ಎಂಥ ರೋಗವನ್ನೂ ಗುಣಪಡಿಸುವ ಶಕ್ತಿ ಯೋಗದಲ್ಲಿದೆ
(ಸಂದರ್ಶನದ ಮುಂದುವರಿದ ಭಾಗ)
ಪ್ರಶ್ನೆ : ಸಾಮಾನ್ಯ ತೊಂದರೆಗಳಾದ ಸೈನಸ್, ತಲೆನೋವುಗಳನ್ನು ಮತ್ತು ಹೃದ್ರೋಗ, ಕ್ಯಾನ್ಸರ್ ನಂಥ ಗಂಭೀರ ರೋಗಗಳನ್ನು ಯೋಗದಿಂದ ಗುಣಪಡಿಸಲು ಸಾಧ್ಯವೆ?
ಕಮಲೇಶ್ ಬರ್ವಾಲ್ : ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಹಾರ್ಮೋನು ಸ್ರವಿಸುವಿಕೆ, ಜೀರ್ಣಕ್ರಿಯೆ ಮತ್ತು ರಕ್ತ ಸಂಚಲ ಮುಂತಾದ ಆಂತರಿಕ ಕ್ರಿಯೆಗಳು ಸರಾಗವಾಗಿ ಸಾಗುತ್ತಿರುತ್ತವೆ. ದೇಹದಲ್ಲಿನ ವಿಷಕಾರಕ ಹೊರಹಾಕಿ ಸೈನಸ್ ಗಳಲ್ಲಿ ರಕ್ತ ಸಂಚಲನ ಹೆಚ್ಚಾಗುವಂತೆ ಮಾಡಲು ಮುಂಬದಿ ಮತ್ತು ಹಿಂಬದಿ ಬಾಗಿ ಮಾಡುವ ಯೋಗಾಸನಗಳು ತುಂಬಾ ಸಹಕಾರಿ. ಜಲನೇತಿಯಂಥ ಅಭ್ಯಾಸ ಸೈನಸ್ ಗಳನ್ನು ಶುದ್ಧವಾಗಿಸುತ್ತದೆ ಮತ್ತು ಸೋಂಕಿನಿಂದ ದೂರವಿರಿಸುತ್ತದೆ.
ಯೋಗ ದೈಹಿಕ ಕಾರ್ಯಕ್ಷಮತೆಯನ್ನು ಬಲಪಡಿಸುತ್ತದೆ ಮತ್ತು ಮನಸ್ಸನ್ನು ಉಲ್ಲಾಸದಾಯಕವಾಗಿಸುತ್ತದೆ. ಮಾನಸಿಕ ಸ್ಥಿತಿಗೂ ರೋಗ ನಿರೋಧಕ ಶಕ್ತಿಗೂ ನೇರ ಸಂಬಂಧವಿದೆ. ಯಕೃತ್ತು, ಜೀರ್ಣಾಂಗ ಸುಸ್ಥಿತಿಯಲ್ಲಿಲ್ಲದಿದ್ದರೆ ಮತ್ತು ಮಾನಸಿಕವಾಗಿ ಹಾಗು ದೈಹಿಕವಾಗಿ ತೀವ್ರ ಒತ್ತಡವಿರುತ್ತಿದ್ದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಜೀರ್ಣಶಕ್ತಿ ವೃದ್ಧಿಗಾಗಿ ಬದ್ಧಕೋನಾಸನ, ನಟರಾಜಾಸನ, ಶಿಶುವಾಸನ ಮತ್ತು ಪವನಮುಕ್ತಾಸನಗಳನ್ನು ನಾವು ಕಡ್ಡಾಯವಾಗಿ ಅಭ್ಯಾಸ ಮಾಡುತ್ತಿರಬೇಕು.

ಪ್ರತಿದಿನ ಕೇವಲ 20 ನಿಮಿಷಗಳ ಧ್ಯಾನ ಮಾಡುವುದರಿಂದ ಕೇಂದ್ರ ನರವ್ಯೂಹ ಮತ್ತು ಪಿಟ್ಯೂಟರಿ ಗ್ರಂಥ ಸ್ರವಿಸುವ ಎಂಡಾರ್ಫಿನ್ಸ್ ಉತ್ಪತ್ತಿ ಹೆಚ್ಚುತ್ತದೆ ಮತ್ತು ರಕ್ತದಲ್ಲಿನ ಕಾರ್ಟಿಸಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮಾನಸಿಕ ಸ್ವಾಸ್ಥ್ಯ ವೃದ್ಧಿಯಾಗುತ್ತದೆ. ಉತ್ತಮ ನಿದ್ರೆಯಿಂದ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ದೇಹದ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು, ಉಸಿರಾಟದ ಪ್ರಕ್ರಿಯೆ ಹೆಚ್ಚಿಸುವ ಪ್ರಾಣಾಯಾಮ ಬಲು ಸಹಕಾರಿ. ಕಪಾಲಭಾತಿಯಿಂದ ಉಚ್ಛ್ವಾಸ ಮತ್ತು ನಿಶ್ವಾಸ ಸರಾಗವಾಗುತ್ತದೆ, ಭಸ್ತ್ರಿಕಾಸನ ಪುಪ್ಪುಸವನ್ನು ಶುದ್ಧವಾಗಿಸುತ್ತದೆ ಮತ್ತು ನಾಡಿಶೋಧನ ಪ್ರಾಣಾಯಾಮದಿಂದ ಸೈನಸ್ ಗಳಲ್ಲಿನ ನಿರೋಧಕ ಶಕ್ತಿ ಹೆಚ್ಚುತ್ತದೆ.
ಸುದರ್ಶನ ಕ್ರಿಯಾ ಯೋಗ ಅಭ್ಯಾಸ ಮಾಡುತ್ತಿರುವವರು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಥೈರಾಯಿಡ್ ನಂಥ ಮಾರಕ ರೋಗಗಳಿಂದ ಗುಣಮುಖರಾಗಿರುವುದಾಗಿ ಹೇಳಿದ್ದಾರೆ. ಉಸಿರಾಟದ ಯೋಗ ಮತ್ತು ಆರೋಗ್ಯದ ಮೇಲಾಗುವ ಲಾಭವನ್ನು ತಿಳಿಯಲು ಈ ಕೊಂಡಿ ನೋಡಿರಿ.












Click it and Unblock the Notifications