ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮೇಲ್ ಗೆಳತಿ ಯಾಕ್ಹೀಗ್ ಒದ್ದಾಡ್ತೀ?!

By Staff
|
Google Oneindia Kannada News


ಸಂತೋಷಂ ಪರಮಾಸ್ಥಾಯ ಸುಖಾರ್ಥಿ ಸಂಯತೋ ಭವೇತ್| ಸಂತೋಷಮೂಲಂ ಹಿ ಸುಖಂ ದುಖಃಮೂಲಂ ವಿಪರ್ಯಯಃ|| (ಮನು ಸ್ಮೃತಿ ೪-೧೨) ಓಹ್, ಇದು ತುಂಬಾ ದೊಡ್ಡ ಮಾತು. ಅರ್ಥೈಸಿಕೊಳ್ಳೋಕ್ಕೆ ದೊಡ್ಡವರೇ ಆಗಬೇಕು. ಆದರೆ ಇಷ್ಟಂತೂ ಗೊತ್ತು ecstacy ಅನ್ನೋದು ಮಾರುಕಟ್ಟೆಯಲ್ಲಿ ಸಿಕ್ಕೋಲ್ಲ. ಅದು ಹೃದಯದಲ್ಲಿ ಹುಟ್ಟಿ ಮೈ-ಮೆದುಳನ್ನು ಆವರಿಸಿಕೊಂಡು ಆತ್ಮವನ್ನು elevate ಮಾಡುತ್ತೆ ಅಂತ!



Perfect, Balancing Act!!ಅವಳು ನನ್ನ ಈ ಮೇಲ್ ಗೆಳತಿ. ನಿತ್ಯವೂ ಒಂದು, ಎರಡು, ಒಮ್ಮೊಮ್ಮೆ ಮೂರು, ನಾಲ್ಕು ‘ಈ’ ಸಂದೇಶಗಳು ನಮ್ಮ ನಡುವೆ ಈಜಾಡುತ್ವೆ. ನೆನ್ನೆ ಬಂದ ಅವಳ ಮೇಲ್ ಸಾಲುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ, ಓಕೆ ಅಂತೀರಿ ತಾನೆ?!

“ನಾನೀಗ ಕಾಲೇಜ್‍ನಲ್ಲಿ ಪಾಠ ಮಾಡ್ತೀನಿ. ದಿನಾ ಮನೆಗೆ ಬರೋದು ಸಂಜೆ ಆಗುತ್ತೆ. ಹಾಗಾಗಿ ನಿತ್ಯದ ಈ ಮೇಲ್ ಸಂಭಾಷಣೆಯಲ್ಲಿ ಸ್ವಲ್ಪ ಏರುಪೇರು. ಕೈ ತುಂಬಾ ಸಂಬಳ. ಸ್ಟೂಡೆಂಟ್ಸ್ ಎಲ್ಲಾ ತುಂಬಾ ಹಚ್ಚ್ಕೊಂಡ್ಬಿಟ್ಟಿದ್ದಾರೆ. ನೆಂಟರಿಷ್ಟರೆಲ್ಲಾ ನೀನೆಷ್ಟು ಜಾಣೆ ಅಂತ ಹೊಗಳಿದಾಗ ಒಳಗೆ ಖುಷಿ ಹಾರ್ಮೋನುಗಳ ಮಳೆ ಹುಯ್ಯುತ್ತೆ. ಕಮಟಲು ವಾಸನೆ ಬರೋಕ್ಕೆ ಶುರು ಮಾಡಿದ್ದ ಸೀರೆ ರವಿಕೆಗಳಿಗೆಲ್ಲಾ ಈಗ ಬಿಸಿಲು ಬೆಳಕಿನ ಝಳಕ. ಅಂತೂ ನನ್ನ ನೆಚ್ಚಿನ ಕೋರ್ಸ್ ಮಾಡಿ ನಂಬರ್ ವನ್ ಸ್ಟೂಡೆಂಟ್ ಅಂತ ಅನ್ನಿಸಿಕೊಂಡಿದ್ದಕ್ಕೆ ಸಾರ್ಥಕ ಆಯ್ತು ಅನ್ನಿಸುತ್ತಿದೆ.

ನಾನು ಬರೋವರೆಗೋ ಮಕ್ಕಳ ಜೊತೆ ಇರೋಕ್ಕೆ ಒಬ್ಬಾಕೆನ ಗೊತ್ತು ಮಾಡಿದ್ದೀನಿ.ಉಳಿದದೆಲ್ಲಾ ಯಥಾಪ್ರಕಾರ ನನ್ನದೇ ಅನ್ನು. ಈ ಟ್ರ್ಯಾಫಿಕ್ಕು, ಪೊಲ್ಯೂಷನ್ನು, commitment, ambitionಗಳ pressureನಲ್ಲಿ ಮನೆಗೆ ಬರೋಷ್ಟರಲ್ಲಿ ಈ ದೇಹ ಹಾಸಿಗೆ ದಿಂಬು ಹುಡುಕ್ತಾಯಿರುತ್ತೆ. ಮಕ್ಕಳ ಮೇಲೆ ಸುಮ್ಸುಮ್ನೆ ರೇಗಾಡ್ತಿರ್ತೀನಿ. ಅವರಪ್ಪನ ಹತ್ರ ಹೋಗಿ ಎಷ್ಟು ದಿನ ಆಯ್ತು ಅಂತ ಲೆಕ್ಕ ಸಿಕ್ಕ್ತಿಲ್ಲ. ಅತ್ತೆ ಮಾವ ಇರಲಿ ಅಮ್ಮನಿಗೆ ಫೋನ್ ಕೊಡ ಮಾಡಿಲ್ಲ.

ಮೊನ್ನೆ ನನ್ನ ತಂದೆ ಬಂದಾಗ ನಾನಿರ್ಲಿಲ್ಲ್ವಲ್ಲ ಕೆಲಸದವಳೇ ಟೀ ಮಾಡಿಕೊಟ್ಟ್ಳು. ಮುಂಚಿನ ಹಾಗೆ ನ್ಯೂಸ್ ಪೇಪರ್‍ನ ಡೀಟೈಲ್ ಆಗಿ ಓದಕ್ಕಾಗ್ತಿಲ್ಲ. ಜೆನರಲ್ ನಾಲೆಡ್ಜ್ ಇರಲಿ ನನ್ನ favourite ಹಾಡುಗಳು ಸಹ ಮರೆತುಹೋಗುತ್ತಿವೆ. ಪಕ್ಕದ್ಮನೆ ಮೀನ ಜೊತೆ ಯಾವಾಗ ಮಾತಾಡಿದ್ದೆ ಅನ್ನೋದೂ ನೆನಪಾಗ್ತಿಲ್ಲ. ಹಬ್ಬ ಹರಿದಿನ ಎಲ್ಲಾ ಕಟ್ ಶಾರ್ಟ್ ಆಗಿವೆ. ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಬೆಳೀತಿದೆ. ದೊಡ್ಡ ಮಗಳಿಗೆ ಹೋದ್ವಾರದ ಪರೀಕ್ಷೆಲ್ಲಿ ಕಡಿಮೆ ಮಾರ್ಕ್ಸ್ ಬಂದಿದೆ. ಆದರೆ ನನ್ನ ವಿದ್ಯೆ ಪ್ರಯೋಜನಕ್ಕೆ ಬರ್ತಿದೆ.

ಎಷ್ಟೋ ಸರ್ತಿ ಅಂದ್ಕೋತೀನಿ ನಾನು ಯಾಕೆ ಕೆಲಸಕ್ಕ್ಹೋಗ್ಬೇಕು ಅಂತ. ನಿನಗೇ ಗೊತ್ತು ಊಟ ಬಟ್ಟೆಗಾಗಿ ದುಡಿಯೋ ಅವಶ್ಯಕತೆನೇ ಇಲ್ಲ ನನಗೆ. ತಕ್ಕಮಟ್ಟಿಗೆ ನಾನು financially ಸುರಕ್ಷಿತಳೂ ಹೌದು. ಆದ್ರೂ ಯಾಕೆ ಕೆಲಸಕ್ಕ್ಹೋಗ್ಬೇಕು ಅಂತ? ಗಂಡ ಮನೆ ಮಕ್ಕಳಲ್ಲಿ ನಾನು ಕಳೆದು ಹೋಗ್ತೀನಿ ಅಂತಾನಾ? ಹಾಡು ಹಸೆ, ಪೇಂಟಿಂಗ್ ಡ್ರಾಯಿಂಗ್ ಮಾಡ್ಕೊಂಡು ಹಾಯಾಗಿದ್ದರೆ ತುಂಬಾ ಕಳಪೆ ಅಂತಾನಾ? ಇಲ್ಲ ಸಮಾಜ ನನಗೆ ಬೆಲೆ ಕೊಡ್ಲೀ ಅಂತಾನಾ? ಅಥವಾ ನಾನು ಓದಿದ ವಿದ್ಯೆ ವೇಸ್ಟ್ ಆಗ್ದಿರ್ಲೀ ಅಂತಾನಾ? ಈ ಪ್ರಶ್ನೆಗಳೇ ನನ್ನನ್ನು ಕಿತ್ತು ತಿನ್ನೋಕೆ ಶುರು ಮಾಡಿವೆ. ನನಗೆ ಗೊತ್ತು ಜೀವನದಲ್ಲಿ ಕೊನೆವರೆಗೂ ಕಲಿತಾನೇ ಇರ್ಬೇಕು ಅಂತ ಆದರೆ ನೀನೇ ಹೇಳು ಕಲಿತ ವಿದ್ಯೆಯನ್ನು ಉಪಯೋಗಿಸಲೇ ಬೇಕಾ? ಹೀಗೂ ಅನ್ನಿಸುತ್ತೆ, ಅವಶ್ಯಕತೆ ಇರುವವರಿಗೆ ಕೆಲಸ ಸಿಗ್ಲಿ. ನಾನು ತೆಪ್ಪಗೆ ಸುಖವಾಗಿ ಸಂತೋಷವಾಗಿ ಮನೆ ಮಾಡಿಕೊಂಡು ಇರೋಣ ಅಂತ. ಆದರೆ ಹಿಂದೇನೇ ದೊಡ್ಡ ದೊಡ್ಡ ಕೆಲಸದಲ್ಲಿರೋ ನನ್ನ ಫ್ರೆಂಡ್ಸ್ ನೆನಪಾಗಿ ಬಿಡ್ತಾರೆ ಏನ್ಮಾಡ್ಲಿ ಹೇಳು?

ಒಮ್ಮೆ ಅಂದ್ಕೋತೀನಿ ನಾನು ಮೊದಲೇ ಹೆಚ್ಚು ಸಂತೋಷವಾಗಿದ್ದೆ ಅಂತ. ಒಮ್ಮೆ ಅಂದ್ಕೋತೀನಿ ಇಲ್ಲ ನಾನು ಈಗ double ಸಂತೋಷವಾಗಿದ್ದೀನಿ ಅಂತ. ಆದ್ರೆ ನಿನಗೆ ಈ ಸಾಲುಗಳನ್ನು ಬರೀಬೇಕಾದ್ರೆ ಏನನಿಸ್ತಿದೆ ಗೊತ್ತಾ? ಸಂತೋಷ ಅನ್ನೋದು ನಮ್ಮ ಅವಶ್ಯಕತೆಗಳ ಮಿತಿಯನ್ನು ಕಂಡ್ಕೊಳ್ಳೋದ್ರಲ್ಲಿದೆ ಅಂತ. ನಾನು ಸಂತೋಷವಾಗ್ದ್ದೀನಾ ಹೇಳು ಸಖಿ. . . . . ?”

ಹೂಂ. . . .ರಿಪ್ಲೈ ಒತ್ತದೆ ಕಂಪ್ಯೂಟರ್ಅನ್ನು standby modeಗೆ ಹಾಕಿ ಗಾಳಿ ಸೇವನೆಗೆ ಕಿಟಕಿ ಬಳಿ ಬಂದೆ. ಪಕ್ಕದ ಬಿಲ್ಡಿಂಗ್ ಮೇಲೆ ಮೊನ್ನೆ ಹದಿನೈದರಂದು ಹಾರಿಸಿದ್ದ ಬಾವುಟ ಮಳೆಯಲ್ಲಿ ನೆಂದು ತೊಪ್ಪೆ ಆಗಿತ್ತು. ಅದನ್ನು ನೋಡ್ತಾ ನನ್ನ ಮನಸ್ಸು ಖಾದಿ ಟೋಪಿ ಹಾಕ್ಕೊಂಡು ಸ್ತ್ರೀ ಶೋಷಣೆ, ಆರ್ಥಿಕ ಸಮಾನತೆ ಹಾಗೆ ಹೀಗೆ ಅಂತ ಒಂದೈದ್ನಿಮಿಷ ಭಾಷಣ ಮಾಡಿತು. ಒಂದು ಕ್ಷಣ ಮಹಿಳಾ ಸ್ವಾತಂತ್ರ್ಯದ ಘೋಷಣೆಯೊಂದಿಗೆ ಮುಂಚೂಣಿಯಲ್ಲಿರುವ ನಾಯಕೀಮಣಿಯಾಗಿದ್ದೆ! ಈಗ ಮಾತ್ರ ತುಟಿಯಂಚಿನ ನಗುವಿನೊಂದಿಗೆ ನಿಮ್ಮ ಬಳಿ ಬಂದಿದ್ದೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X