keyboard_backspace

ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಮೊದಲೇ ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಟಿಕೆಟ್ ಪೈಪೋಟಿ

By ಶಿವಮೊಗ್ಗ ಪ್ರತಿನಿಧಿ
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 16: ಮುಂದಿನ ವಿಧಾನಸಭೆ ಚುನಾವಣೆಗೆ ಸಾಕಷ್ಟು ಸಮಯವಿದೆ. ಹೀಗಿದ್ದೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ರಂಗ ತಾಲೀಮು ಅರಂಭವಾಗಿದೆ. ಯಾರೇ ಚುನಾವಣೆಗೆ ನಿಂತರೂ ಗೆಲುವು ಸಾಧಿಸಲು ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಈ ನಡುವೆ ಶಿವಮೊಗ್ಗದ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಈಗಲೇ ಪೈಪೋಟಿ ಆರಂಭವಾಗಿದೆ. ಆಕಾಂಕ್ಷಿಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ, ಕಡೆ ಕ್ಷಣದವರೆಗೂ ಕುತೂಹಲವಿರಲಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಬಿ- ಫಾರಂ ಲಭಿಸಲಿದೆ ಎಂಬುದು ಬಹು ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಿಗೂ ಗೊತ್ತಾಗುವುದಿಲ್ಲ. ಹಾಲಿ ಶಾಸಕರಿಗೂ ಟಿಕೆಟ್ ಲಭಿಸದ ಉದಾಹರಣೆಗಳಿವೆ. ಇನ್ನೇನು ಬಿ-ಫಾರಂ ಕೈ ಸೇರಿತು ಎಂಬ ಕಲ್ಪನೆಯಲ್ಲಿರುವಾಗಲೇ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಪಕ್ಷ ಪ್ರಕಟಿಸುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಶಿವಮೊಗ್ಗ ಜಿಲ್ಲೆಯ ಕೆಲವು ಕ್ಷೇತ್ರದಲ್ಲಿ ಟಿಕೆಟ್ ಪೈಪೋಟಿ ಆರಂಭವಾಗಿದೆ.

ತೀರ್ಥಹಳ್ಳಿಯಲ್ಲಿ ಪೈಪೋಟಿ ಬಿರುಸು

ತೀರ್ಥಹಳ್ಳಿಯಲ್ಲಿ ಪೈಪೋಟಿ ಬಿರುಸು

ಪ್ರಜ್ಞಾವಂತರ ಕ್ಷೇತ್ರ ಅನಿಸಿಕೊಂಡಿರುವ ತೀರ್ಥಹಳ್ಳಿಯಲ್ಲಿ ಈಗ ಕಾಂಗ್ರೆಸ್ ಟಿಕೆಟ್ ಕುರಿತು ಕುತೂಹಲ ಮೂಡಿದೆ. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇದು ಪೈಪೋಟಿಗೆ ಕಾರಣವಾಗಿದೆ. ಮಂಜುನಾಥಗೌಡ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವೇದಿಕೆ ಸಿಕ್ಕಾಗಲೆಲ್ಲ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಗೆ ಹಾಕುತ್ತಿದ್ದಾರೆ.

ಇತ್ತೀಚೆಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಕಿಮ್ಮನೆ ರತ್ನಾಕರ್, ಮಂಜುನಾಥಗೌಡ ಹೆಸರು ಹೇಳದೆಯೇ ''ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಬರುತ್ತಾರೆ. ಪಕ್ಷ ಸಂಘಟನೆ ಮಾಡುವುದೆಂದರೆ ಇದೇನಾ. ಇವರನ್ನು ಕಟ್ಟಿಕೊಂಡು ಓಡಾಡಿದ ಬಳಿಕ ಬೇರೆ ಪಕ್ಷಕ್ಕೆ ಹೋಗಿ ಚುನಾವಣೆಗೆ ನಿಂತರೆ ನಾನೇನು ಮಾಡಲಿ,'' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆರ್.ಎಂ. ಮಂಜುನಾಥಗೌಡ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಎಲ್ಲಿಯೂ ತುಟಿ ಬಿಚ್ಚಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಆಳ ಅಗಲ ತಿಳಿದಿರುವ ಕಿಮ್ಮನೆ ರತ್ನಾಕರ್ ಇದೇ ಕಾರಣಕ್ಕೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಗರದಲ್ಲಿ ಮಾವನಾ? ಅಳಿಯನಾ?

ಸಾಗರದಲ್ಲಿ ಮಾವನಾ? ಅಳಿಯನಾ?

ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದಲ್ಲಿ ಟಿಕೆಟ್ ಕದನ ಮತ್ತೊಂದು ಮಗ್ಗುಲಿನಲ್ಲಿದೆ. ಇಲ್ಲಿ ಮಾವ ಕಾಗೋಡು ತಿಮ್ಮಪ್ಪ, ಅಳಿಯ ಬೇಳೂರು ಗೋಪಾಲಕೃಷ್ಣ ಮಧ್ಯೆ ಜಿದ್ದಾಜಿದ್ದಿ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ತಮ್ಮ ಸೋದರ ಮಾವ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬೆನ್ನಿಗೆ ನಿಂತಿದ್ದರು.

ವಯಸ್ಸಿನ ಕಾರಣದಿಂದ ಕಾಗೋಡು ತಿಮ್ಮಪ್ಪರಿಗೆ ಮುಂದಿನ ಚುನಾವಣೆಗೆ ಟಿಕಟ್ ಲಭಿಸುವುದಿಲ್ಲ. ಪರ್ಯಾಯವಾಗಿ ಪಕ್ಷ ತಮಗೆ ಟಿಕೆಟ್ ನೀಡಲಿದೆ ಎಂದು ಬೇಳೂರು ಗೋಪಾಲಕೃಷ್ಣ ಭಾವಿಸಿದ್ದರು. ಇತ್ತೀಚೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಯುವಕರು ನಾಚುವಂತೆ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಮತ್ತೊಮ್ಮೆ ಅವರ ಪರ ಒಲವು ಮೂಡಿದೆ. ಕಾಗೋಡು ತಿಮ್ಮಪ್ಪ ನೆರಳಿನಂತೆ ಸದಾ ಜೊತೆಗಿರುತ್ತಿದ್ದ ಬೇಳೂರು ಗೋಪಾಲಕೃಷ್ಣ ಈಗ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ.

ಸಾಗರದಲ್ಲಿ ಕಾಗೋಡು ತಿಮ್ಮಪ್ಪರಿಗೆ ಮುಂದಿನ ಬಾರಿಯೂ ಟಿಕೆಟ್ ಕೈ ತಪ್ಪಿದರೂ, ಅವರ ಪುತ್ರಿ ಡಾ. ರಾಜನಂದಿನಿಗೆ ಟಿಕೆಟ್ ಕೊಡಿಸಲು ತೆರೆಮರೆ ಪ್ರಯತ್ನಗಳು ನಡೆಯುತ್ತಿವೆ.

ಸೊರಬದಲ್ಲಿ ತಲ್ಲೂರುಗೆ ತಳಮಳ

ಸೊರಬದಲ್ಲಿ ತಲ್ಲೂರುಗೆ ತಳಮಳ

ಸಹೋದರರ ಸವಾಲ್‌ಗೆ ಹೆಸರು ವಾಸಿಯಾಗಿದ್ದ ಸೊರಬ ವಿಧಾನಸಭೆ ಕ್ಷೇತ್ರದಲ್ಲೂ ಕೈ ಟಿಕೆಟ್ ಪೈಪೋಟಿ ಏರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ (ಬಿಜೆಪಿ) ಮತ್ತು ಮಧು ಬಂಗಾರಪ್ಪ (ಜೆಡಿಎಸ್) ನಡುವೆ ಜಿದ್ದಾಜಿದ್ದಿಗೆ ಸಾಕ್ಷಿಯಾತ್ತು. ಇಬ್ಬರ ನಡುವಿನ ಸ್ಪರ್ಧೆಯಲ್ಲೂ ಕಾಂಗ್ರೆಸ್‌ನ ರಾಜು ತಲ್ಲೂರು 21 ಸಾವಿರ ಮತ ಗಳಿಸಿ ಗಮನ ಸೆಳೆದಿದ್ದರು. ಜೆಡಿಎಸ್ ತೊರೆದ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಹೈಕಮಾಂಡ್‌ವರೆಗೂ ಉತ್ತಮ ನಂಟು ಹೊಂದಿದ್ದಾರೆ. ಇದು ರಾಜು ತಲ್ಲೂರುಗೆ ತಲೆನೋವು ತಂದಿದೆ. ಟಿಕೆಟ್‌ನ ಬಗ್ಗೆ ಗೊಂದಲದಲ್ಲಿದ್ದಾರೆ.

ಶಿಕಾರಿಪುರ ಕ್ಷೇತ್ರದಲ್ಲಿ ಗೋಣಿ ಮಾಲ್ತೇಶ್ ಸ್ಪರ್ಧೆ

ಶಿಕಾರಿಪುರ ಕ್ಷೇತ್ರದಲ್ಲಿ ಗೋಣಿ ಮಾಲ್ತೇಶ್ ಸ್ಪರ್ಧೆ

ಇನ್ನು ಜಿಲ್ಲೆಯ ಭದ್ರಾವತಿಯಿಂದ ಶಾಸಕ ಬಿ.ಕೆ. ಸಂಗಮೇಶ್ವರ್, ಶಿಕಾರಿಪುರ ಕ್ಷೇತ್ರದಲ್ಲಿ ಗೋಣಿ ಮಾಲ್ತೇಶ್ ಸ್ಪರ್ಧೆ ಬಹುತೇಕ ಖಚಿತ. ಆದರೆ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರನ್ನು ಕಣಕಿಳಿಸಲಾಗುತ್ತದೆ ಎಂಬುದು ಇನ್ನೂ ನಿಗೂಢವಾಗಿದೆ. ವಿಧಾನಸಭೆ ಚುನಾವಣೆಗೆ ತುಂಬಾ ಸಮಯವಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಜಿದ್ದಾಜಿದ್ದಿ ಬಿರುಸುಗೊಂಡಿರುವುದು ಪಕ್ಷದ ನಾಯಕರಿಗೆ ತಲೆನೋವು ತಂದಿದೆ.

English summary
Competition begins for Congress Ticket to Karnataka 2023 Assembly Election In Shivamogga district.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X