ಸಾವಿನ ಮನೆಯಲ್ಲಿ ಏನಿದು ನೀತಿನಿಯಮ?
ನನ್ನ ಅನಿಸಿಕೆ ಇಷ್ಟೆ. ‘‘ಹೆಣ್ಣು ಅತ್ತೇ ದುಖಃ ತೋರಿಸಬೇಕು.... ಗಂಡು ಕಣ್ಣೀರು ನುಂಗಿಕೊಂಡೇ ಗಂಡಸಾಗಬೇಕು’’ ಎನ್ನುವ age old ಆಚರಣೆ ಇದೆಯಲ್ಲಾ ಅದರ ಬಗ್ಗೆ ಗಮನ ಹರಿಸಬೇಕಲ್ಲವಾ ಅಂತ. ನಾವು natural ಆಗಿ ಇರುವುದೇ ತಪ್ಪಾ?!
ಯಾರು ಬಂದಿದ್ದರು ಗೊತ್ತಾ? ಸುಮತಿ. ಹಬ್ಬಕ್ಕೆ ಎಳ್ಳು-ಬೆಲ್ಲ, ಕಬ್ಬು ಬಾಳೆಹಣ್ಣು, ಮಕ್ಕಳಿಗೆ ಹೊಸ ಬಟ್ಟೆ ಎಲ್ಲಾ ರೆಡಿ ಮಾಡ್ಕೊಂಡಿದ್ಲಂತೆ, ಹಿಂದಿನ ದಿನ ಅವರತ್ತೆ ಬಂದವರೆ, ಅವರ ಚಿಕ್ಕಮ್ಮನ ವಾರೆಗಿತ್ತಿಯ ತಮ್ಮನ ಷಡ್ಕ ಒಂದ್ವಾರದ ಹಿಂದೆ ಹೋಗ್ಬಿಟ್ಟ್ರು ಅಂತ ಅತ್ತರಂತೆ. ಅಷ್ಟೆ ಆಗಿದ್ರೆ ಪರವಾಗಿಲ್ಲಾ, ಸ್ವರ್ಗಕ್ಕೆ ಹೋದ್ರಲ್ಲಾ ಅವರು ಮತ್ತು ಸುಮತಿ ಅತ್ತೆ ಪ್ರೈಮೆರಿ ಸ್ಕೂಲಿಗೆ ಒಟ್ಟಿಗೆ ಹೋಗ್ತಿದ್ದ್ರಂತೆ. ಅದಕ್ಕೇ ಅವರತ್ತೆ ಹಬ್ಬ ಮಾಡೋದು ಬೇಡ ಅಂತ ಅಪ್ಪಣೆ ಕೊಡಿಸಿದ್ರಂತೆ ! ಅವರು ಊರಿಗೆ ಹೋದ್ಮೇಲೆ ಇವತ್ತು ಎಳ್ಳು ಬೀರೋದಕ್ಕೆ ಬಂದಿದ್ಲು. ನಿಮಗೆ ನಗು ಬರ್ತಿದ್ಯಾ? ನಕ್ಕು ಬಿಡಿ. . . . ಓ, ಯಾರ್ದಾದ್ರು ಸಾವಿನ ಸುದ್ದಿ ಕೇಳಿ ಹೇಗ್ನಗೋದು ಅಂತ ಯೋಚಿಸ್ತಿದ್ದೀರಾ? ಅದು ಸರೀ ಅನ್ನಿ.
ಅವತ್ತು ಬೆಳಿಗ್ಗೆ ಐದು ಘಂಟೆಗೇ ಫೋನ್ ನಾಗರಾಜ್ ಮಾವ ಹೋಗ್ಬಿಟ್ಟ್ರು ಅಂತ ವಿಷಯ ಮುಟ್ಟಿಸಿತು. ತಯಾರಾಗಿ ಅವರ ಮನೆಗೆ ಹೊರಟೆ, ರಸ್ತೆಯುದ್ದಕ್ಕೂ ಬಾಲ್ಯದ ನೆನಪು! ಮಾವ ನನಗೆ ಮೊದಲು ತಂದುಕೊಟ್ಟ ಆಟಿಕೆ ಚೆನ್ನಪಟ್ಟಣದ ಮರದ ಅಡುಗೆಮನೆ ಸಾಮಾನು... ಆಮೇಲೊಂದು ಕೀಕೊಟ್ಟಕೂಡಲೆ ಅಳುವ ಕೆಂಪು ಬಣ್ಣದ ಫ್ರಾಕ್ ಹಾಕ್ಕೊಂಡಿದ್ದ ಬೊಂಬೆ. ನನ್ನೆಲ್ಲಾ ಬೆಳವಣಿಗೆಯಲ್ಲಿ ಒಂದು ಹೆಮ್ಮೆ-ಒಂದು ಸಂತೋಷ ಹಂಚಿಕೊಂಡಿದ್ದ ಜೀವ. ಅಕಾಲ ಮರಣವೇನಲ್ಲ, ಆದರೂ ಮಾವ ಇನ್ನಿಲ್ಲ. ನನಗೆ ಬೇಜಾರಾಯ್ತು.
ನನ್ನ ಮುಂದಿನ ದಿನಗಳಲ್ಲಿ ಒಂದು ‘ಭೇಷ್’ ಉದ್ಗಾರದ absence ಕಾಣಿಸಿತು. ಆದರೂ ಅಳು ಬರಲಿಲ್ಲ! ಅವರೊಂದಿಗಿದ್ದ ಮಧುರ ನೆನಪುಗಳಿಂದಾಗಿ ತುಟಿಯಂಚಿನಲ್ಲಿ ಸಣ್ಣದೊಂದು ನಗುವೇ ಇತ್ತು. ಅವರ ಮನೆ ಹೊಕ್ಕೆ. ಗಂಡಸರೆಲ್ಲಾ ಒಂದು ಗುಂಪು ಅಲ್ಲಲ್ಲಿ.... ಹೆಂಗಸರೆಲ್ಲಾ ಅತ್ತೆಯ ಸುತ್ತಾ, ಅಳು-ಮಾತು ಮತ್ತು ಮಾತು! ಅಳುತ್ತಿದ್ದ ಅತ್ತೆ ನನ್ನನ್ನು ನೋಡಿ ಮತ್ತೂ ಅತ್ತರು, ಆದರೂ ನನ್ನ ಕಣ್ಣಿಂದ ನೀರು ಬರಲಿಲ್ಲ. ಅವರು, ಇವರು ಎಲ್ಲರೂ ಒಬ್ಬರಿಗೊಬ್ಬರು ಅತ್ತರು-ಅಳುತ್ತಿದ್ದರು, ನನ್ನ ಕಣ್ಣಲ್ಲಿ ನೀರಿನ ಸುಳಿವೇ ಇಲ್ಲ!
ವಿಪರೀತ ಮುಜುಗರವನ್ನಿಸುತ್ತಿತ್ತು. ಗಂಡಸರೆಲ್ಲಾ ‘ಧರ್ಮ ಕಾರಣ’ ‘ಜನಾಂಗೀಯ ನಿಂದನೆ’ etc., etc., ಅಂತ ಸಮಾಜ ಉದ್ಧಾರ ಮಾಡ್ತಿದ್ರು. ಹೆಂಗಸರೆಲ್ಲಾ ತುಟಿಬಿಚ್ಚದೆ ಕಣ್ಣೀರಿಡುತ್ತಿದ್ದರು. ನನ್ನ ತಲೆ ಮಾತ್ರ ಫ್ಯಾಕ್ಟ್ರಿಯ ಸೈರನ್‌ನಂತೆ ಕೆಲಸ ಮಾಡುತ್ತಲೇ ಇತ್ತು. ಎಲ್ಲಿಂದಲೋ ಕೇಳಿಸಿತು ‘‘ಸರಳ ಬೊಸ್ಟನ್‌ನಿಂದ ಹ್ಯೂಸ್ಟನ್‌ಗೆ ಶಿಫ್ಟ್ ಆಗ್ತಿದ್ದಾಳಂತೆ. ಏನೇ ಅನ್ನು ಬೊಸ್ಟನ್‌ನ್ನೇ ಒಂತರಹ ಚೆನ್ನ ಅನ್ನಿಸುತ್ತೆ’’.... ನಾನು stun ಆಗಲಿಲ್ಲ. ಇನ್ನೊಂದು ಕಡೆ ಕಣ್ಣಿಗ್ಬಿತ್ತು ಶಶಿ ಆಂಟಿ ಗಿರಿಜಕ್ಕಳಿಗೆ ‘‘ಮನೆಗ್‌ಬರಕ್ಕಾಗ್ಲಿಲ್ಲ ಕಣೆ, ಇಲ್ಲಿಗೇ ತಂದ್ಬಿಟ್ಟೆ ಈಗ್ಲೇ ಬ್ಯಾಗ್‌ನಲ್ಲಿ ಹಾಕಿಕೋ’’ ಅಂತ ಪಿಸುಗುಡುತ್ತಾ ಎಳ್ಳು-ಬೆಲ್ಲದ ಡಬ್ಬಿ ಕೊಟ್ಟು, ಆಕಡೆ ತಿರುಗಿ ಕಣ್ಣೀರು ಒರೆಸಿಕೊಂಡರು.... ಗೇಟ್ ಹತ್ರ ನರಸಿಂಹನ್ ಅವರು ಮಾವ ಸೈಟನ್ನು ಎಷ್ಟೋ ಲಕ್ಷಕ್ಕೆ ಮಾರಿದ ವಿಷಯ ಎಲ್ಲರಿಗೂ ಬಹಿರಂಗಗೊಳಿಸ್ತಿದ್ದ್ರು.... ಸೀಬೆ ಮರದ ಹತ್ರ ಜಗಣ್ಣ ಅಳ್ತಾ ಇದ್ದ, ನನ್ನನ್ನು ನೋಡಿದ ತಕ್ಷಣ ಏನೋ ದೊಡ್ಡ ಅಪರಾಧ ಮಾಡಿದಂತೆ ಕಕ್ಕಾಬಿಕ್ಕಿಯಾಗಿ ಕಣ್ಣೊರೆಸಿಕೊಂಡ! ಯಾವುದಕ್ಕೂ ನನ್ನ ಕಣ್ಣಲ್ಲಿ ಮಾತ್ರ ಒಂದು ತೊಟ್ಟೂ ನೀರಿಲ್ಲ..... ಅತ್ತೆ miss ಮಾಡಿಕೊಳ್ಳುತ್ತಿರುವ ಮಾವನ ಸಾಹಚರ್ಯ, ಜಗಣ್ಣ ಫೀಲ್ ಮಾಡಿಕೊಳ್ಳುತ್ತಿರುವ ತಂದೆಯ vacuum, ಎಲ್ಲಕ್ಕೂ ನಾನು ಮಿಡಿಯುತ್ತಿದ್ದೆ ಆದರೂ ನಾನು ಅಳುತ್ತಿರಲಿಲ್ಲ!
‘‘ನಗೋ ಹೆಣ್ಣನ್ನು-ಅಳೋ ಗಂಡ್ಸನ್ನು ನಂಬ ಬೇಡ’’ ಅಂತ ಒಂದು ಉಕ್ತಿ ಕೇಳಿದ್ದು ಅಲ್ಲೆ ನೆನಪಾಯ್ತು. ಅಳು-ನಗು ಎರಡು ಬೇರೆಯೆಲ್ಲದರಂತೆ ನಮ್ಮ basic instinctsಗಳು. ಆದರೆ ಎರಡಕ್ಕೂ ಸ್ತ್ರೀಲಿಂಗ-ಪುಲ್ಲಿಂಗ ಅಂತ ಅರಿವೆ ತೊಡೆಸಿ ಕೂರಿಸಿದ್ದೇವೆ! ಯಾಕೆ ಹೀಗೆ? ಎದುರು ಮನೆ ಪಂಕಜರ ಗಂಡ ತೀರಿಕೊಂಡಾಗ ಬಂದವರೆಲ್ಲಾ ಸತ್ತವರ ಗುಣ ಗಾನ ಮಾಡಿ ತಮ್ಮ ಶಕ್ತ್ಯಾನುಸಾರ ಕಣ್ಣೀರು ಹಾಕಿ ಹೋಗುತ್ತಿದ್ದರು. ಪಂಕಜ ಮಾತ್ರ ಒಂದು ತೊಟ್ಟು ಕಣ್ಣೀರು ಹಾಕದೆ ಗಟ್ಟಿಯಾಗಿ ಕೂತಿದ್ರು. ಅದಕ್ಕೆ ನಂತರ ಅವರ ಬಗ್ಗೆ ಬಂದ comment ಏನು ಗೊತ್ತಾ ‘‘ಅಬ್ಬ, ಏನು ಗಟ್ಟಿಗಿತ್ತಿ ನೋಡಿ. ಅವಳೆಂತಾ ಹೆಂಗಸು ನೋಡಿ....’’ ಅಳದ ಹೆಂಗಸಿಗೆ ಏನೇನೊ ಬಿರುದುಕೊಡುವ ನಾವು ಒಬ್ಬ ಗಂಡಸು ಅತ್ತರೆ ಮಾತ್ರಾ‘‘ ಗಂಡಸೇ ಅತ್ತ ಅಂದ್ರೆ ನೋಡ್ರೀ ಅವನಿಗೆಂತಾ ದುಃ ಖ ಆಗಿರ್ಬೇಕು’’ ಅಂತೀವಿ.
ಯಾಕೆ ಹೀಗೆ? ಯಾಕೆ ಹೀಗೆ? ಇಷ್ಟೇ ಈಗಲೂ ನನ್ನನ್ನು ಕಾಡುತ್ತಿರುವುದು. ಕಣ್ಣೀರಿಟ್ಟರೆ ಮಾತ್ರಾ ನನಗೂ ದುಖಃವಾಗಿದೆ ಅಂತ ಅರ್ಥಾನಾ?. ಹಾಗಂತ ಅಳುವಿನ ಜಾಗದಲ್ಲಿ ನಗುವನ್ನು ಅದಲು ಬದಲು ಮಾಡಿ ಎನ್ನುವಷ್ಟು inhuman ಅಲ್ಲ ನಾನು. ನನ್ನ ಅನಿಸಿಕೆ ಇಷ್ಟೆ. ‘‘ಹೆಣ್ಣು ಅತ್ತೇ ದುಖಃ ತೋರಿಸಬೇಕು.... ಗಂಡು ಕಣ್ಣೀರು ನುಂಗಿಕೊಂಡೇ ಗಂಡಸಾಗಬೇಕು’’ ಎನ್ನುವ age old ಆಚರಣೆ ಇದೆಯಲ್ಲಾ ಅದರ ಬಗ್ಗೆ ಗಮನ ಹರಿಸಬೇಕಲ್ಲವಾ ಅಂತ. ನಾವು natural ಆಗಿ ಇರುವುದೇ ತಪ್ಪಾ?!
ಹೀಗೆ ಯೋಚಿಸುತ್ತಾ ಗೇಟ್ ಬಳಿ ಬಂದಾಗ, ಫೈನಲ್ ಇಯರ್ ಎಂ.ಬಿ.ಬಿ.ಎಸ್ ಓದುತ್ತಿರುವ ಮಾವನ ಮೊಮ್ಮಗ ಕಿರಣ್ ‘‘ಎ, ನಿನ್ನ ಹೇರ್ ಸ್ಟೈಲ್ ಚೆನ್ನಾಗಿದೆ’ ಅಂತ ನನಗೆ ಹೇಳಿದ್ದು ಈಗ್ಯಾಕೆ ನೆನಪಿಗೆ ಬರುತ್ತಿದೆಯೋ ಗೊತ್ತಾಗುತ್ತಿಲ್ಲಾ!
ಅಂದ ಹಾಗೆ, ನಿಮ್ಮೊಡನೆ ಕೂತು ಒಂದು ಹಾಡು ಕೇಳಿ ಎಷ್ಟು ದಿನಗಳಾಯ್ತಲ್ಲ್ವಾ! ಹೂಂ, ‘‘ಹೂವೇ ಹೂವೇ ನಿನ್ನೀ ನಗುವಿಗೆ ಕಾರಣವೇನೆ ಸೂರ್ಯನ ನಿಯಮಾನೇ... ಚಂದ್ರನ ನೆನಪೇನೆ....’’ ಹಾಡು ಕೇಳೋಣವಾ? ಅಯ್ಯೋ ಹಾಡು ಕೇಳುತ್ತಾ ಮೈ ಮರೆತ್ಬಿಡ್ಬೇಡಿ ತಯಾರಾಗಿ ಸುಶೃತಳ birthday partyಗೆ ಹೋಗಬೇಕಲ್ಲ.











Click it and Unblock the Notifications