ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪರಿಚಯ
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ನೇರ ಮಾತುಗಳ ಮೂಲಕ ಸುದ್ದಿ ಮಾಡುವವರು. ಹಲವಾರು ಭಾರೀ ಅವರ ಹೇಳಿಕೆಗಳು ವಿವಾದ ಹುಟ್ಟುಹಾಕಿದ್ದು ಇದೆ.
ಕೆ.ಎಸ್.ಈಶ್ವರಪ್ಪ ಪೋಷಕರು ಮೂಲತಃ ಬಳ್ಳಾರಿಯವರು. ಈಶ್ವರಪ್ಪ ತಂದೆ ಶರಣಪ್ಪ ಉದ್ಯೋಗ ಅರಸಿ ಶಿವಮೊಗ್ಗಕ್ಕೆ ಬಂದವರು. ಭೂಪಾಳಂ ಅಡಿಕೆ ಮಂಡಿಯಲ್ಲಿ ತಂದೆ-ತಾಯಿ ದಿನಗೂಲಿ ನೌಕರರಾಗಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಬಾಲ್ಯದ ದಿನಗಳಲ್ಲಿ ಈಶ್ವರಪ್ಪ ಅವರು ಅಡಿಕೆ ಮಂಡಿಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ತಾಯಿ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಹೇಳಿದ್ದರು. ಆ ಮಾತು ಈಶ್ವರಪ್ಪ ಅವರಿಗೆ ಸ್ಫೂರ್ತಿ ತುಂಬಿತು.
ಶಿವಮೊಗ್ಗದ ವಿಎಚ್‌ಪಿ ಮುಖಂಡ ನರಸಿಂಹಮೂರ್ತಿ ಐಯ್ಯಾಂಗಾರ್ ಈಶ್ವರಪ್ಪ ಅವರನ್ನು ಆರ್‌ಎಸ್‌ಎಸ್‌ಗೆ ಪರಿಚಯಿಸಿದರು. ನ್ಯಾಷನಲ್ ಕಾಲೇಜಿನಲ್ಲಿ (ವಾಣಿಜ್ಯ) ವ್ಯಾಸಂಗ ಮಾಡುತ್ತಿದ್ದಾಗಲೇ ಅವರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯಯಾಗಿದ್ದರು. ವಿದ್ಯಾಭ್ಯಾಸದ ಬಳಿಕ ಶಿವಮೊಗ್ಗದಲ್ಲಿ ಉದ್ಯಮ ಆರಂಭಿಸಿದರು. ಬಿಜೆಪಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ಮಾಡಿ ಬಂಧನಕ್ಕೊಳಗಾದರು. ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆ ಬಳಿಕ ರಾಜಕೀಯದಲ್ಲಿ ಸಕ್ರಿಯರಾದರು. 1982ರಲ್ಲಿ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾದರು. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆನಂದರಾವ್ ಗೆಲ್ಲಲು ಈಶ್ವರಪ್ಪ ಅವರ ಶ್ರಮ ಕಾರಣವಾಯಿತು.
1989ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಈಶ್ವರಪ್ಪ ಅವರು ಪ್ರಭಾವಿ ನಾಯಕ, ಆರೋಗ್ಯ ಸಚಿವರಾಗಿದ್ದ ಕೆ.ಎಚ್.ಶ್ರೀನಿವಾಸ್ ಅವರನ್ನು 1,304 ಮತಗಳ ಅಂತರದಿಂದ ಸೋಲಿಸಿದರು.
ಈ ಗೆಲುವು ಈಶ್ವರಪ್ಪ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ನಂತರ ನಾಲ್ಕು ಬಾರಿ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾದರು. 1999ರಲ್ಲಿ ಸೋಲು ಅನುಭವಿಸಿದರು. 1992ರಲ್ಲಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರು.
ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರವಿದ್ದಾಗ ಈಶ್ವರಪ್ಪ ಅವರನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಂಧನ ಸಚಿವರಾಗಿ ಕೆಲಸ ಮಾಡಿದರು.
2010ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಕುರುಬ ಸಮುದಾಯಕ್ಕೆ ಸೇರಿದ ಈಶ್ವರಪ್ಪ ಅವರನ್ನು 2012ರಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದರು.
2013ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನ ಕುಮಾರ್ ಅವರ ವಿರುದ್ಧ 5000ಕ್ಕೂ ಅಧಿಕ ಮತಗಳ ಅಂತರದಿಂದ ಸೋತರು.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಅವರನ್ನು ನಾಮ ನಿರ್ದೇಶನ ಮಾಡಲಾಯಿತು. ಪ್ರಸ್ತುತ ಅವರು ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ.











Click it and Unblock the Notifications