ಕ್ಷೇತ್ರ ಪರಿಚಯ: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಲಗಾಮು ಹಾಕುವವರಾರು?

Subscribe to Oneindia Kannada

ರಾಮನಗರ ಜಿಲ್ಲೆಯ ಒಂದು ತಾಲೂಕು ಚನ್ನಪಟ್ಟಣ. ಚನ್ನಪಟ್ಟಣದ ಹೆಸರಿನ ಜತೆ ಬೊಂಬೆ ನಗರಿ ಎಂಬ ಹೆಸರೂ ಅಂಟಿಕೊಂಡಿದೆ. ಮರದ ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿರುವ ಚನ್ನಪಟ್ಟಣದ ಮರದ ಬೊಂಬೆಗಳು ಮತ್ತು ಮಕ್ಕಳ ಆಟಿಕೆಗಳು ದೇಶದಾದ್ಯಂತ ಜನಪ್ರಿಯವಾಗಿವೆ.

ಐತಿಹಾಸಿಕವಾಗಿಯೂ ಚನ್ನಪಟ್ಟಣ ಪ್ರಾಮುಖ್ಯತೆಯನ್ನು ಪಡೆದಿದ್ದನ್ನು ಗಮನಿಸಬಹುದು. ಗಂಗರಿಂದ ಪ್ರಾರಂಭಗೊಂಡು ನಂತರದಲ್ಲಿ ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು ಇಲ್ಲಿ ಆಳ್ವಿಕೆ ನಡೆಸಿದ್ದರು. ಗಂಗರು ಚನ್ನಪಟ್ಟಣ ತಾಲ್ಲೂಕಿನ 'ಮಾಕುಂದ (ಮಂಕುಂದ)'ವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಕ್ಷೇತ್ರ ಪರಿಚಯ: ರಾಮನಗರದಲ್ಲಿ ಕುಮಾರಸ್ವಾಮಿ ಸೋಲಿಸುವುದು ಸುಲಭವಲ್ಲ

1580ರಲ್ಲಿ ಇಮ್ಮಡಿ ಜಗದೇವರಾಯನ ಕಾಲದಲ್ಲಿ ಚನ್ನಪಟ್ಟಣದಲ್ಲಿ ಕಟ್ಟಿದ ಬೃಹತ್ತಾದ ಕೋಟೆ, ಹೈದರಾಲಿ ಗುರು ಅಕಲ್ ಷಾ ಖಾದ್ರಿಯ ಮಸೀದಿಯನ್ನು ಚನ್ನಪಟ್ಟಣದಲ್ಲಿ ಕಾಣಬಹುದು. ವೀರಸಂಸ್ಕೃತಿಯ ನೆಲೆವೀಡಾದ ಚನ್ನಪಟ್ಟಣದಲ್ಲಿ ಇದಕ್ಕೆ ಸಾಕ್ಷಿಯಾಗಿ ಸುಮಾರು ಸಾವಿರಕ್ಕೂ ಹೆಚ್ಚಿನ ವೀರಗಲ್ಲು, ಮಾಸ್ತಿಕಲ್ಲುಗಳು ಕಾಣಸಿಗುತ್ತವೆ.

Karnataka Assembly Election 2018: Channapatna Constituency Profile

ಚನ್ನಪಟ್ಟಣಕ್ಕೆ ರಾಜಕೀಯ ಇತಿಹಾಸಕ್ಕೆ ಬಂದರೆ ಇಲ್ಲಿ ಸಿನಿಮಾ ನಟ ಕಂ ರಾಜಕಾರಣಿ ಸಿ.ಪಿ. ಯೋಗೇಶ್ವರ್ ಪ್ರಾಬಲ್ಯ ಮೆರೆದಿದ್ದು ಕಣ್ಣಿಗೆ ರಾಚುತ್ತದೆ.

1985ರಲ್ಲಿ ಜನತಾ ಪಕ್ಷದ ಎಂ. ವರದೇ ಗೌಡ ಇಲ್ಲಿ ಜಯ ಸಾಧಿಸಿದ್ದರು. 1989ರಲ್ಲಿ ವರದೇಗೌಡ ಸೋತರು; ಕಾಂಗ್ರೆಸಿನ ಸಾದತ್ ಅಲಿ ಖಾನ್ ಗೆದ್ದರು. 1994ರಲ್ಲಿ ಮತ್ತೆ ವರದೇಗೌಡ ಗೆದ್ದರು. ಆದರೆ ಈ ಬಾರಿ ಅವರು ಜನತಾದಳದಿಂದ ಕಣಕ್ಕಿಳಿದಿದ್ದರು. ಆಮೇಲೆ ಆರಂಭವಾಗಿದ್ದು ಸಿ.ಪಿ. ಯೋಗೇಶ್ವರ್ ಯುಗ.

ಕ್ಷೇತ್ರ ಪರಿಚಯ: ಕನಕಪುರದಲ್ಲಿ ಡಿಕೆಶಿ ಅಶ್ವಮೇಧಕ್ಕೆ ಲಗಾಮು ಸಾಧ್ಯವೇ?

1999ರಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಸಿನಿಮಾ ನಟ ಯೋಗೇಶ್ವರ್ 19 ಸಾವಿರ ಮತಗಳ ಅಂತರದಿಂದ ಕಾಂಗ್ರೆಸಿನ ಸಾದತ್ ಅಲಿ ಖಾನ್ ಗೆ ಸೋಲುಣಿಸಿದರು. 2004ರಲ್ಲಿ ಕಾಂಗ್ರೆಸ್ ಗೆ ಬಂದ ಯೋಗೇಶ್ವರ್ ಮತ್ತೆ ಗೆಲುವು ಸಾಧಿಸಿದರು. ಈ ಬಾರಿ ಗೆಲುವಿನ ಅಂತರ 17 ಸಾವಿರಕ್ಕೆ ಇಳಿಕೆಯಾಯ್ತು. 2008ರಲ್ಲಿ ಯೋಗೇಶ್ವರ್ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಅಷ್ಟೊತ್ತಿಗೆ ಅವರ ಗೆಲುವಿನ ಅಂತರ 5 ಸಾವಿರ ಮತಗಳಿಗೆ ಇಳಿಕೆಯಾಗಿತ್ತು.

2008ರಲ್ಲಿ ಗೆದ್ದ ಸಿ.ಪಿ. ಯೋಗೇಶ್ವರ್ 'ಆಪರೇಷನ್ ಕಮಲ'ಕ್ಕೆ ಬಲಿಯಾದರು. 2009ರಲ್ಲಿ ಬಿಜೆಪಿ ಸೇರಿ ಮತ್ತೆ ಉಪಚುನಾವಣೆಯಲ್ಲಿ ಅಖಾಡಕ್ಕೆ ಇಳಿದಾಗ ಚನ್ನಪಟ್ಟಣದ ಜನ ತಕ್ಕ ಶಾಸ್ತಿ ಮಾಡಿದ್ದರು. ಸಿ.ಪಿ. ಯೋಗೇಶ್ವರ್ ಈ ಚುನಾವಣೆಯಲ್ಲಿ 2 ಸಾವಿರ ಮತಗಳಿಂದ ಜೆಡಿಎಸ್ ನ ಸಿ. ಅಶ್ವಥ್ ವಿರುದ್ಧ ವಿರೋಚಿತ ಸೋಲು ಕಂಡರು. ಇದು ಅಶ್ವಥ್ ಕಂಡ ಮೊದಲ ಸೋಲು.

ಆದರೆ ಮತ್ತೆ ಆಪರೇಷನ್ ಕಮಲಕ್ಕೆ ಇದೇ ಅಶ್ವಥ್ ಬಲಿಯಾದರು. 2010ರಲ್ಲಿ ಪುನಃ ಉಪ ಚುನಾವಣೆ ನಡೆಯಿತು. ಈ ಬಾರಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದು 18 ಸಾವಿರ ಮತಗಳ ಅಂತರದಿಂದ ಯೋಗೇಶ್ವರ್ ಗೆಲುವಿನ ನಗೆ ಬೀರಿದರು.

2013ರಲ್ಲಿ ಇಲ್ಲಿ ಜೆಡಿಎಸ್ ಮತ್ತು ಯೋಗೇಶ್ವರ್ ಮಧ್ಯೆ ಭಾರೀ ಕಾದಾಟವೇ ಏರ್ಪಟ್ಟಿತ್ತು. ಈ ಬಾರಿ ಎಸ್ಪಿಯ ಸೈಕಲ್ ತುಳಿದ ಸಿಪಿ ಯೋಗೇಶ್ವರ್ 7 ಸಾವಿರ ಮತಗಳಿಂದ ಅನಿತಾ ಕುಮಾರಸ್ವಾಮಿಯನ್ನು ಸೋಲಿಸಿ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಸದ್ಯ ಎಸ್ಪಿ ಬಿಟ್ಟು ಯೋಗೇಶ್ವರ್ ಬಿಜೆಪಿಗೆ ಬಂದಿದ್ದಾರೆ. ಈ ವೇಳೆಗೆ ಹಿಗ್ಗಲೂರು ಅಣೆಕಟ್ಟಿನಿಂದ ಇಲ್ಲಿನ ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಯೋಗೀಶ್ವರ್ ಜನಪ್ರಿಯತೆಯೂ ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಾಗಿದೆ.

ತಮ್ಮ ಭಾರೀ ವೈಯಕ್ತಿಕ ವರ್ಚಸ್ಸಿನ ಬೆಂಬಲದೊಂದಿಗೆ ಇಲ್ಲಿ ಈ ಬಾರಿಯೂ ಯೋಗೇಶ್ವರ್ ಸುಲಭ ಗೆಲುವು ಸಾಧಿಸಬಹುದು ಎಂದುಕೊಳ್ಳಲಾಗಿದೆ. ಆದರೆ ಯೋಗೇಶ್ವರ್ ಅಶ್ವಮೇಧದ ಕುದುರೆಗೆ ಲಗಾಮು ಹಾಕಲು ಶಕ್ತಿ ಇರುವ ಜೆಡಿಎಸ್ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲಿ ಯೋಗೇಶ್ವರ್ ನ್ನು ಹೇಗಾದರೂ ಮಾಡಿ ಮಣ್ಣು ಮುಕ್ಕಿಸಬೇಕು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹವಣಿಸುತ್ತಿದ್ದಾರೆ. ಆದರೆ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಡೆದ ಕೇವಲ 8 ಸಾವಿರ ಮತಗಳು ಅವರ ಯತ್ನ ಕಷ್ಟ ಸಾಧ್ಯ ಎಂದು ಹೇಳುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Channapatna assembly constituency of Ramanagara district. Get election news from Channapatna. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ