್ದರು. 1999ರಲ್ಲಿಯೂ ಡಿವಿಎಸ್ ಗೆದ್ದು ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಯಾದರು.
ನಂತರದ ದಿನಗಳಲ್ಲಿ ಡಿ.ವಿ. ಸದಾನಂದ ಗೌಡರು ಕ್ಷೇತ್ರ ತೊರೆದರೂ ಪುತ್ತೂರು ಬಿಜೆಪಿ ಹಿಡಿತದಲ್ಲೇ ಇತ್ತು. 2004ರಲ್ಲಿ ಬಿಜೆಪಿಯ ಶಕುಂತಳಾ ಶೆಟ್ಟಿ ಗೆಲುವು ಸಾಧಿಸಿದರು. 2008ರಲ್ಲಿ ಶೆಟ್ಟಿಗೆ ಟಿಕೆಟ್ ಕೈತಪ್ಪಿತು. ಅವರ ಜಾಗದಲ್ಲಿ ಮಲ್ಲಿಕಾ ಪ್ರಸಾದ್ ಭಂಡಾರಿ 2008ರಲ್ಲಿ ಗೆಲುವು ಸಾಧಿಸಿದರು.
2013ರಲ್ಲಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡೆದ್ದ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಗೆ ಬಂದು 2013ರಲ್ಲಿ ಅಖಾಡಕ್ಕಿಳಿದರು.
ಸುಮಾರು 20 ವರ್ಷಗಳಿಂದ ಬಿಜೆಪಿ ಭದ್ರ ಕೋಟೆಯಾಗಿ ಹೊರ ಹೊಮ್ಮಿದ್ದ ಪುತ್ತೂರಿನಲ್ಲಿ ಅದೇ ಪಕ್ಷದಿಂದ ಬಂದು ಬಿಜೆಪಿ ರಾಜ್ಯಭಾರಕ್ಕೆ ಕೊನೆ ಹಾಡಿದರು ಶಕುಂತಳಾ ಶೆಟ್ಟಿ. ಈ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ 66,345 ಮತಗಳನ್ನು ಪಡೆದರೆ, ಬಿಜೆಪಿಯ ಸಂಜೀವ ಮಠಂದೂರು 62,056 ಮತಗಳನ್ನು ಪಡೆದು 4,289 ಮತಗಳ ಅಂತರದಿಂದ ಸೋಲೊಪ್ಪಿಕೊಂಡರು. ಈ ಮೂಲಕ ಬಿಜೆಪಿ ವಿರುದ್ಧ ಟಿಕೆಟ್ ಕೈತಪ್ಪಿದ ಸೇಡು ತೀರಿಸಿಕೊಂಡರು ಶಕುಂತಳಾ ಶೆಟ್ಟಿ.
ಸದ್ಯ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಸಾಕಷ್ಟು ಹಿಡಿತ ಹೊಂದಿದ್ದು ಈ ಬಾರಿಯೂ ಗೆಲುವು ಸಾಧಿಸಿದರೆ ಅದೇನು ಅಚ್ಚರಿಯಲ್ಲ.












Click it and Unblock the Notifications