ಬಾದಾಮಿ ಕ್ಷೇತ್ರ ಪರಿಚಯ : ಸಿದ್ದರಾಮಯ್ಯ ಕ್ಷೇತ್ರದಿಂದ ಸ್ಪರ್ಧಿಸುವರೇ?
ಚಾಲುಕ್ಯ ಸಾಮ್ಯಾಜ್ಯದ ರಾಜಧಾನಿಯಾಗಿದ್ದ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಉತ್ತರ ಕರ್ನಾಟಕ ಭಾಗದ ಪ್ರಮುಖ ಪ್ರವಾಸಿ ತಾಣವೂ ಹೌದು.
ಕ್ಷೇತ್ರದ ಶಾಸಕರು ಕಾಂಗ್ರೆಸ್‌ನ ಬಿ.ಬಿ.ಚಿಮ್ಮನಕಟ್ಟಿ. ಇವರ ಮೇಲೆ ಯಾವುದೇ ಗಂಭೀರ ಆರೋಪಗಳಿಲ್ಲ. ಈ ಕ್ಷೇತ್ರದಲ್ಲಿ ಕುರುಬ ಸಮುದಾಯ ಪ್ರಬಲವಾಗಿದೆ. ಚಿಮ್ಮನಕಟ್ಟಿ ಅವರು ಸಹ ಕುರುಬ ಸಮುದಾಯದ ಮುಖಂಡರು.
ಈ ಹಿಂದೆ ಸಚಿವರಾಗಿರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡವರೆಗೆ ವರ್ಚಸ್ಸು ಹೊಂದಿದ್ದಾರೆ. ಬಾದಾಮಿ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ನಿರಾಸೆ ಕೆಲವು ಜನರಲ್ಲಿದೆ.

ಆಕಾಂಕ್ಷಿಗಳ ದೊಡ್ಡ ಪಟ್ಟಿ ಇದೆ : ಬಿ.ಬಿ.ಚಿಮ್ಮನಕಟ್ಟಿ ಹಾಲಿ ಶಾಸಕರು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಡಾ.ದೇವರಾಜ ಪಾಟೀಲ್, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಸೇರಿದಂತೆ ಹಲವರು ಟಿಕೆಟ್ ರೇಸ್‌ನಲ್ಲಿದ್ದಾರೆ.
ಈ ಬಾರಿ ಮತ್ತೆ ಚಿಮ್ಮಕಟ್ಟಿ ಅವರಿಗೆ ಟಿಕೆಟ್ ನೀಡಿದರೆ ಮತ್ತೆ ಗೆಲವು ಸಾಧಿಸಲಿದ್ದಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಮಹಾಂತೇಶ ಮಮದಾಪೂರ ಈಗ ಬಿಜೆಪಿ ಸೇರಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಹಿಂದಿನ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಗೊಂದಲದಿಂದ ಹಾಗೂ ಸಹೋದರ ಸಂಬಂಧಿಗಳಾದ ಬಿಜೆಪಿಯ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹಾಗೂ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಹಾಂತೇಶ ಮಮದಾಪೂರ ನಡುವೆ ಲಿಂಗಾಯ ಮತಗಳು ಹಂಚಿ ಹೋಗಿದ್ದವು. ಇದು ಚಿಮ್ಮನಕಟ್ಟಿ ಅವರ ಗೆಲುವಿಗೆ ಕಾರಣವಾಯಿತು.
ಈ ಬಾರಿ ಮತ್ತೆ ಬಿಜೆಪಿಯ ಗೊಂದಲಗಳು ಚಿಮ್ಮನಕಟ್ಟಿ ಅವರ ಗೆಲುವನ್ನು ಸುಲಭ ಮಾಡಿಕೊಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯಿಂದ ಯಾರಿಗೆ ಟಿಕೆಟ್? ಎಂದು ಹೇಳುವುದು ಕಷ್ಟವಾಗಿದೆ. ಈ ಬಾರಿ ಮತ್ತೆ ಎಂ.ಕೆ.ಪಟ್ಟಣಶೆಟ್ಟಿ ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಒಂದು ವೇಳೆ ಎಂ.ಕೆ.ಪಟ್ಟಣಶೆಟ್ಟಿ ಅವರು ಕಣಕ್ಕಿಳಿದರೆ ಚಿಮ್ಮನಕಟ್ಟಿ ಅವರಿಗೆ ವರದಾನ ಎಂಬುದು ಸ್ಥಳೀಯರು ವಿಶ್ಲೇಷಣೆ.
ಜೆಡಿಎಸ್ ಪಕ್ಷದಿಂದ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹಣಮಂತ ಮಾವಿನಮರದ ಅವರು ಅಭ್ಯರ್ಥಿ. ಇವರು ಕೂಡ ಲಿಂಗಾಯತ ಮುಖಂಡರು. ಹೀಗಾಗಿ ಈ ಕ್ಷೇತ್ರದಲ್ಲಿ ಎಂ.ಕೆ.ಪಟ್ಟಣ ಶೆಟ್ಟಿ ಕಣಕ್ಕಿಳಿದರೆ ಮಾವಿನಮರದ ಹಾಗೂ ಪಟ್ಟಣ ಶೆಟ್ಟಿ ನಡುವೆ ಮತಗಳು ಹಂಚಿ ಹೋಗಲಿವೆ. ಇದು ಮತ್ತೆ ಪ್ರಬಲ ಕುರುಬ ಸಮುದಾಯ ಚಿಮ್ಮನಕಟ್ಟಿ ಬೆನ್ನಿಗಿರುವುದರಿಂದ ಮತ್ತೆ ಚಿಮ್ಮನಕಟ್ಟಿ ಗೆಲುವು ಸುಲಭ ಎಂಬುದು ಲೆಕ್ಕಾಚಾರ.
ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಒಂದು ವೇಳೆ ಕುರುಬ ಸಮುದಾಯದ ಅಭ್ಯರ್ಥಿ ಕಣಕ್ಕಿಳಿದರೆ ಗೆಲುವು ಸುಲಭ.
2013ರ ಫಲಿತಾಂಶ
* ಬಿ.ಬಿ.ಚಿಮ್ಮನಕಟ್ಟಿ : 57,103
* ಮಹಾಂತೇಶ ಮಮದಾಪೂರ (ಜೆಡಿಎಸ್) : 41,957
* ಎಂ.ಕೆ.ಪಟ್ಟಣ ಶೆಟ್ಟಿ (ಬಿಜೆಪಿ) : 30,143












Click it and Unblock the Notifications