ಕ್ಷೇತ್ರ ಪರಿಚಯ: ಕೊಳ್ಳೇಗಾಲದಲ್ಲಿ ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್ ತ್ರಿಕೋನ ಸ್ಪರ್ಧೆ

Subscribe to Oneindia Kannada

ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕು. ಅದಕ್ಕಿಂತ ಹೆಚ್ಚಾಗಿ ಒಂದು ಕಾಲದ ಕರ್ನಾಟಕದ ಅತೀ ದೊಡ್ಡ ತಾಲೂಕು. ಸದ್ಯ ಇದನ್ನು ವಿಭಜನೆ ಮಾಡಿ ಹನೂರು ಎಂಬ ಮತ್ತೊಂದು ತಾಲೂಕನ್ನು ವಿಸ್ತರಿಸಲಾಗಿದೆ.

ಕೊಳ್ಳೇಗಾಲ ತಾಲೂಕಿನಲ್ಲಿ ಸಾಕಷ್ಟು ತಮಿಳರ ಜನಸಂಖ್ಯೆಯಿದ್ದು, ಈ ತಾಲೂಕು ಹಿಂದೆ ತಮಿಳುನಾಡಿನ ಸೇಲಂ ಜಿಲ್ಲೆಯ ಭಾಗವಾಗಿತ್ತು.

ಕ್ಷೇತ್ರ ಪರಿಚಯ: ಹನೂರಲ್ಲಿ ಬಿಜೆಪಿಯ ಪರಿಮಳಾ ನಾಗಪ್ಪ ಗೆಲ್ಲುತ್ತಾರಾ?

ಕರ್ನಾಟಕದ ಮಟ್ಟಿಗೆ ಕೊಳ್ಳೇಗಾಲ ಹಲವು ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ರೇಷ್ಮೇ ಉದ್ಯಮ ಪ್ರಖ್ಯಾತವಾಗಿದ್ದು, ರಾಜ್ಯದ ವಿವಿಧ ಭಾಗಗಳ ಜನರು ಈ ಕಾರಣಕ್ಕೇ ಕೊಳ್ಳೇಗಾಲಕ್ಕೆ ಭೇಟಿ ನೀಡುತ್ತಾರೆ. ಕೈಮಗ್ಗದಿಂದ ಇಲ್ಲಿ ರೇಷ್ಮೆ ಸೀರೆಗಳನ್ನು ತಯಾರಿಸುತ್ತಾರೆ. ಇದಕ್ಕೆ ರಾಜ್ಯಾದ್ಯಂತ ಬೇಡಿಕೆ ಇದೆ. ಹೀಗಾಗಿ ಕೊಳ್ಳೇಗಾಲಕ್ಕೆ ರೇಷ್ಮೇ ನಗರಿ ಎಂಬ ಹೆಸರೂ ಇದೆ.

Karnataka Assembly Election 2018: Kollegal Constituency Profile

ಮಲೈ ಮಹದೇಶ್ವರ ಬೆಟ್ಟ ಹಾಗೂ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳು, ಹೊಗೇನಕಲ್ ಜಲಪಾತ, ಗಗನಚುಕ್ಕಿ, ಭರಚುಕ್ಕಿ ಜಲಪಾತಗಳೂ ಕೊಳ್ಳೇಗಾಲ ಸುತ್ತಮುತ್ತವೇ ಬರುತ್ತವೆ. ದಂತಚೋರ ವೀರಪ್ಪನ್ ಇದೇ ಪ್ರದೇಶದ ಸುತ್ತ ಮುತ್ತ ವಾಸವಾಗಿದ್ದ. ವರನಟ ರಾಜಕುಮಾರ್ ಕೂಡಾ ಇದೇ ತಾಲೂಕಿಗೆ ಸೇರಿದವರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಇಲ್ಲಿನ ರಾಜಕೀಯ ಇತಿಹಾಸ ನೋಡಿದರೆ ಇಲ್ಲಿ ಯಾವೊಂದು ಪಕ್ಷವೂ ನಿರಂತರ ಪ್ರಾಬಲ್ಯ ಮೆರೆದಿಲ್ಲ ಎಂಬುದನ್ನು ಪ್ರಮುಖವಾಗಿ ಗಮನಿಸಬಹುದು.

1985ರಲ್ಲಿ ಜನತಾ ಪಕ್ಷದ ಬಿ. ಬಸವಯ್ಯ, 1989ರಲ್ಲಿ ಕಾಂಗ್ರೆಸ್ ನ ಎಂ. ಸಿದ್ದಮಾದಯ್ಯ, 1994ರಲ್ಲಿ ಆಗಿನ ಜನತಾ ದಳದಿಂದ ಎಸ್. ಜಯಣ್ಣ, 1999ರಲ್ಲಿ ಕಾಂಗ್ರೆಸ್ ನ ಜಿ.ಎನ್. ನಂಜುಂಡಸ್ವಾಮಿ, 2004ರಲ್ಲಿ ಸ್ವತಂತ್ರವಾಗಿ ನಿಂತಿದ್ದ ಮಾಜಿ ಬಿಜೆಪಿಗ ಎಸ್. ಬಾಲರಾಜ್, 2008ರಲ್ಲಿ ಕಾಂಗ್ರೆಸ್ ನ ಆರ್. ಧ್ರುವನಾರಾಯಣ್ ಇಲ್ಲಿ ಗೆಲುವು ಸಾಧಿಸಿದ್ದಾರೆ.

ಕ್ಷೇತ್ರ ಪರಿಚಯ: ಗುಂಡ್ಲುಪೇಟೆಯಲ್ಲಿ ಮಹದೇವ ಪ್ರಸಾದ್ ಕುಟುಂಬವೇ ಕಿಂಗ್

2008ರಲ್ಲಿ ಧ್ರುವನಾರಾಯಣ್ ಚಾಮರಾಜನಗರ ಕ್ಷೇತ್ರದಿಂದ ಲೋಕಸಭೆಗೆ ಕಣಕ್ಕಿಳಿದು ಗೆದ್ದಿದ್ದರಿಂದ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ಆಗ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಖಾತೆ ತೆರೆಯಿತು.

ಬಿಜೆಪಿಯ ಜಿ.ಎನ್.ಎನ್. ಸ್ವಾಮಿ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ವಲಸೆ ಬಂದಿದ್ದ ಎಸ್. ಜಯಣ್ಣರನ್ನು ಸುಮಾರು 8 ಸಾವಿರ ಮತಗಳಿಂದ ಸೋಲಿಸಿದ್ದರು.

2013ರಲ್ಲಿ ಮಾತ್ರ ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಎಸ್. ಜಯಣ್ಣ ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕಿಳಿದು ಗೆಲುವು ಸಾಧಿಸಿ ಕೈ ಪಕ್ಷದ ಮಾನ ಉಳಿಸಿದ್ದರು. ಈ ಚುನಾವಣೆಯಲ್ಲಿ ಅವರು ಬಿಎಸ್ಪಿಯ ಎನ್. ಮಹೇಶ್ ರನ್ನು 10 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದು ಕುತೂಹಲಕಾರಿಯಾಗಿದೆ.

ಕ್ಷೇತ್ರದಲ್ಲಿ ಬಿಎಸ್ಪಿ ಪ್ರಬಲವಾಗಿದ್ದು ಈ ಬಾರಿಯ ಚುನಾವಣೆಯಲ್ಲೂ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಜೆಡಿಎಸ್ ಗೂ ನೆಲೆ ಇದ್ದು ಈ ಬಾರಿ ಕ್ಷೇತ್ರವನ್ನು ಬಿಎಸ್ಪಿಗೆ ಬಿಟ್ಟುಕೊಟ್ಟಿದೆ. ಉಭಯ ಪಕ್ಷಗಳ ಮೈತ್ರಿಯಿಂದ ಇಲ್ಲಿ ಬಿಎಸ್ಪಿ ಮತ್ತಷ್ಟು ಪ್ರಬಲವಾಗಿದೆ.

ಕಳೆದ ಬಾರಿ ಬಿಜೆಪಿ ಮತ್ತು ಕೆಜೆಪಿ ಗಳಿಸಿದ ಮತಗಳೂ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಿಂತ 3 ಸಾವಿರ ಹೆಚ್ಚಾಗಿತ್ತು ಎಂಬುದು ಗಮನಾರ್ಹ. ಹೀಗಾಗಿ ಈ ಬಾರಿ ಇಲ್ಲಿ ಬಿಎಸ್ಪಿ, ಬಿಜೆಪಿ, ಕಾಂಗ್ರೆಸ್ ನ ನಡುವೆ ತೀವ್ರ ತ್ರಿಕೋನ ಸ್ಪರ್ಧೆ ಇದೆ.

ಇವೆಲ್ಲದರ ಜತೆಗೆ ಸದ್ಯ ಬಿಜೆಪಿಗೆ ಪಕ್ಷಾಂತರ ಮಾಡಿರುವ ಶ್ರೀನಿವಾಸ ಪ್ರಸಾದ್ ಹಾಗೂ ಕಾಂಗ್ರೆಸ್ ಧ್ರುವನಾರಾಯಣ್ ಪ್ರಭಾವ, ಬಿಎಸ್ಪಿ-ಜೆಡಿಎಸ್ ಮೈತ್ರಿ ಮುಂದಿನ ಚುನಾವಣೆಯಲ್ಲಿ ಇಲ್ಲಿ ಕೆಲಸ ಮಾಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Kollegal assembly constituency of Chamarajanagar district. Get election news from Kollegal. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X