ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಡ್ರೆಸ್ಸಿಂಗ್‌ ರೂಂ ಕನ್ನಡಿಯಲ್ಲಿ ಕಂಡೆ ನಿನ್ನ ಬಿಂಬ!

By Staff
|
Google Oneindia Kannada News


‘ನಾವು ನಮ್ಮಿಷ್ಟ’ ಅನ್ನೋದು ಒಂದು ಹಂತದ ತನಕ ಸರಿ! ‘ಹಳೇ ಕಾಲದ ಪಂಡರಮ್ಮನಂತೆ, ಮುಖಕ್ಕೆ ಅರಿಶಿಣ ಮೆತ್ತಿಕೊಂಡು, ಈಗಲೂ ಸೀರೆಗೆ ನೇತು ಬೀಳಬೇಕಾದ ಅನಿವಾರ್ಯತೆ ಏನಿಲ್ಲ’ ಅನ್ನೋ ವಾದವನ್ನು ಬೆಂಗಳೂರು, ಮೈಸೂರು, ಮಂಗಳೂರು ಮತ್ತು ನಿಮ್ಮೂರಿನ ಹೆಂಗೆಳೆಯರು ಶುರು ಹಚ್ಚಿಕೊಂಡಿದ್ದಾರೆ.... ಸರೀನೇ. ಆದರೆ, ಪ್ರೆಸೆನ್ಸ್‌ ಆಫ್‌ ಮೈಂಡ್‌ ತರಹ ಪ್ರೆಸೆನ್ಸ್‌ ಆಪ್‌ ಗೆಟ್‌ಅಪ್ಪೂ ಇರಬೇಕಂತೀನಿ ನಾನು...

Beauty is being timelyಯಥಾ ಪ್ರಕಾರ ಊರು ಸುತ್ತಲು ಹೋಗಿದ್ದೆ. ಆ ಊರಿನಲ್ಲಿ ನನ್ನ ಕುಟುಂಬದ ಅತೀ ಹಿರೀತಲೆ ಇರುವುದು ಗೊತ್ತಿತ್ತು. ಶಿಷ್ಟಾಚಾರ, 92 ವರ್ಷದ ಅಜ್ಜಿಯನ್ನು ನೋಡಿಯೇ ಬಿಡಲು ಹೋದೆ. ಕ್ಷೇಮ ಸಮಾಚಾರ ಜೊತೆಗೊಂದಿಷ್ಟು ಹಳೆ ವಿಚಾರ ವಿನಿಮಯವಾಯ್ತು.

ಅಜ್ಜಿಯ ಸೊಸೆ ಕಮಲ ನನ್ನ sight seeingಗೆ guide ಅಂತ ಅಜ್ಜಿ ತೀರ್ಮಾನಿಸಿದರು. ನನಗೆ ಬಿಡಿ, ಮಾತಿಗೊಬ್ಬರು ಜೊತೆ ಸಿಕ್ಕರೆ ಸಾಕು ಯಾರಾದರೇನು! ಹೂಂಗುಟ್ಟಿ ಸೊಗಸಾದ ಕಂಬಗಳ ಪಡಸಾಲೆಯಲ್ಲಿ ಆಕೆ ತಯಾರಾಗಿ ಬರುವುದನ್ನು ಕಾಯುತ್ತಾ ನಿಂತೆ. ಐದಾಯ್ತು, ಹತ್ತಾಯ್ತು ಹದಿನೈದು ನಿಮಿಷಗಳಾಯ್ತು ಆಕೆಯ ಸುಳಿವೇಯಿಲ್ಲ. ಅಷ್ಟು ಹೊತ್ತು ತುಟಕ್‌ಪಿಟಿಕ್‌ ಅನ್ನದೇ ನಿಂತಿದ್ದ ನನ್ನ ಸ್ಥಿತಿ ಏನಾಗಿರಬಹುದು ಅಂತ ನಿಮಗೆ ಬಿಡಿಸಿ ಹೇಳ ಬೇಕಾಗಿಲ್ಲ. . . .

ಬಾಗಿಲಿನೊಳಗೆ ಹಾಗೇ ಬಗ್ಗಿ ನೋಡಿದೆ, ಅರೆ, ಆಕೆ readyಯಾಗಿ ನಿಂತಿದ್ದಾರೆ ನನ್ನ ಮುಖ ನೋಡಿ ‘ಬರ್ರೀ, ತಲೆ ಬಾಚಿ ಹೂ ಮುಡಿದು ತಯಾರಾಗ್ರೀ. . . ಹೋಗೋಣಂತೆ’ ಅಂದರು. ಅಂದ್ರೆ ಅವರ ಕಣ್ಣಿಗೆ ನಾನು ತಯಾರಾಗಿ ಬಂದಿರುವಂತೆ ಕಾಣ್ತಿಲ್ಲ! ದೇವ್ರೇ, ನನ್ನ ಕಾಲಿನಲ್ಲಿದ್ದ ಬ್ರ್ಯಾಂಡ್‌ ನ್ಯೂ ಷೂಜ‚್‌, ತಲೆ ಮೇಲಿದ್ದ ಬಿಸಿಲು ಕನ್ನಡಕ, ಕೂದಲಿಗೆ ಹಾಕಿದ್ದ butterfly ಕ್ಲಿಪ್‌ ಯಾವುದೂ ನನ್ನನ್ನು ತಯಾರಾದಂತೆ ತೋರಿಸುತ್ತಿರಲಿಲ್ಲ! ಛೇ. . . . . . . . ತುಂಬಾ ಅಂದವಾಗಿ ಕಾಣುತ್ತಿದ್ದೇನೆ ಅಂತ ಹೊರಟಿದ್ದ ನಾನು ಅಳುಕಿನಿಂದಲೇ ಟೂರ್‌ ಮುಗಿಸಿ ಬಂದೆ. ಹಾಸಿಗೆ ಮೇಲೆ ಹಾಯಾಗಿ ಕಾಲು ಚಾಚಿ ಕೂತೆ ನೋಡಿ, ನೀವು ಮತ್ತು ನಿಮ್ಮೊಡನೆ ಆಡಬೇಕಿರುವ ಮಾತು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು!

ಸರಿ ಮತ್ತೆ, ಕಮಲಾಬಾಯಿ ಅವರ ಬಾಯಿಂದ ಬಂದ ಮಾತು ನನ್ನನ್ನು ಕಾಡದೆ ಬಿಡುತ್ತಾ? ಒಂದ್ನಿಂಷ ಜನರ ಕಣ್ಣಿಗೆ ನಾನು ಅಷ್ಟೊಂದು untidyಯಾಗಿ ಕಾಣ್ತೀನಾ ಅನ್ನಿಸ್ತು. ಕೂಡಲೇ ಗಾಳೆಮ್ಮನ ಗುಡಿಯ ರಥೋತ್ಸವಕ್ಕೆ ಜೀನ್ಸ್‌ ಪ್ಯಾಂಟ್‌, ತೋಳಿಲ್ಲದ ಟೀ ಶರ್ಟ್‌ ಹಾಕಿಕೊಂಡು ಬಂದಿದ್ದ ಪದ್ಮಜ ನೆನಪಾದಳು. ಆ ದಿನ, ರಥವನ್ನು ಹರಕೆ ಇದ್ದವರು, ಊರವರೆಲ್ಲಾ ಎಳೆದರೋ ಇಲ್ಲವೋ ಗೊತ್ತಿಲ್ಲ ಆದರೆ ಮಕ್ಕಳು ಮುದುಕರು ಭೇದವೇ ಇಲ್ಲದೆ ಅವಳನ್ನು ನೋಡುತ್ತಾ ನಿಂತಿದ್ದಂತೂ ಅಂಚಿನ ಸೀರೆ ಉಟ್ಟು, ಜಾಜಿ ಹೂವು ಮುಡ್ಕೊಂಡು ಏದುಸಿರು ಬಿಡುತ್ತಿದ್ದ ನನ್ನ ಕಣ್ಣಿಗಂತೂ ಬಿದ್ದಿತ್ತು!

ನಾವು ಯಾಕೆ ಹೀಗ್ಮಾಡ್ತೀವಿ? ದಿನಗಳುರುಳಿದಂತೆ ನಾವೆಲ್ಲಿ contemporaryಯಾಗಿ ಉಳಿಯಲಾರೆವೋ ಅನ್ನೋ ತರಾತುರಿಯಲ್ಲಿ ನಮ್ಮ ದೇಹದಾಕಾರಕ್ಕೆ, ಸಂದರ್ಭಕ್ಕೆ ಹೊಂದುತ್ತೋ ಇಲ್ಲವೋ ಯೋಚನೇನೇ ಮಾಡೊಲ್ಲ, ಸದಾಕಾಲ ಒಂದೇತರಹ ಡ್ರೆಸ್ಸ್‌ ಮಾಡ್ಕೊಂಡಿರ್ತೀವಿ. ಸರೀ ತಾನೆ ನಾನು ಹೇಳ್ತಿರೋದು? ಅಯ್ಯೋ. ಯಾಕೆ ಸಿಟ್ಟು ಮಾಡ್ಕೋತೀರಿ, ನೀವೆಲ್ಲಾರೂ ಹಾಗೇ ಅಂತ ನಾನು ಹೇಳ್ತಿಲ್ಲವಲ್ಲ.

ಭವಾನೀ ಕಂಗನ್ಸ್‌ ಮುಂದೆ ಮ್ಯಾಚಿಂಗ್‌ ಬಳೆಗಳಿಗೆ ಕ್ಯೂ ನಿಲ್ಲುವ ಸಾಂಸ್ಕೃತಿಕ ರಾಯಭಾರಿಗಳಾದ ನಾವು, ಮಾಂಗಲ್ಯವನ್ನು ಮಾತ್ರ outdatedಅಂತ ಇಷ್ಟ ಬಂದಾಗ ಬಿಚ್ಚಿಟ್ಟು ಬೀಗ್ತೀವಿ. ಪ್ಲಾಸ್ಟಿಕ್‌ ಬಿಂದಿಗಳಿಗೆ ನಮ್ಮದೇ ಡಿಸೈನ್‌ ಮಾಡಿಕೊಳ್ಳುವ ನಾವು ಹೂವು ಮುಡ್ಕೊಳ್ಳೋದನ್ನು ಮಾತ್ರ ಓಬೀರಾಯನ ಕಾಲದ್ದು ಅಂತ ದೂರ ತಳ್ಳುತ್ತೀವಿ. ಇದನ್ನಂತೂ ನೀವು ಒಪ್ಪುತ್ತೀರಿ ತಾನೆ?!

ನನ್ನ ಅನುಮಾನ ಏನು ಗೊತ್ತಾ, ನಾವು ಹೆಂಗಸರು, ನಮಗೆ ಏನು ಬೇಕು? ಏನು ಒಪುತ್ತೆ? ಯಾವ ಸಂದರ್ಭಕ್ಕೆ ಏನು ಸರಿಹೋಗುತ್ತೆ? ಅಂತ ಯೋಚನೆ ಮಾಡದೆ ಎಲ್ಲಿ ಅವರಿವರು ನಮ್ಮನ್ನು ಗಮನಿಸೋದಿಲ್ಲವೋ, ಅವರಿವರು ನಮ್ಮನ್ನು ಅಂದವಾಗಿ ಕಾಣ್ತಿದ್ದೀಯ ಅಂತ ಹೊಗೊಳೋದಿಲ್ಲವೋ ಅನ್ನುವ ಆತಂಕದಲ್ಲೆ ಇರ್ತೀವಾ ಅಂತಾ?! ನಾವುಗಳೆಲ್ಲ presentable ಆಗಿ ಇರಬೇಕು ಖಂಡಿತಾ ಒಪ್ಪುತ್ತೇನೆ ಆದರೆ beauty is being timelyಅನ್ನುವ ಪರಿಜ್ಞಾನವನ್ನು ಸಂಪೂರ್ಣ ಬೆಂಬಲಿಸುತ್ತೇನೆ ! ನೀವೇನಂತೀರ ? ನಾನು ಈಗ ‘‘ಬಹಿರಂಗ ನೋಟಕ್ಕಿಂತ ಅಂತರಂಗ ಸೌಂದರ್ಯ ಮುಖ್ಯ, ಅದನ್ನು ವೃದ್ಧಿಸಿ ಕೊಳ್ಳಿ, ಹಾಗೇ. . . ಹೀಗೇ. . . .’’ ಅಂತ ಭಾಷಣ ಬಿಗಿಬೇಕುಅನ್ನುವ ಉದ್ದೇಶ ಇಟ್ಟುಕೊಂಡಿಲ್ಲ. ಗಾಬರಿಯಾಗಬೇಡಿ.

ಆದರೆ, ಕನ್ನಡಿ ಮುಂದೆ ನಿಂತಾಗ ಮನಸ್ಸಿನಲ್ಲಿ ಏನೋ ತಳಮಳ ಕಾಡುತ್ತೆ ಅನ್ನುವ ನನ್ನ ಬಳಗವೇ, ಮುಂದಿನ ಬಾರಿ ತಯಾರಾಗಿ ಹೊರಹೊರಡುವ ಮುಂಚೆ ನನ್ನ ನೆನಪು ಮಾಡಿಕೊಂಡು ಒಮ್ಮೆ ಕನ್ನಡಿ ನೋಡಿಕೊಳ್ಳಿ. Lets be timely ಎನ್ನುವ ನನ್ನ ಮಾತನ್ನು ನಿಮ್ಮ ಧಿರಿಸು ಬಿಂಬಿಸುತ್ತಿದ್ದೆಯಾ ನೋಡಿಕೊಳ್ಳಿ ಸಾಕು. ನಾನು ಸರಿಯೆನಿಸಿದರೆ ಒಂದೆರಡು ಹೊಗಳಿಕೆಯನ್ನು ಗೀಚಿ ನನ್ನ ಬೆನ್ನು ತಟ್ಟಿ. ತಪ್ಪು ಎನ್ನಿಸಿದರೆ ನಿಮಗೆ ಬರೆಯಬೇಕೆನಿಸುವಷ್ಟು ಬರೆದು ತಿಳಿಸಿ. ನನ್ನನ್ನು ತಿದ್ದುಕೊಳ್ಳಲು ಕಾಯುತ್ತಿರುತ್ತೇನೆ. ಓದಿ ಉತ್ತರಿಸುತ್ತೇನೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X