ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪರಿಚಯ

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 01 : ಕರ್ನಾಟಕದ ರಾಜಧಾನಿ ಬೆಂಗಳೂರು. ನಗರದ ರಾಜಕೀಯದ ಬಗ್ಗೆ ಮಾತನಾಡಲು ಹೊರಟರೆ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬಗ್ಗೆ ಮಾತನಾಡಲೇಬೇಕು.

ಬಿಜೆಪಿಯಲ್ಲಿಯೇ ಪ್ರಚಲಿತವಾಗಿರುವ ಮಾತಿನಂತೆ ಆರ್.ಅಶೋಕ್ 'ಬೆಂಗಳೂರಿನ ಸಾಮ್ರಾಟ್‌'. ನಗರದ ರಾಜಕೀಯದ ಮೇಲೆ ಅವರ ಪ್ರಭಾವ ಅಷ್ಟಿದೆ. ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡರಾದ ಅಶೋಕ್ ಪದ್ಮನಾಭನಗರ ಕ್ಷೇತ್ರದ ಶಾಸಕರು.

ಜಾಲಹಳ್ಳಿ ಆರ್.ಅಶೋಕ್ ಅವರ ಹುಟ್ಟೂರು. ಅಶೋಕ್ ಅವರ ತಂದೆ ರಾಮಯ್ಯ, ತಾಯಿ ಆಂಜನಮ್ಮ. ತಂದೆ ರಾಮಯ್ಯ ಕೃಷಿಕರು, ಆರ್‌ಎಸ್‌ಎಸ್ ನಂಟು ಹೊಂದಿದ್ದರು. ಆದ್ದರಿಂದ, ಅಶೋಕ್ ಅವರು ಸಹ ಆರ್‌ಎಸ್‌ಎಸ್‌ ಜೊತೆ ಗುರುತಿಸಿಕೊಂಡರು.

R Ashoka profile

1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ದಂಗೆ ಎದ್ದ ಜನತಾ ಪರಿವಾರದ ನಾಯಕರು ಜೈಲು ಸೇರಿದರು. ಜಯಪ್ರಕಾಶ್ ನಾರಾಯಣ್, ಎಲ್.ಕೆ.ಅಡ್ವಾಣಿ, ಬಿ.ಎಸ್.ಯಡಿಯೂರಪ್ಪ, ಅನಂತ್ ಕುಮಾರ್ ಜೊತೆ ಮೂರು ತಿಂಗಳು ಅಶೋಕ್ ಜೈಲುವಾಸ ಅನುಭವಿಸಿದರು.

ಹೋರಾಟದ ಸಂದರ್ಭದಲ್ಲಿ ಜೈಲು ಸೇರಿದ ಆರ್.ಅಶೋಕ್ ನಂತರ ಕರ್ನಾಟಕದ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಅವರ ರಾಜಕೀಯ ಜೀವನದ ಸಾಧನೆ. ಆರೋಗ್ಯ, ಸಾರಿಗೆ, ಗೃಹ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಆರ್.ಅಶೋಕ್ ಕೆಲಸ ನಿರ್ವಹಿಸಿದ್ದಾರೆ.

ಯುವ ಮೋರ್ಚಾ ಅಧ್ಯಕ್ಷರಾಗಿದ್ದಾಗ ಅಶೋಕ್ ಅವರ ಸಂಘಟನಾ ಶಕ್ತಿ ನೋಡಿ, ಪಕ್ಷದ ನಾಯಕರು ಬೆನ್ನು ತಟ್ಟಿದ್ದರು. ಇದರಿಂದಲೇ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಅದೂ ಸಹ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವಾದ ಉತ್ತರಹಳ್ಳಿಯಲ್ಲಿ.

R Ashoka profile

ಉತ್ತರಹಳ್ಳಿಯಲ್ಲಿ ಪ್ರಭಾವಿ ನಾಯಕ, ಸಚಿವ ಎಸ್.ರಮೇಶ್ ವಿರುದ್ಧ ಸ್ಪರ್ಧಿಸಿದ್ದ ಅಶೋಕ್ 18 ಸಾವಿರ ಮತಗಳ ಅಂತರದಿಂದ ಗೆದ್ದರು. ನಂತರ ಸತತ ಮೂರು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ವಿಂಗಡನೆಗೊಂಡು ಪದ್ಮನಾಭನಗರ, ಯಶವಂತಪುರ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಾದವು. ಆಗ ಅಶೋಕ್ ಪದ್ಮನಾಭ ನಗರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು.

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ಒಲಿದುಬಂತು. ಆರೋಗ್ಯ ಸಚಿವರಾದ ಆರ್.ಅಶೋಕ್ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬಾಣಂತಿಯರಿಗಾಗಿ ಜಾರಿಗೆ ತಂದ ಮಡಿಲು ಯೋಜನೆ ರಾಜ್ಯದಲ್ಲಿ ಇಂದಿಗೂ ಜನಪ್ರಿಯ.

2008ರಲ್ಲಿ ಬೆಂಗಳೂರು ನಗರದಲ್ಲಿ ಹೆಚ್ಚು ಮತಗಳ ಅಂತರದಿಂದ ಗೆದ್ದವರು ಆರ್.ಅಶೋಕ್. ಬಿಜೆಪಿ ಸರ್ಕಾರದಲ್ಲಿ ಸಾರಿಗೆ, ಗೃಹ ಸಚಿವರಾಗಿ ಕೆಲಸ ಮಾಡಿದರು. ಉಪ ಮುಖ್ಯಮಂತ್ರಿಯಾದರು.

ಸಾರಿಗೆ ಮತ್ತು ಗೃಹ ಸಚಿವರಾಗಿ ಅಶೋಕ್ ಮಾಡಿದ ಕಾರ್ಯಗಳಿಗೆ ಭಾರೀ ಪ್ರಶಂಸೆ ಸಿಕ್ಕಿದೆ. ಹಳ್ಳಿ-ಹಳ್ಳಿಗೂ ಬಸ್ ಸೌಲಭ್ಯ, ಬೆಂಗಳೂರು ನಗರದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದರು. ನಷ್ಟದಲ್ಲಿದ್ದ ಕೆಎಸ್ಆರ್‌ಟಿಸಿಯನ್ನು ಲಾಭದತ್ತ ತಂದು ನಿಲ್ಲಿಸಿದರು.

ಆರ್.ಅಶೋಕ್ ಬೆಂಗಳೂರಿನ ರಾಜಕೀಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. 2015ರ ಬಿಬಿಎಂಪಿ ಚುನಾವಣೆಯಲ್ಲಿ 198 ಕ್ಷೇತ್ರಗಳ ಪೈಕಿ, 101ರಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಿದ್ದರಲ್ಲಿ ಅಶೋಕ್ ಅವರ ಕಾರ್ಯತಂತ್ರವಿದೆ.

ರಾಜಕೀಯ ಹೊರತುಪಡಿಸಿ ಆರ್.ಅಶೋಕ್ ಒಬ್ಬ ಕ್ರೀಡಾ ಪ್ರೇಮಿ. ಕಬ್ಬಡಿ ಎಂದರೆ ಅವರಿಗೆ ಅಚ್ಚುಮೆಚ್ಚು. ದೇಶದಲ್ಲಿ ನಡೆದ ಸಾಕಷ್ಟು ಕಬ್ಬಡಿ ಕ್ರೀಡಾಕೂಟದಲ್ಲಿ ಅವರು ಪಾಲ್ಗೊಂಡಿದ್ದಾರೆ. ಕಬ್ಬಡಿಯಲ್ಲಿ ಅವರು ನ್ಯಾಷನಲ್ ಚಾಂಪಿಯನ್ ಎಂಬುದು ಹಲವರಿಗೆ ಗೊತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Read all about former deputy chief minister of Karnataka, R Ashoka in Kannada. In the perspective of Karnataka Assembly Elections 2018, we present the short biography and political journey of vokkaliga leader R Ashoka. He will play important role in Karnataka politics.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ