ಇದು 60/40 ರೂಲು!ಓಹ್, ನಿಮಗೆ ಗೊತ್ತೇ ಇದೆಯಲ್ಲ?!
ಕಣ್ಣುಗಳು ಇರಬೇಕಾದಷ್ಟು ದೊಡ್ಡದು. ಕಿವಿ ಸಾಕಷ್ಟು ದೊಡ್ದದು. ಬಾಯಿ ತುಸು ಹೆಚ್ಚೇ ಎನಿಸುವಷ್ಟು ದೊಡ್ಡದು. ಆದರೆ ಮೌನ ಎಲ್ಲಕ್ಕಿಂತ ದೊಡ್ದದು. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಮಾತು ಹಳೇ ಸತ್ಯ. ಈಗೇನಿದ್ದರೂ 60/40 ರೂಲು. . . . . .
ನಿಮ್ಮನ್ನು ಪ್ರಿಯ ಓದುಗರೇ ಅಂತ ಸಂಭೋದಿಸಿ, ನಿಮಗೊಂದು ಪತ್ರ ಬರಿಬೇಕೂಂತ ಬಹಳ ದಿನಗಳಿಂದ ನನಗೊಂದು ಆಸೆ ಇತ್ತು. ಆದರೆ ಪ್ರತೀ ಪ್ರಹರದಲ್ಲೂ ನೀವು ನಾವೇ ಇದ್ದೀವಿ ನಿನ್ನ್ಹತ್ರ ನಿಂಗ್ಯಾಕೆ ಆ ಆಸೆ ಅಂತ ಕೇಳ್ತಾನೇ ಇದ್ದ್ರೀ. ಅದೂ ಸರಿ ನಾನು- ನೀವು ಎಷ್ಟೊಂದು ಸಮೀಪದಲ್ಲೇ ಇದ್ದೇವೆ, ನನಗೆ ಬೇಕು ಅಂದಾಗಲೆಲ್ಲ ನಿಮ್ಮೊಡನೆ ಮಾತಾನಾಡುವಷ್ಟು ಅಳತೆಯಲ್ಲೇ ನೀವಿದ್ದೀರ ಅಂದ ಮೇಲೆ ಪತ್ರ ಯಾಕ್ಬೇಕು ಅಲ್ಲ್ವಾ?
ಅಲ್ಲದೆ ಆ ರೀತಿಯೆಲ್ಲ ಪತ್ರ ಬರೆಯಲು ನಾನೇನು ಸಾಹಿತಿಯೇ ಮತ್ತು ನೀವೇನು ಓದುಗರೇ?! ನಿಜಕ್ಕೂ ನೀವು ಓದುಗರಲ್ಲ ಕೇಳುಗರು! ನಿಮ್ಮ ತಾಳ್ಮೆಗೆ, ಸಹೃದಯತೆಗೆ ಏನೂ ಮೆಚ್ಚಿ ಅಹುದು ಎನ್ನಲೇ ಬೇಕು. ಅಂದಮೇಲೆ ನಾನು ಕೃತಜ್ಞತೆ ಹೇಳದಿದ್ದರೆ ಹೇಗೆ? ಹೀಗೆ ಯೋಚಿಸುತ್ತಾ ಇದ್ದೆ ಅದು ಕಣ್ಣಿಗೆ ಬಿತ್ತು. ಮೆದುಳು ಹೊಕ್ಕಿತು. ಏನದು?!. . . . .
ನಾನು ಆ ಪುಸ್ತಕ ಓದಿದೆ ಈ ಪುಸ್ತಕ ಓದಿದೆ ಅಂತ ಮಾತು ತೆಗ್ದಾಗ್ಲೆಲ್ಲ ನೀವುಗಳು ಹೇಗೂ ನನ್ನನ್ನು ಜಂಭದ ಕೋಳಿ ಅಂತ ರೇಗಿಸಿಯೇ ರೇಗಿಸ್ತೀರ ಗೊತ್ತಿದೆ. ಆದರೂ ನಿಮ್ಮ್ಹತ್ರ ಯಾಕೋಪ್ಪ ಏನು ಹೇಳ್ಕೊಳ್ಳೋಕ್ಕೂ ಸಂಕೋಚಾನೇ ಆಗಲ್ಲ. ಇದ್ದದ್ದನ್ನ ಇದ್ದ ಹಾಗೆ ಬಡಬಡಿಸಿಬಿಡ್ತೀನಿ. ಈಗೇನು ಬಡಾಯಿ ಅಂತೀರಾ? ಹೇಳ್ತೀನಿ ಇರಿ. ಮೊನ್ನೆ ಯಾವುದೋ ವ್ಯಕ್ತಿತ್ವ ವಿಕಸನದ ಬಗ್ಗೆ ಪುಸ್ತಕ ಓದ್ತಿದ್ದೆ. ಏನಂದ್ರೀ, ಯಾವ ಬುಕ್ಕು ಅಂತ ಕೇಳಿದ್ರಾ? ಯಾಕ್ಮರೆತ್ಬಿಟ್ಟ್ರಾ? ನಾನು ಓದೋದೆಲ್ಲಾ ನೀವುಗಳು ಓದಿಬಿಟ್ಟ ಪುಸ್ತಕತಾನೆ?! ಹಾಂ, ಆ ಬುಕ್‌ನಲ್ಲಿ ಏನಿತ್ತು ಅಂತ್ಕೇಳ್ತಿದ್ದೀರಾ?
ಅಬ್ಬ, ಒಂದ್ಲೈನ್ ಓದಿದ ತಕ್ಷಣ ನನಗೆಷ್ಟು ನಾಚಿಕೆ ಆಯಿತು ಗೊತ್ತಾ? ಒಂತರಹಾ ತಪ್ಪಿತಸ್ಥ ಭಾವನೆ ಕಾಡ್ತು. ಆ ಲೇಖಕ ಏನು ಬರೆದಿದ್ದ ಅಂದ್ರೆ ಬಾಯಿ ೪೦ ಪೆರ್ಸೆಂಟ್ ತೆಗಿಯೋ ಆಸೆ ಆದ್ರೆ ಕಿವಿಗಳನ್ನು 60 ಪೆರ್ಸೆಂಟ್ ತೆಗೆದಿರಬೇಕು ಅಂತ. ಆತ ಅದನ್ನು ನನ್ನ ಕುರಿತೇ ಬರೆದಿದ್ದಾನಾ ಅನ್ನಿಸಿಬಿಡ್ತು. ಅಲ್ಲ ನಿಮಗೆ ನನ್ನ ಮಾತು ಬೇಸರ ತರಿಸಿದ್ರೆ ನನಗೇ ನೇರವಾಗಿ ಹೇಳ್ಬಹುದಿತ್ತಲ್ಲಾ ಆ ರೈಟರ್ಗ್ಯಾಕ್ಹೇಳಿದ್ರಿ ನೀವು?!
ಇಲ್ಲ. . . ಇಲ್ಲ. . . ನನಗೊತ್ತು ನೀವು ಛಾಡಿಕೋರರಲ್ಲ! ನನ್ನ ಮಾತು ಹಿತವೆನಿಸಿದಾಗ ಓ ಸಖಿ ಪ್ರಾಣ ಸಖಿ ಅಂತ ಮುದ್ದಿಸಿದ್ದೀರ. ಕಾಲೆಳೀಬೇಕು ಅನ್ನಿಸಿದಾಗ ಬುರುಡೆ ಸಖಿ ಅಂತ ನಾಮಕರಣ ಮಾಡಿದ್ದೀರ. ಸಿಟ್ಟಾದಾಗ ಬಾಯಿಮುಚ್ಚು ಅಂತಾನೂ ಗದರಿದ್ದೀರ. ಏನೋ ಹೇಳಲು ಹೋಗಿ ಅದು ಇನ್ನೇನೋ ಆದೀತು ಎನ್ನಿಸಿದಾಗ ದಿವ್ಯಮೌನವಹಿಸಿ ನೀರವತೆಯನ್ನೂ ಸುಶ್ರಾವ್ಯಗೊಳಿಸಿದ್ದೀರ. ಈ ಮನೋಸಂವಾದದ ಸರಪಳಿಯನ್ನು ಎರಡೂ ಕಡೆಯಿಂದಲೂ ತಬ್ಬಿ ಹಿಡಿದ್ದಿದ್ದೀರ. ನಿಸತ್ವವನ್ನು ಗೋಚರಪಡಿಸುತ್ತಾ ಸತ್ವದೆಡೆಗಿನ ನನ್ನ ಪ್ರಯಾಣದಲ್ಲಿ ನಿಮ್ಮ ಸಾಹಚರ್ಯ ನೀಡಿದ್ದೀರ. ಒಮ್ಮೆ ಬರಸೆಳೆದು ಒಪ್ಪಿದ್ದೀರ, ಮತ್ತೊಮ್ಮೆ ದೂರಕ್ಕೆ ದೂಡಿದ್ದೀರ ಆದರೂ ನನ್ನ ಜೊತೆಯಲ್ಲೇ ಇದ್ದೀರ.
ಎಷ್ಟೋ ದಿನಗಳಿಂದ ನನ್ನ ಮಾತಿಗೆ ಶ್ರವಣರಾಗಿ ನನ್ನನ್ನು ಶಮದಮೆಯನ್ನಾಗಿಸಿದ್ದೀರ! ನಾನೇನಾದ್ರು ನಿಜಕ್ಕೂ ನಿಮಗೆ ಪತ್ರ ಬರೆದಿದ್ದರೆ ಅದನ್ನು ಇತಿ ನಿಮ್ಮ ಗಗನಸಖಿ ಅಂತ ಕೊನೆಮಾಡ್ತಿದ್ದೆ. ಆದರೆ ಇದು ಪತ್ರ ಅಲ್ಲ್ವಲ್ಲ! ಇದು ಏನಿದ್ದರೂ, ನೀವೇ ಕಣ್ತುಂಬಿ, ಕಿವಿತುಂಬಿ, ಮನ-ತಲೆತುಂಬಿ ವಚನವಾದ ಆಲೋಚನಾ ಗೂಡು.
ಇಷ್ಟೆಲ್ಲಾ ಕೊಟ್ಟ ನಿಮ್ಮ ಬಾಯಿಗೆ ನಾನು ಕಿವಿಯಾಗಬೇಡವೇ? ಹಾಗಾಗಿ ಈ ಕ್ಷಣ ನನ್ನದು 60/40 ರೂಲು! ನಾನು ಕೇಳುತ್ತೇನೆ ನೀವು ಮಾತನಾಡಿ. . ಹೀಗೇ ಮಾತನಾಡುತ್ತಲೇ ಇರಿ. . . .ನನ್ನನ್ನು ದಿಣ್ಣೆ, ಗುಡ್ಡ, ಬೆಟ್ಟಗಳಿಂದ ಪರ್ವತಶಿಖರಕ್ಕೆ ನಿಮ್ಮೊಡನೆ ಕರೆದುಕೊಂಡುಹೋಗಿ. . . . .ನಾನು ಎಲ್ಲಿಯೇಇದ್ದರೂ ಬನ್ನಿ ಮಾತನಾಡುತ್ತಿರೋಣ. ಮಾತುಗಳನ್ನಾದರೂಹಂಚಿಕೊಂಡು ಹಗುರಾಗುತ್ತಿರೋಣ.












Click it and Unblock the Notifications